ಉಡುಪಿ ವಿಶೇಷ; 151 ಅನಾಥ ಶವದ ಅಂತ್ಯ ಸಂಸ್ಕಾರ ಮಾಡಿದ ನಾಗರಿಕ ಸಮಿತಿ
ಉಡುಪಿ, ಜೂನ್ 20; ನಿಜವಾದ ಅರ್ಥದಲ್ಲಿ 24*7 ಸಮಾಜ ಸೇವೆಯಲ್ಲಿ ತೊಡಗಿರುವ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಇಂದು ತನ್ನ ಸೇವೆಯಲ್ಲಿ ಹೊಸ ಮೈಲುಗಲ್ಲೊಂದನ್ನು ಸ್ಥಾಪಿಸಿತು.
ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡಲಾಗಿದ್ದ 4 ಅಪರಿಚಿತ ಶವಗಳ ಅಂತ್ಯಸಂಸ್ಕಾರವನ್ನು ನಡೆಸುವ ಮೂಲಕ ಸಮಿತಿಯು ನೂರೈವತ್ತಕ್ಕೂ ಹೆಚ್ಚು ಅನಾಥ ಶವಗಳ ಅಂತ್ಯಸಂಸ್ಕಾರ ಮಾಡಿದ ಅಪರೂಪದ ಮಾನವೀಯ ಸಾಧನೆಗೆ ಭಾಜನವಾಯಿತು.
ನಿತ್ಯಾನಂದ ಒಳಕಾಡು ಇದರ ಹಿಂದಿನ ರೂವಾರಿ. ನಿರ್ಗತಿಕರು, ಬಡವರು, ರೋಗಿಗಳಿಗಾಗಿ ಉಚಿತ ಅಂಬ್ಯುಲೆನ್ಸ್ ಸೇವೆ ನೀಡುತ್ತಿರುವ ಜಿಲ್ಲಾ ನಾಗರಿಕ ಸಮಿತಿಯು, ಹಲವು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದೆ.

ಅನಾರೋಗ್ಯಕ್ಕೀಡಾದ ನಿರ್ಗತಿಕರ ಸೇವೆ, ವಾರಸುದಾರರಿಲ್ಲದ ಶವಗಳ ವಿಲೇವಾರಿ ಕಾರ್ಯವನ್ನು ಹಲವು ಸಮಯಗಳಿಂದ ಮಾಡುತ್ತಾ ಬಂದಿದೆ. ಇಂದು ಒಂದೇ ದಿನ ಜಿಲ್ಲಾ ನಾಗರೀಕ ಸಮಿತಿ 4 ಅನಾಥ ಶವಗಳ ಅಂತ್ಯ ಸಂಸ್ಕಾರ ನಡೆಸಿತು.
ಬೀಡಿನಗುಡ್ಠೆ ದಫನ ಭೂಮಿಯಲ್ಲಿ ಕಾನೂನಿನ ಪ್ರಕ್ರಿಯೆಗಳು ನಡೆದ ಬಳಿಕ ಪೊಲೀಸರ ಸಮಕ್ಷಮದಲ್ಲಿ ಗೌರವಪೂರ್ವಕವಾಗಿ ಈ ಕಾರ್ಯ ನೆರವೇರಿಸಲಾಗಿದೆ. ಇದು ನಾಗರಿಕ ಸಮಿತಿಯು ನಡೆಸಿರುವ ಇದುವರೆಗಿನ 151ನೇ ಅನಾಥ ಶವಗಳ ಅಂತ್ಯಸಂಸ್ಕಾರವಾಗಿದೆ.

ಶವಗಳ ದಫನ ಕಾರ್ಯದಲ್ಲಿ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಸಮಾಜಸೇವಕ ಕ್ರಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ ಹಾಗೂ ಅವರ ಅಭಿಮಾನಿ ಬಳಗದ ಸದಸ್ಯರು, ರಾಮದಾಸ್ ಪಾಲನ್, ಸಾಜಿ ಅಜ್ಜರಕಾಡು ಭಾಗಿಗಳಾದರು.
ನಗರ ಠಾಣೆಯ ಪೊಲೀಸ್ ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು, ಮಣಿಪಾಲ ಠಾಣೆಯ ಸಿಬ್ಬಂದಿಗಳಾದ ವಿಶ್ವಜಿತ್, ಆದರ್ಶ್ ಕಾನೂನು ಪ್ರಕ್ರಿಯೆ ನಡೆಸಿದರು. ಜಿಲ್ಲಾಸರ್ಜನ್ ಮಧುಸೂದನ್ ನಾಯಕ್, ಪ್ಲವರ್ ಸ್ಟಾಲ್ ವಿಷ್ಣು, ಅಣ್ಣಪ್ಪ ಪೂಜಾರಿ ಕರಂಬಳ್ಳಿ, ಸುಶೀಲಾ ರಾವ್ ಉಡುಪಿ, ಹಾಗೂ ನಗರಾಡಳಿತದವರು ಈ ಮಾನವೀಯ ಕಾರ್ಯಕ್ಕೆ ಸಹಕರಿಸಿದ್ದಾರೆ.











Click it and Unblock the Notifications