ಕಾರ್ಕಳ: ನೈತಿಕ ಪೊಲೀಸ್‌ಗಿರಿ, ಐವರು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರ ಬಂಧನ
ಉಡುಪಿ, ಆಗಸ್ಟ್ 02: ಕಾರಿನಲ್ಲಿ ಹೋಗುತ್ತಿದ್ದ ವೈದ್ಯರು ಹಾಗೂ ಪ್ರಾಧ್ಯಾಪಕರನ್ನು ಅಡ್ಡಗಟ್ಟಿ ನೈತಿಕ ಪೊಲೀಸ್‌ಗಿರಿ ನಡೆಸಿದ ಆರೋಪದ ಮೇಲೆ ಐವರು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರನ್ನು ಬಂಧಿಸಿದ ಘಟನೆ ಕಾರ್ಕಳದಲ್ಲಿ ಸಂಭವಿಸಿದೆ.
ಮಂಗಳೂರಿನ ಕಾಲೇಜಿನ ನಾಲ್ವರು ವೈದ್ಯರು ಮತ್ತು ಅದೇ ಕಾಲೇಜಿನ ಇಬ್ಬರು ಮಹಿಳಾ ಪ್ರೊಫೆಸರ್ ಅವರೊಂದಿಗೆ ಒಂದೇ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಮಾಳ ಎಸ್.ಕೆ ಬಾರ್ಡರ್ ಬಳಿಯಿಂದ ಈವರು ಆರೋಪಿಗಳು ಇವರ ಕಾರನ್ನು ಹಿಂಬಾಲಿಸಿದ್ದಾರೆ. ಮತ್ತೊಂದು ಕಾರಿನಲ್ಲಿ ಬಂದಿದ್ದ ಆರೋಪಿಗಳು ಕಾರ್ಕಳದ ಕುಂಟಲ್ಪಾಡಿ ಎಂಬಲ್ಲಿ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.

ಈ ವೇಳೆ ಕಾರಿನಲ್ಲಿದ್ದ ಮಹಿಳೆಯರು ಆರೋಪಿಗಳ ವರ್ತಯಿಂದ ಭಯಗೊಂಡು ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧಾರದ ಮೇಲೆ ಘಟನಾ ಸ್ಥಳಕ್ಕೆ ದೌಡಾಯಿಸಿದ ಕಾರ್ಕಳ ಗ್ರಾಮಾಂತರ ಪೊಲೀಸರು ಪ್ರಕರಣದ ವಿವರ ತಿಳಿದು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಗಳೂರಿನಿಂದ ಶೃಂಗೇರಿಗೆ ತೆರಳಿ ಕಾರ್ಕಳದ ಕುಂಟಲ್ಪಾಡಿ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದವರನ್ನು ವಿಭಿನ್ನ ಕೋಮಿನವರು ಎಂದು ತಿಳಿದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ. ಘಟನೆ ಸಂಬಂಧ ಸಂತೋಷ್ ನಂದಳಿಕೆ, ಕಾರ್ತಿಕ್ ಪೂಜಾರಿ, ಸುನೀಲ್ ಮೂಲ್ಯ ಮಿಯ್ಯಾರು, ಸಂದೀಪ್ ಪೂಜಾರಿ ಮಿಯ್ಯಾರು, ಸುಚಿತ್ ಸಫಲಿಗ ಎನ್ನುವಾತನನ್ನು ಬಂಧಿಸಲಾಗಿದೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
ಹಿಂದೂ ಯುವಕನನ್ನ ಮುಸ್ಲಿಂ ಎಂದು ತಿಳಿದು ನೈತಿಕ ಪೊಲೀಸ್ ಗಿರಿ
ಇನ್ನು ಇತ್ತೀಚಿಗೆ ಮಂಗಳೂರಿನಲ್ಲೂ ನೈತಿಕ ಪೊಲೀಸ್ ಗಿರಿ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಮಂಗಳೂರಿನ ಸ್ಥಳೀಯ ಖಾಸಗಿ ನ್ಯೂಸ್ ವೆಬ್ ಸೈಟ್ ವರದಿಗಾರನ ಮೇಲೆ ಆರೋಪಿಗಳು ನೈತಿಕ ಪೊಲೀಸ್ ಗಿರಿ ನಡೆಸಿರುವ ಘಟನೆ ಮಂಗಳೂರಿನ ಕಾವೂರು ಬಳಿಯ ರೆಸ್ಟೋರೆಂಟ್ ಬಳಿ ನಡೆದಿತ್ತು.
ಸ್ನೇಹಿತೆಯ ಜೊತೆ ಊಟಕ್ಕೆ ತೆರಳಿದ್ದ ವರದಿಗಾರ ಊಟ ಮುಗಿಸಿ ವಾಪಾಸ್ ಬರುತ್ತಿದ್ದ ವೇಳೆ ಏಕಾಏಕಿ ಎದುರಾದ ಯುವಕರು, ನೀನು ಬ್ಯಾರಿಯಾ? ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಹಿಂದೂ ಯುವಕನನ್ನ ಮುಸ್ಲಿಂ ಎಂದು ತಿಳಿದು ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಫ್ಐಆರ್ ದಾಖಲಿಸಿ ಕೋಟೇಕಾರು ನಿವಾಸಿ ಚೇತನ್ (37) ಹಾಗೂ ಯೆಯ್ಯಾಡಿ ನಿವಾಸಿ ನವೀನ್(43) ಎನ್ನುವಾತನನ್ನು ಪೊಲೀಸರು ಬಂಧಿಸಿದ್ದರು.












Click it and Unblock the Notifications