ಅಯೋಧ್ಯೆ ತೀರ್ಪಿಗೆ ದಿನಗಣನೆ; ವಿಜಯೋತ್ಸವ ಬೇಡ ಎಂದ ಪೇಜಾವರ ಶ್ರೀ
ಉಡುಪಿ, ನವೆಂಬರ್ 7: ಅಯೋಧ್ಯೆ ತೀರ್ಪಿಗೆ ದಿನಗಣನೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಪೇಜಾವರ ಶ್ರೀಗಳು "ತೀರ್ಪು ಹಿಂದೂಗಳ ಪರ ಬರುವ ನಿರೀಕ್ಷೆ ಇದೆ. ಆದರೆ ಯಾರೂ ವಿಜಯೋತ್ಸವ ಮಾಡಬಾರದು. ತೀರ್ಪು ಹಿಂದೂಗಳ ಪರ ಬಂದರೆ ಮುಸ್ಲಿಂ ಸಮುದಾಯದ ಜೊತೆ ಶಾಂತಿಯಿಂದ ಇರಬೇಕು" ಎಂದಿದ್ದಾರೆ.
ಉಡುಪಿಯ ಪೇಜಾವರ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, "ವಿಶ್ವ ಹಿಂದೂ ಪರಿಷತ್ ಈ ಸಂಬಂಧ ನಿರ್ಣಯವೊಂದನ್ನು ತೆಗೆದುಕೊಂಡಿದೆ. ವಿಜಯೋತ್ಸವ ಮಾಡಿ ಯಾವುದೇ ಸಮುದಾಯದ ಶಾಂತಿಭಂಗ ಆಗಬಾರದು ಎಂಬುದೇ ನನ್ನ ಕಳಕಳಿ. ತೀರ್ಪು ಯಾರ ಪರ ಬಂದರೂ ಜನರು ಶಾಂತಿ ಕಾಪಾಡಬೇಕು. ಮೆರವಣಿಗೆ, ವಿಜಯೋತ್ಸವದಿಂದ ಘರ್ಷಣೆಗೆ ಅವಕಾಶವಾಗುತ್ತದೆ" ಎಂದು ಮನವಿ ಮಾಡಿದರು.

ಒಂದು ವೇಳೆ ಶಾಂತಿಭಂಗವಾದಲ್ಲಿ ಉಪವಾಸ ಕುಳಿತುಕೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಒಂದು ವೇಳೆ ಹಿಂದೂಗಳ ಪರ ತೀರ್ಪು ಬಂದರೆ ರಾಮಮಂದಿರ ನಿರ್ಮಾಣ ಆಗಲಿದೆ ಎಂದ ಪೇಜಾವರ ಶ್ರೀಗಳು, ತೀರ್ಪು ಬಂದ ಬಳಿಕ ಯಾವಾಗ ರಾಮಮಂದಿರ ನಿರ್ಮಾಣ ಮಾಡಲಾಗುವುದು ಎಂಬ ಬಗ್ಗೆ ಸಮಾಲೋಚನೆ ನಡೆಸುತ್ತೇವೆ ಎಂದರು.












Click it and Unblock the Notifications