ಸಿಎಂ ಬಿಎಸ್ವೈ-ಎಚ್ಡಿಕೆ ಭೇಟಿ ಕುರಿತು ಸಚಿವ ಬೊಮ್ಮಾಯಿ ಪ್ರತಿಕ್ರಿಯೆ
ಉಡುಪಿ, ಡಿಸೆಂಬರ್ 3: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಹೈಕಮಾಂಡ್ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಬಿಜೆಪಿಯಲ್ಲಿ ಯಾವುದೇ ತಿಕ್ಕಾಟ, ಗೊಂದಲವಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಬಸವರಾಜ ಬೊಮ್ಮಾಯಿ, ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ರಾಷ್ಟ್ರೀಯ ನಾಯಕರು, ಹೈಕಮಾಂಡ್, ಪ್ರಧಾನಿಗಳು ಇದ್ದಾರೆ. ಅವರೆಲ್ಲ ಚರ್ಚಿಸಿ ಮಾಡುವ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಹೇಳಿದರು.
ಇದೇ ವೇಳೆ ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ವಿಚಾರವಾಗಿ ಮಾತನಾಡಿದ ಬಸವರಾಜ್ ಬೊಮ್ಮಾಯಿ, ""ಮುಖ್ಯಮಂತ್ರಿಗಳು ಯಾರನ್ನು ಬೇಕಾದರೂ ಭೇಟಿಯಾಗಬಹುದು, ಅವರ ನಡುವೆ ಏನು ಮಾತುಕತೆಯಾಗಿದೆ ಅನ್ನುವುದನ್ನು ನಾವು ವ್ಯಾಖ್ಯಾನ ಮಾಡುವುದಕ್ಕೆ ಬರುವುದಿಲ್ಲ'' ಎಂದು ಹೇಳಿದರು.

ಎಂಎಲ್ಸಿ ಎಚ್.ವಿಶ್ವನಾಥ್ ನೀಡಿರುವ ಹೇಳಿಕೆಗೆ ಉತ್ತರಿಸಿದ ಸಚಿವರು, ಹ್ಯಾಮ್ಲೆಟ್ ನಾಟಕ ನಾವು ಕೂಡ ಓದಿದ್ದೇವೆ. ಆ ಕತೆಗಳೆಲ್ಲ ನಮಗೂ ಗೊತ್ತು ರೀ ಎಂದು ತಿರುಗೇಟು ನೀಡಿದರು.
ಕೊರೊನಾ ಸ್ಥಿತಿಗತಿಯನ್ನು ನೋಡಿಕೊಂಡು ಶಾಲೆಗಳನ್ನು ಪ್ರಾರಂಭಿಸುವ ಕುರಿತು ನಿರ್ಧಾರ ಮಾಡಲಾಗುತ್ತಿದೆ. ಮೇಲ್ಮನೆ ಸದಸ್ಯರು ಒತ್ತಡ ಹಾಕುವುದು ಸಹಜ. ಕಾಲಕಾಲಕ್ಕೆ ಶಿಕ್ಷಣ ಸಚಿವರು ಎಲ್ಲಾ ವಿಭಾಗಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಶಾಲೆಗಳು ಓಪನ್ ಆಗುವುದಕ್ಕೆ ಪರ ಮತ್ತು ವಿರೋಧ ಅಭಿಪ್ರಾಯಗಳು ಇವೆ ಎಂದು ಉಡುಪಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.












Click it and Unblock the Notifications