ಕೊರೊನಾ ಸೋಂಕಿತನ ಸಂಪರ್ಕ: ಉಡುಪಿಯ ಬಂಕ್ ಸೀಲ್ ಡೌನ್
ಉಡುಪಿ, ಏಪ್ರಿಲ್ 28: ಮಂಡ್ಯ ಜಿಲ್ಲೆಯ ನಾಗಮಂಗಲದ ಕೊರೊನಾ ವೈರಸ್ ಸೋಂಕಿತನನ್ನು ಸಂಪರ್ಕಿಸಿರುವ ಉಡುಪಿಯ ಜನರನ್ನು ಹೋಮ್ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.
ಅದರ ಜೊತೆಗೆ ಕೊರೊನಾ ಸೋಂಕಿತನು ಸ್ನಾನ ಮತ್ತು ಊಟಕ್ಕೆ ತಂಗಿದ್ದ ತೆಕ್ಕಟ್ಟೆಯ ಪೆಟ್ರೋಲ್ ಬಂಕ್ ನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಈ ವ್ಯಕ್ತಿ ಮುಂಬೈಯಿಂದ ಮಂಡ್ಯಕ್ಕೆ ಪ್ರಯಾಣಿಸುವಾಗ ಮಾರ್ಗಮಧ್ಯೆ ಉಡುಪಿಗೆ ಬಂದಿದ್ದನು.
ಗೂಡ್ಸ್ ಲಾರಿಯಲ್ಲಿ ಬಂದ ವ್ಯಕ್ತಿ ಉಡುಪಿಯ ತೆಕ್ಕಟ್ಟೆಯಲ್ಲಿ ಸ್ನಾನ, ತಿಂಡಿಗೆಂದು ಇಳಿದಿದ್ದ. ಅಲ್ಲಿಯೇ ಸ್ನಾನ ಮಾಡಿದ್ದ ಸೋಂಕಿತ ವ್ಯಕ್ತಿ, ಅಲ್ಲಿಂದ ಮಂಡ್ಯಕ್ಕೆ ಪ್ರಯಾಣ ಬೆಳೆಸಿದ್ದನು.

ಇದೀಗ ಮಂಡ್ಯ ಮೂಲದ ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿಯನ್ನು ಉಡುಪಿ ಪೊಲೀಸರು ಪತ್ತೆ ಹಚ್ಚಿದ್ದು, ಆತ ಇಳಿದಿದ್ದ ಗಣೇಶ್ ಪೆಟ್ರೋಲಿಯಂ ಬಂಕ್ ನ್ನು ಸೀಲ್ ಡೌನ್ ಮಾಡಿದ್ದಾರೆ ಮತ್ತು ಅಲ್ಲಿನ ಎಲ್ಲ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.
ಗಣೇಶ್ ಪೆಟ್ರೋಲಿಯಂ ಬಂಕ್ ಕುಂದಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿದೆ. ಕಳೆದೆರಡು ದಿನಗಳಿಂದ ಮಂಡ್ಯದ ಕೊರೋನಾ ಸೋಂಕಿತನ ಟ್ರಾವೆಲ್ ಹಿಸ್ಟರಿಗಾಗಿ ತಲೆಕೆಡಿಸಿಕೊಂಡಿದ್ದ ಉಡುಪಿ ಪೊಲೀಸರು, ನಿನ್ನೆ ರಾತ್ರಿ ಹೊತ್ತಿಗೆ ಆತ ತಂಗಿದ್ದ ಸ್ಥಳವನ್ನು ಪತ್ತೆಹಚ್ಚುವ ಮೂಲಕ ನಿಟ್ಟುಸಿರು ಬಿಟ್ಟಿದ್ದಾರೆ.












Click it and Unblock the Notifications