ಮುರುಘಾ ಶ್ರೀ ಇಂಥ ಕೀಳು ಮಟ್ಟಕ್ಕೆ ಇಳಿಯುತ್ತಾರೆಂದು ತಿಳಿದಿರಲಿಲ್ಲ, ತಕ್ಕ ಶಿಕ್ಷೆಯಾಗಬೇಕು: ಬಿಎಸ್‌ವೈ
ಮಂಗಳೂರು, ನವೆಂಬರ್ 8: ಅಪ್ರಾಪ್ತ ಬಾಲಕಿಯರಿಗೆ ಕಿರಿಕುಳ ನೀಡಿದ ಆರೋಪದಲ್ಲಿ ಜೈಲು ಸೇರಿರುವ ಆರೋಪದಲ್ಲಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಯಡಿಯೂರಪ್ಪ, ಮುರುಘಾ ಶರಣರು ಮಾಡಿರುವುದು ಅಕ್ಷಮ್ಯ ಅಪರಾಧ , ಅವರಿಗೆ ಕಾನೂನು ಪ್ರಕಾರ ತಕ್ಕ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.
ಉಡುಪಿಯಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಈ ಕುರಿತು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಮುರುಘಾ ಶರಣರಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಪ್ರಕರಣದ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬಿಎಸ್‌ವೈ, "ಮುರುಘಾ ಶ್ರೀ ಕ್ಷಮಿಸಲಾರದ ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಅವರು ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಎಲ್ಲರೂ ಅವರ ಕೃತ್ಯವನ್ನು ಖಂಡಿಸಬೇಕು. ಅವರಿಗೆ ತಕ್ಕ ಶಿಕ್ಷೆ ಆಗಬೇಕು" ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಮುರುಘಾ ಶ್ರೀ ವಿರುದ್ಧ ಲೈಂಗಿಕ ಪ್ರಕರಣದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಮುರುಘಾ ಪ್ರಕರಣ ಸದ್ಯ ನ್ಯಾಯಾಲಯದಲ್ಲಿರುವುದೆ, ತಪ್ಪಿದಸ್ಥರಿಗೆ ಶಿಕ್ಷೆ ನೀಡುವ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.

ಜಾರಕಿಹೊಳಿ ಕ್ಷಮೆಯಾಚಿಸಲಿ
ಇದೇ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಹಿಂದೂ ಧರ್ಮದ ಬಗ್ಗೆ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, "ಹಿಂದೂಗಳಿಗೆ ಅಪಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದು ಖಂಡನೀಯ. ಕಾಂಗ್ರೆಸ್‌ನವರು ಇದನ್ನು ಖಂಡಿಸಿದ್ದಾರೆ. ಕಾಂಗ್ರೆಸ್ ಕೇವಲ ಖಂಡನೆ ಮಾಡಿದರೆ ಸಾಕಾಗೋದಿಲ್ಲ. ಸತೀಶ್ ಜಾರಕಿಹೊಳಿ ರಾಜ್ಯದ ಜನರ ಕ್ಷಮಾಪಣೆ ಕೇಳಬೇಕು. ಹಗುರವಾಗಿ ಮಾತನಾಡಿದರೆ ದೊಡ್ಡವನಾಗುತ್ತೇನೆ ಎಂದು ಅಂದುಕೊಂಡಿದ್ದಾರೆ. ಅದೊಂದು ಭ್ರಮೆ. ಸತೀಶ್ ಜಾರಕಿಹೊಳಿ ಗೌರವದಿಂದ ನಡೆದುಕೊಳ್ಳಬೇಕು. ಹಿಂದೂಗಳಿಗೆ ಅಪಮಾನ ಆಗುವ ಹಾಗೆ ವರ್ತನೆ ಮಾಡಬಾರದು ಎಂದು ಯಡಿಯೂರಪ್ಪ ಹೇಳಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲುವುದು ಅಸಾಧ್ಯ.
ಇನ್ನು ಮುಂದಿನ ಚುನಾವಣೆ ಗೆದ್ದು ಖರ್ಗೆಗೆ ಗಿಫ್ಟ್ ಕೊಡುತ್ತೇವೆ ಎಂದಿದ್ದ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ನೀಡಿದ ಬಿಎಸ್‌ವೈ, ಸಿದ್ದರಾಮಯ್ಯ ಯಾವುದೋ ಭ್ರಮೆಯಲ್ಲಿದ್ದಾರೆ. ರಾಜ್ಯದ ಜನ ಅವರ ಜೇಬಿನಲ್ಲಿದ್ದಾರೆ ಎಂಬ ಭಾವನೆ ಮನಸ್ಸಲ್ಲಿದ್ದಂತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲುವುದು ಅಸಾಧ್ಯ. ನಾನು ಮತ್ತು ಬೊಮ್ಮಾಯಿ ರಾಜ್ಯದಲ್ಲಿ ಪ್ರವಾಸ ಹೊರಟಾಗ ಅಭೂತಪೂರ್ವ ಜನಬೆಂಬಲ ಸಿಕ್ಕಿದೆ. ಮೋದಿ ಅವರ ಬೆಂಬಲದೊಂದಿಗೆ ಬಿಜೆಪಿಗೆ ಕರ್ನಾಟಕದಲ್ಲಿ ಸ್ಪಷ್ಟ ಬಹುಮತ ಸಿಗಲಿದೆ ಎಂದರು.

ಬಾದಾಮಿಯಲ್ಲಿ ನಿಂತರೆ ಸಿದ್ದರಾಯ್ಯಗೆ ಸೋಲು
ಕರ್ನಾಟಕದಲ್ಲಿ ಬಿಜೆಪಿಯ ಗೆಲುವನ್ನು ತಡೆಯಲು ಸಿದ್ದರಾಮಯ್ಯನಿಂದ ಸಾಧ್ಯವಿಲ್ಲ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬರ್ತೀವಿ ಅಂತೀರಿ ಆದರೆ ನೀವು ಬಾದಾಮಿಯನ್ನು ಯಾಕೆ ಬಿಟ್ಟು ಬರುತ್ತಿದ್ದೀರಿ. ಬಾದಾಮಿಯಲ್ಲಿ ಸಿದ್ದರಾಮಯ್ಯಗೆ ಸೋಲು ನಿಶ್ಚಿತ. ಎಂಎಲ್ಎ ಆಗಿ ಕೆಲವೇ ಮತಗಳಿಂದ ಅಂದು ಗೆದ್ದಿದ್ದೀರಿ. ಆನಂತರ ಕ್ಷೇತ್ರವನ್ನು ಮರೆತುಬಿಟ್ಟಿದ್ದೀರಿ ಅಭಿವೃದ್ಧಿ ಮಾಡಿಲ್ಲ.ಬಾದಾಮಿಯನ್ನು ತೊರೆಯುತ್ತೀರಿ ಎಂಬುದು ನಿಮಗೆ ಎಷ್ಟರ ಮಟ್ಟಿಗೆ ಶೋಭೆ ತರುತ್ತದೆ. ರಾಜ್ಯದ ಜನ ಈಗಾಗಲೇ ತೀರ್ಮಾನವನ್ನು ಮಾಡಿದ್ದು, ನಿಮಗೆ ಉತ್ತರ ಕೊಡುತ್ತಾರೆ. ಬೇರೆ ಬೇರೆ ಪಕ್ಷದಿಂದ ಅನೇಕರು ಈಗಾಗಲೇ ಬಿಜೆಪಿ ಬಂದಿದ್ದಾರೆ, ಇನ್ನೂ ಬರುವವರಿದ್ದಾರೆ ಎಂದು ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಾನು ಹಾಗೂ ಸಿಎಂ ಕರಾವಳಿ ಭಾಗದಲ್ಲಿ ಪ್ರವಾಸ ಮಾಡಿದ್ದೇವೆ. ನಮಗೆ ಹಿಂದೆಂದೂ ಇಲ್ಲದ ಸ್ವಾಗತ ಸಿಕ್ಕಿದೆ. ಕರಾವಳಿ ಭಾಗದಲ್ಲಿ ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು ಗೆಲ್ಲುತ್ತಾರೆ. ರಾಜ್ಯದಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications