ಮಂದಾರ್ತಿ ಮೇಳದ ಪ್ರಧಾನ ವೇಷಧಾರಿ ಸಾಧು ಕೊಠಾರಿ ರಂಗಸ್ಥಳದಲ್ಲೇ ನಿಧನ
ಉಡುಪಿ, ಜನವರಿ 5: ಮಂದಾರ್ತಿ ಯಕ್ಷಗಾನ ಮೇಳದ ಪ್ರಧಾನ ವೇಷಧಾರಿ ಸಾಧು ಕೊಠಾರಿ (58) ಅವರು ಹೃದಯಾಘಾತದಿಂದ ರಂಗಸ್ಥಳದಲ್ಲೇ ಅಸ್ವಸ್ಥಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.
ಶಿರಿಯಾರದ ಕಾಜ್ರಲ್ಲಿ ಸಮೀಪ ಕಲ್ಬೆಟ್ಟು ಎನ್ನುವಲ್ಲಿ ಮಂಗಳವಾರ ಬೆಳಗಿನ ಜಾವ ಘಟನೆ ನಡೆದಿದೆ. ಸಾಧು ಕೊಠಾರಿ ಅವರು ಮೇಳದ ಪ್ರಧಾನ ವೇಷಧಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಉಡುಪಿ; ಲಂಡನ್ನಿಂದ ಬಂದ 36 ಜನರ ಕೋವಿಡ್ ವರದಿ ನೆಗೆಟೀವ್
ಮಂಗಳವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ 'ಮಹಾಕಲಿ ಮಗದೇಂದ್ರ' ಪ್ರಸಂಗದಲ್ಲಿ ಮಗಧನಾಗಿ ಪ್ರದರ್ಶನ ನೀಡುತ್ತಿದ್ದ ವೇಳೆ ಹೃದಯಾಘಾತವಾಯಿತು. ಕುಣಿಯುತ್ತಿದ್ದ ವೇಳೆ ರಂಗದಲ್ಲೇ ಹೃದಯ ನೋವಿನಿಂದ ತೀವ್ರ ಅಸ್ವಸ್ಥಗೊಂಡರು.
ಮೇಳದ ಪ್ರಧಾನ ಭಾಗವತ ಸದಾಶಿವ ಅಮೀನ್ ಹಾಗೂ ಮೇಳದ ಮ್ಯಾನೇಜರ್ ತಕ್ಷಣ ಕೊಠಾರಿಯವರ ವೇಷ ಕಳಚಿ, ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಆಸ್ಪತ್ರೆ ತಲುಪುವಾಗಲೇ ಸಾಧು ಕೊಠಾರಿ ಮೃತಪಟ್ಟಿದ್ದಾರೆ.
ಪ್ರಸ್ತುತ ಬಾರಕೂರಿನಲ್ಲಿ ಕುಟುಂಬದೊಂದಿಗೆ ನೆಲೆಸಿದ್ದ ಸಾಧು ಕೊಠಾರಿ, ಸುಮಾರು 40 ವರ್ಷಕ್ಕೂ ಹೆಚ್ಚು ಕಾಲ ಯಕ್ಷ ತಿರುಗಾಟ ನಡೆಸಿ ಬಡಗುತಿಟ್ಟಿನ ಉತ್ತಮ ಕಲಾವಿದರಾಗಿ ಗುರುತಿಸಿಕೊಂಡಿದ್ದರು.