Santosh Suicide Case: ಸಚಿವ ಕೆಎಸ್ ಈಶ್ವರಪ್ಪ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ
ಉಡುಪಿ, ಏಪ್ರಿಲ್ 12: ಉಡುಪಿಯಲ್ಲಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ಸಚಿವ ಈಶ್ವರಪ್ಪ ರಾಜೀನಾಮೆ ಪಡೆದುಕೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಕೆಎಸ್ ಈಶ್ವರಪ್ಪ ಸಚಿವ ಸ್ಥಾನದಲ್ಲಿ ಮುಂದುವರಿಯುವುದಕ್ಕೆ ಬಿಡಬಾರದು. ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕೂಡಲೇ ಕ್ಯಾಬಿನೆಟ್‌ನಿಂದ ವಜಾಗೊಳಿಸಬೇಕು ಎಂದಿದ್ದಾರೆ.
ನಾವು ಈ ಹಿಂದೆ ಪೊಲೀಸ್ ಅಧಿಕಾರಿ ಗಣಪತಿ ಆತ್ಮಹತ್ಯೆಯಲ್ಲಿ ಕೆ.ಜೆ. ಜಾರ್ಜ್ ರಾಜೀನಾಮೆ ನೀಡಿದ್ದರು. ಆಗಲೂ ಆರೋಪ ಅಷ್ಟೇ ಆಗಿದೆ. ಆದ್ದರಿಂದ ಕೂಡಲೇ ಈಶ್ವರಪ್ಪ ಅವರ ರಾಜೀನಾಮೆ ಪಡೆಯಬೇಕಿದೆ. ಏಕೆಂದರೆ ಇದೊಂದು ಗಂಭೀರ ಪ್ರಕರಣವಾಗಿದ್ದು, ಜೀವಾವಧಿ ಶಿಕ್ಷೆ ಅಥವಾ ಗಲ್ಲು ಶಿಕ್ಷೆಯಂತಹ ಶಿಕ್ಷೆ ವಿಧಿಸಬಹುದಾದ ಪ್ರಕರಣ ಎಂದು ಹೇಳಿದ್ದಾರೆ.

ಸಂತೋಷ್ ಪಾಟೀಲ್ ಆರೋಪದ ಬಗ್ಗೆ ಸಿದ್ದರಾಮಯ್ಯ ಉಲ್ಲೇಖ:
"ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಗುತ್ತಿಗೆದಾರ ಸಂತೋಷ್ ಪಾಟೀಲ್ ಬಿಜೆಪಿ ಕಾರ್ಯಕರ್ತರಾಗಿದ್ದಾರೆ. ಇವರು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹತ್ತಿರ ಒಂದು ರಸ್ತೆ ಕೆಲಸವನ್ನು ಪಡೆದಿದ್ದರು. ಅದಕ್ಕಾಗಿ ಕಮೀಷನ್ ಸಹ ಕೊಟ್ಟಿದ್ದರು. ಈಶ್ವರಪ್ಪ ಹೆಚ್ಚು ಕಮಿಷನ್ ಕೇಳಿದರು ಎಂಬುದು ಈಗಿರುವ ಆರೋಪವಾಗಿದೆ. ಈಗ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಸಾವಿಗೆ ನೇರವಾಗಿ ಈಶ್ವರಪ್ಪ ಕಾರಣ ಎಂದು ವಾಟ್ಸಾಪ್ ಮೆಸೇಜ್ ಬರೆದಿದ್ದಾರೆ. ಇದೊಂದು ರೀತಿ ಡೆತ್‌ನೋಟ್ ಇದ್ದ ಹಾಗೆ," ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆರೋಪವೇನು?:
ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಶೇ.40 ಕಮಿಷನ್ ಆರೋಪದ ಬಗ್ಗೆ ಡೆತ್‌ನೋಟ್ ಬರೆದಿಟ್ಟ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಈಗ ಉಡುಪಿಯ ಶಾಂಭವಿ ಲಾಡ್ಜ್‌ನ ರೂಮ್ ನಂಬರ್ 207ರಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಾಟ್ಸಾಪ್ ಸಂದೇಶದಲ್ಲಿ ಇರುವುದೇನು?
"ನನ್ನ ಸಾವಿಗೆ ನೇರ ಕಾರಣ ಕೆಎಸ್ ಈಶ್ವರಪ್ಪ, ಸಚಿವರು ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಕರ್ನಾಟಕ ಸರ್ಕಾರ ಇವರಿಗೆ ತಕ್ಕ ಶಿಕ್ಷೆ ಆಗಬೇಕು. ನನ್ನೆಲ್ಲ ಆಸೆಗಳನ್ನು ಬದಿಗೊತ್ತಿ ಈ ನಿರ್ಧಾರ ಮಾಡಿರುತ್ತೇನೆ. ನನ್ನ ಹೆಂಡತಿ ಮಗುವಿನೆ ಸರ್ಕಾರ ಎಂದರೆ ಮಾನ್ಯ ಪ್ರಧಾನಮಂತ್ರಿಗಳು ಮತ್ತು ಮಾನ್ಯ ಮುಖ್ಯಮಂತ್ರಿಗಳು ಹಾಗೂ ನಮ್ಮ ಹಿರಿಯ ಲಿಂಗಾಯತ ನಾಯಕರಾದ ಬಿ ಎಸ್ ಯಡಿಯೂರಪ್ಪನವರು ಹಾಗೆ ಅವರಿವರೆಂನದೆ ಎಲ್ಲರೂ ಸಹಾಯಹಸ್ತ ನೀಡಬೇಕೆಂದು ಕೈಮುಗಿದು ಕೇಳಿಕೊಳ್ಳುತ್ತೇನೆ. ಮಾಧ್ಯಮ ಮಿತ್ರರಿಗೆ ಕೋಟಿ ಕೋಟಿ ಧನ್ಯವಾದಗಳು. ನನ್ನ ಜೊತೆ ಬಂದ ಗೆಳೆಯರಾದ ಸಂತೋಷ್ ಮತ್ತು ಪ್ರಶಾಂತ್ ಗೆ ನಾನು ಪ್ರವಾಸ ಹೋಗೋಣ ಎಂದು ನನ್ನ ಜೊತೆಗೆ ಕರೆದುಕೊಂಡು ಬಂದಿರುತ್ತೇನೆ. ಅವರಿಗೂ ನನ್ನ ಸಾವಿಗೂ ಯಾವುದೇ ಸಂಬಂಧ ಇರುವುದಿಲ್ಲ," ಎಂದು ಸಂತೋಷ್ ಪಾಟೀಲ್ ಮಾಡಿರುವ ವಾಟ್ಸಾಪ್ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications