ಸತತ ಶ್ರಮ, ನಿಸ್ವಾರ್ಥ ಮನಸ್ಸು: ಏಕಾಂಗಿಯಾಗಿ ಸಾರ್ವಜನಿಕ ರಸ್ತೆ ನಿರ್ಮಿಸಿದ ಕಾರ್ಕಳದ ಶ್ರಮ ಜೀವಿ
ಉಡುಪಿ, ಮೇ 16: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪದ ಮಾಳ ಎಂಬಲ್ಲಿಯ ವ್ಯಕ್ತಿಯೊಬ್ಬರು ತಮ್ಮ ಪರೋಪಕಾರದ ಮನೋಭಾವನೆಯಿಂದ ಹಗಲಿರುಳು ಶ್ರಮಿಸಿ ಜನರಿಗಾಗಿ ರಸ್ತೆ ನಿರ್ಮಿಸುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
ಬಿಹಾರದ ದಶರಥ ಮಾಂಜಿ ಯಾರಿಗೆ ಗೊತ್ತಿಲ್ಲ ಹೇಳಿ, ರಸ್ತೆ ಇಲ್ಲದೆ ಪತ್ನಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗದೇ ಪರ್ವತವನ್ನೇ ಕಡಿದು ರಸ್ತೆ ನಿರ್ಮಿಸಿದ ಮಹಾನುಭಾವ. ಇದು ಬಿಹಾರದ ದಶರಥ ಮಾಂಜಿಯಾದರೆ ಕಾರ್ಕಳದಲ್ಲೂ ಕೂಡ ದಶರಥ ಮಾಂಜಿ ಹೋಲುವ ಪರೋಪಕಾರದ ಕೆಲಸವನ್ನು ಮಾಡಿದ್ದಾರೆ.

ಮಾಳ ಗ್ರಾಮದ ಪೇರಡ್ಕ ಗಿರಿಜನ ಕಾಲೋನಿ ನಿವಾಸಿ ಗೋವಿಂದ ಮಲೆಕುಡಿಯ ಅವರು ತಮ್ಮ ಕಾಲೋನಿಗೆ ಸಂಪರ್ಕಿಸಲು ಸರಿಯಾದ ರಸ್ತೆ ಇಲ್ಲದ್ದನ್ನು ಅರಿತು ಸ್ವತಃ ತಾವೇ ಹಾರೆ ಪಿಕ್ಕಾಸಿ ಹಿಡಿದು ರಸ್ತೆ ಮಾಡುವ ಮೂಲಕ ಪರರಿಗೆ ಉಪಕಾರಿಯಾಗಿದ್ದಾರೆ. ಹಾರೆ-ಪಿಕ್ಕಾಸಿ ಹಿಡಿದು ನಿತ್ಯ ಶ್ರಮದಾನ, ಸುಮಾರು 500 ಮೀಟರ್ ರಸ್ತೆ ದುರಸ್ತಿ, ಸರ್ಕಾರದ ಕೆಲಸವನ್ನು ತಾನೇ ನಿರ್ವಹಿಸಿದ ಉದಾರಿ ಗೋವಿಂದ ಮಲೆಕುಡಿಯ ಅವರು.
ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಗಿರಿಜನ ಕಾಲೋನಿ ಪೇರಡ್ಕದಲ್ಲಿ ಸುಮಾರು 25ಕ್ಕೂ ಮಿಕ್ಕಿದ ಮನೆಗಳಿವೆ. ಆದರೆ ಅದನ್ನು ಸಂಪರ್ಕಿಸಲು ಸುಂದರವಾದ ರಸ್ತೆಯೇ ಇಲ್ಲ. ಅಗಲ ಕಿರಿದಾದ, ವಾಹನ ಸಂಚಾರಕ್ಕೆ ಅಯೋಗ್ಯವಾದ, ಕೇವಲ ಕಾಲ್ನಡಿಗೆ ಸೀಮಿತವಾಗಿದ್ದ ರಸ್ತೆಯ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ.

ಕೊನೆಗೆ ಬೇಸತ್ತು ತಾವೇ ರಸ್ತೆ ನಿರ್ಮಿಸಲು ಗೋವಿಂದ ಮಲೆಕುಡಿಯ ಮುಂದಾಗಿದ್ದರು. ಗಿರಿಜನ ಕಾಲೋನಿಯ ಬುಗಟುಗುಂಡಿ ಒಂದನೇ ವಾರ್ಡ್ ರಸ್ತೆವರೆಗೆ ಒಟ್ಟು ರಸ್ತೆಯ ಸುಮಾರು ಒಂದೂವರೆ ಕಿಲೋ ಮೀಟರ್‌ವರೆಗೆ ಅವರೇ ಸ್ವಂತ ಶ್ರಮ ವಹಿಸಿ ರಸ್ತೆ ನಿರ್ಮಿಸಿಕೊಟ್ಟಿದ್ದಾರೆ. ಜೊತೆಗೆ ಮಳೆಗಾಲದಲ್ಲಿ ನೀರು ಸರಾಗವಾಗಿ ಸಾಗಲು ಚರಂಡಿ ವ್ಯವಸ್ಥೆಯನ್ನು ಕೂಡ ಅವರೇ ಮಾಡಿದ್ದಾರೆ.
ಪರಿಸರ ಪ್ರೇಮಿಯಾಗಿರುವ ಗೋವಿಂದ ಮಲೆಕುಡಿಯ ಪ್ರಸ್ತುತ 55ರ ವರ್ಷ ವಯಸ್ಸಾಗಿದೆ. ಕಳೆದ ಮೂವತ್ತು ವರ್ಷಗಳಿಂದ ಅವರು ಕೂಲಿ ಕೆಲಸ ನಿರ್ವಹಿಸುತ್ತಿದ್ದು, ಅರಣ್ಯ ಇಲಾಖೆಯ ಜೊತೆ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಗಿಡನೆಟ್ಟು ಪೋಷಿಸಿ ಬೆಳೆಸುತ್ತಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಗೋವಿಂದ ಮಲೆಕುಡಿಯ ಅವರು ರಸ್ತೆ ನಿರ್ಮಿಸಿರುವುದಕ್ಕೆ ಸಾರ್ವಜನಿಕರ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ಗಿರಿಜನ ಕಾಲೋನಿ ಪೇರಡ್ಕದಲ್ಲಿ ಮಣ್ಣಿನ ರಸ್ತೆ ನಿರ್ಮಾಣವಾಗಿದ್ದು, ಈ ರಸ್ತೆಯನ್ನು ಡಾಂಬರೀಕರಣ ಮಾಡಿ ಅಭಿವೃದ್ಧಿಪಡಿಸಬೇಕು ಎಂದು ಸ್ಥಳೀಯರು ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಒತ್ತಾಯಿಸಿದ್ದಾರೆ.












Click it and Unblock the Notifications