ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಪೇಜಾವರ ಶ್ರೀ
ಉಡುಪಿ, ನವೆಂಬರ್.24: ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಂದು ವರ್ಷದ ಒಳಗೆ ರಾಮ ಮಂದಿರ ಆಗಬೇಕು. ಈ ಬಗ್ಗೆ ಸುಪ್ರೀಂ ಕೋರ್ಟ್ ಜನಾಭಿಪ್ರಾಯದಂತೆ ಶೀಘ್ರ ತೀರ್ಮಾನಿಸಲಿ. ಎಲ್ಲದಕ್ಕೂ ನ್ಯಾಯಾಲಯವನ್ನು ಕಾಯುವುದಕ್ಕೆ ಸಾಧ್ಯವಿಲ್ಲ. ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಲಿ.
ಶ್ರೀ ರಾಮ ಮಂದಿರ ನಿರ್ಮಾಣದ ಕುರಿತು ದೃಢ ನಿರ್ಧಾರ ತೆಗೆದುಕೊಂಡರೆ ಕೇಂದ್ರ ಸರ್ಕಾರಕ್ಕೂ ಅನುಕೂಲವಾಗಲಿದೆ. ಮೋದಿ ಸರ್ಕಾರಕ್ಕೆ ಸಂಪೂರ್ಣ ಬಹುಮತವಿದೆ. ವಾಜಪೇಯಿ ಸರ್ಕಾರಕ್ಕಿಂತ ಹೆಚ್ಚು ಬಹುಮತ ಮೋದಿ ಅವರ ಸರಕಾರಕ್ಕಿದೆ. ಮಂದಿರ ವಿಚಾರದಲ್ಲಿ ವಿಪಕ್ಷ ಕಾಂಗ್ರೆಸ್ ಈಗ ವಿರೋಧ ಮಾಡಲಿಕ್ಕಿಲ್ಲ.

ಚುನಾವಣೆ ಹತ್ತಿರ ಇರುವುದರಿಂದ ಯಾರೂ ವಿರೋಧ ಮಾಡಲಿಕ್ಕಿಲ್ಲ. ವಿರೋಧ ಮಾಡುವ ಧೈರ್ಯ ಯಾರಿಗೂ ಇಲ್ಲ ಎಂದು ಶ್ರೀಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಮ ಮಂದಿರ ವಿಚಾರದಲ್ಲಿ ಕಾಂಗ್ರೆಸ್ ತಟಸ್ಥವಾಗಿ ಎಲ್ಲವನ್ನೂ ನೋಡುತ್ತಿದೆ. ಮಂದಿರ ವಿಚಾರವನ್ನು ಕಾಂಗ್ರೆಸ್ ವಿರೋಧಿಸಲೂ ಹೋಗುತ್ತಿಲ್ಲ. ಮಂದಿರ ನಿರ್ಮಾಣಕ್ಕೆ ಈಗ ಅನುಕೂಲವಾದ ವಾತಾವರಣವಿದೆ. ಕಾಂಗ್ರೆಸ್ ವಿರೋಧಿಸಿದರೆ ಪಕ್ಷಕ್ಕೆ ಪ್ರತಿಕೂಲ ಆಗಬಹುದು.

ರಾಮಮಂದಿರ ಒಂದು ಭಾವನಾತ್ಮಕ ವಿಚಾರ. ನಾಲ್ಕೂವರೆ ವರ್ಷ ಆಯ್ತು. ಇನ್ನು ಮಂದಿರ ಆಗಿಲ್ಲ. ನಾವು ಕಾದಿದ್ದೇವೆ, ಈಗ ಒತ್ತಾಯ ಮಾಡುತ್ತಿದ್ದೇವೆ.
ಅಯೋಧ್ಯೆ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಸಮಸ್ಯೆ ಬಗೆಹರಿಸಲು ಮೂರು ಮಾರ್ಗಗಳಿವೆ. ಸಂಯುಕ್ತ ಅಧಿವೇಶನದ ಮೂಲಕ ಸಮಸ್ಯೆ ಬಗೆಹರಿಸಬಹುದು.ಇನ್ನೊಂದು ಲೋಕಸಭೆ- ರಾಜ್ಯಸಭೆ ಅಧಿವೇಶನದಲ್ಲಿ ತೀರ್ಮಾನಿಸಬಹುದು. ಮೂರನೆಯದಾಗಿ ಮಂದಿರ ವಿಚಾರದಲ್ಲಿ ಕೇಂದ್ರ ಸರ್ಕಾರ ಸುಗ್ರಿವಾಜ್ಞೆಯನ್ನು ಹೊರಡಿಸಲಿ.
ಮಂದಿರ ವಿಚಾರವನ್ನು ನಾವು ಚುನಾವಣೆ ಸಂದರ್ಭದಲ್ಲಿ ಮಾತ್ರ ಚರ್ಚೆ ಮಾಡುತ್ತಿಲ್ಲ. ಸಂತರಿಗೆ ಚುನಾವಣೆಯ ಯಾವುದೇ ಅಗತ್ಯವಿಲ್ಲ. ಚುನಾವಣೆ ನಂತರ ಮುಂದೇನು ಎಂಬ ಪರಿಸ್ಥಿತಿ ಗೊತ್ತಿಲ್ಲ. ಈಗಲೇ ಮಂದಿರ ನಿರ್ಮಾಣ ಮಾಡಿ ಎಂದು ಪೇಜಾವರ ಶ್ರೀ ಕೇಂದ್ರ ಸರಕಾರವನ್ನು ಒತ್ತಾಯಿಸಿದರು.












Click it and Unblock the Notifications