ಕರ್ನಾಟಕ ಚುನಾವಣೆ; ಬಿಜೆಪಿ ಪರ ಮಹಾರಾಷ್ಟ್ರ ಸಿಎಂ ಪ್ರಚಾರ
ಉಡುಪಿ, ಮೇ 07; ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಮೇ 10ರ ಬುಧವಾರ ನಡೆಯಲಿದೆ. ಬಹಿರಂಗ ಪ್ರಚಾರ ಮೇ 8ರ ಸೋಮವಾರ ಸಂಜೆ 6 ಗಂಟೆಗೆ ಅಂತ್ಯಗೊಳ್ಳಲಿದೆ. ಕೊನೆಯ ದಿನವೂ ಕೂಡ ಹಲವು ರಾಷ್ಟ್ರೀಯ ನಾಯಕರಿಂದ ಪ್ರಚಾರ ಮಾಡಿಸಲು ಬಿಜೆಪಿ ಯೋಜನೆ ರೂಪಿಸಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನೆ ಪಕ್ಷದ ನಾಯಕ ಏಕನಾಥ್ ಶಿಂಧೆ ಸೋಮವಾರ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಉಡುಪಿ ಮತ್ತು ಕಾಪು ವಿಧಾನಸಭಾ ಕ್ಷೇತ್ರಗಳಲ್ಲಿ ಅವರು ರೋಡ್ ಶೋ ನಡೆಸಿ, ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ.

ಏಕನಾಥ್ ಶಿಂಧೆ ಚುನಾವಣಾ ಪ್ರಚಾರ ಆರಂಭಿಸುವ ಮೊದಲು ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಶ್ರೀ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಭೇಟಿ ಮಾಡಲಿದ್ದಾರೆ. ಬಳಿಕ ಉಡುಪಿಯ ಶ್ರೀ ಕೃಷ್ಣನ ದರ್ಶನ ಪಡೆಯಲಿದ್ದಾರೆ.
ರೋಡ್ ಶೋ ಆಯೋಜನೆ; ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಉಡುಪಿ ಮತ್ತು ಕಾಪು ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

ಕಾಪು ವಿಧಾನಸಭಾ ಕ್ಷೇತ್ರಕ್ಕೆ ಗುರ್ಮೆ ಸುರೇಶ್ ಶೆಟ್ಟಿ ಬಿಜೆಪಿಯ ಅಭ್ಯರ್ಥಿ. ಉಡುಪಿ ಕ್ಷೇತ್ರಕ್ಕೆ ಯಶ್‌ಪಾಲ್ ಸುವರ್ಣ ಅಭ್ಯರ್ಥಿ. ಏಕನಾಥ್ ಶಿಂಧೆ ಬಹಿರಂಗ ಪ್ರಚಾರದ ಕೊನೆಯ ದಿನ ರಾಜ್ಯದಲ್ಲಿ ಪ್ರಚಾರ ನಡೆಸುವ ಮೂಲಕ ಮತ ಯಾಚನೆ ಮಾಡಲಿದ್ದಾರೆ.
ಮೇ 10ರ ಬುಧವಾರ ರಾಜ್ಯದಲ್ಲಿ ಮತದಾನ ನಡೆಯಲಿದೆ. ಮೇ 8ರ ಸೋಮವಾರ ಸಂಜೆ 6 ಗಂಟೆಗೆ ಅಂದರೆ ಮತದಾನಕ್ಕೆ 48 ಗಂಟೆ ಮೊದಲು ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತದೆ. ಬಹಿರಂಗ ಪ್ರಚಾರ ಅಂತ್ಯಗೊಂಡ ನಂತರ ಆಯಾ ಮತಕ್ಷೇತ್ರದ ಮತದಾರರಲ್ಲದ ರಾಜಕೀಯ ಪಕ್ಷದ ಮುಖಂಡರು, ಕಾರ್ಯಕರ್ತರು, ಪ್ರಚಾರಕರು ಆ ಮತಕ್ಷೇತ್ರದಲ್ಲಿ ಇರುವಂತಿಲ್ಲ.
ಈ ಕುರಿತು ಈಗಾಗಲೇ ರಾಜಕೀ ಪಕ್ಷಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ಸಂಚಾರಿ ವಿಚಕ್ಷಣಾ ತಂಡಕ್ಕೆ ಮಾಹಿತಿ ನೀಡಲಾಗಿದ್ದು, ತಂಡದವರು ಮತ ಕ್ಷೇತ್ರದ ವ್ಯಾಪ್ತಿಯ ಲಾಡ್ಜ್, ವಸತಿಗೃಹ, ಕಲ್ಯಾಣ ಮಂಟಪಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಹಾಗೂ ಮಾಲೀಕರಿಗೆ ತಿಳುವಳಿಕೆ ನೀಡಲು ನಿರ್ದೇಶನಗಳನ್ನು ನೀಡಲಾಗಿದೆ.
ಉಡುಪಿ ಜಿಲ್ಲಾಡಳಿತ ಮೇ 8ರ ಸಂಜೆ 5 ಗಂಟೆಯಿಂದ ಮೇ 10ರ ಮಧ್ಯರಾತ್ರಿ 12ರ ವರೆಗೆ ಹಾಗೂ ಮೇ 12ರ ಮಧ್ಯರಾತ್ರಿ 12 ಗಂಟೆಯಿಂದ ಮೇ 13ರ ಮಧ್ಯರಾತ್ರಿ 12ರ ವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಹಾಗೂ ಸರಬರಾಜನ್ನು ನಿಷೇಧಿಸಿದೆ. ಯಾವುದೇ ವಸತಿಗೃಹಗಳಲ್ಲಿ, ಕಲ್ಯಾಣ ಮಂಟಪಗಳು ಸೇರಿದಂತೆ ಮತ್ತಿತರ ಎಲ್ಲಾ ಸಭಾಂಗಣಗಳಲ್ಲಿ ಮದ್ಯ ಸೇವನೆಗೆ ಅವಕಾಶ ಕಲ್ಪಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಮೇ 10ರಂದು ನಡೆಯುವ ಮತದಾನ ದಿನದಂದು ಜಿಲ್ಲೆಯ ಎಲ್ಲ ಮತದಾರರು ತಪ್ಪದೇ ಮತದಾನ ಮಾಡಬೇಕು. ಮತದಾನ ದಿನವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಕರೆ ನೀಡಿದ್ದಾರೆ.
ಮತ ಚಲಾಯಿಸಲು ಅನುಕೂಲವಾಗುವಂತೆ ಆಯಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿನ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ, ಕಾಲೇಜುಗಳಿಗೆ, ವಿವಿಧ ಸಂಘ ಸಂಸ್ಥೆಗಳಿಗೆ ಮತ್ತು ಅನುದಾನಿತ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ ಖಾಸಗಿ ಸಂಸ್ಥೆಗಳಿಗೆ ತುರ್ತು ಸೇವೆಗಳನ್ನು ಹೊರತುಪಡಿಸಿ ಸರ್ಕಾರವು ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಲಾಗಿದೆ. ರುತ್ತದೆ. ಅದರಂತೆ ಜಿಲ್ಲೆಯಲ್ಲಿ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು, ನಿಗಾ ವಹಿಸಲಾಗಿದೆ.












Click it and Unblock the Notifications