ಹಿಜಾಬ್ ಧರಿಸಿ ಬಂದವರಿಗೆ ಕಾಲೇಜು ಗೇಟು ಮುಚ್ಚಿದ ಪ್ರಾಂಶುಪಾಲ!

ಉಡುಪಿ, ಫೆಬ್ರವರಿ 03; ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಉಡುಪಿಯ ಹಿಜಾಬ್ ವಿವಾದ ತೀವ್ರ ಸ್ವರೂಪವನ್ನು ಪಡೆದಿದೆ. ಸದ್ಯ ಈ ವಿವಾದದ ಕಿಡಿ ಉಡುಪಿಯ ಮೂರು ಕಾಲೇಜುಗಳಿಗೆ ಹಬ್ಬಿದೆ. ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಗುಂಪು ಕೇಸರಿ ಶಲ್ಯಧರಿಸಿ ಜೈ ಶ್ರೀರಾಮ್ ಘೋಷಣೆ ಕೂಗಿದರೆ, ಕುಂದಾಪುರದ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಗೇಟಿನಲ್ಲೇ ತಡೆದು ಹೊರಗೆ ಕಳುಹಿಸಿದ್ದಾರೆ.

ಕಳೆದ ಹಲವು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ವಿವಾದ ಕಿಡಿ ಹೊತ್ತಿಸಿದ ಹಿಜಾಬ್ ಪ್ರಕರಣ ಈಗ ಜ್ವಾಲಾಗ್ನಿಯಾಗಿ ಬದಲಾಗಿದೆ. ಉಡುಪಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಆರಂಭವಾದ ಹಿಜಾಬ್ ವಿವಾದ ಈಗ ಕುಂದಾಪುರದತ್ತ ಹೊರಳಿದ್ದು, ಕುಂದಾಪುರ ದ ಸರ್ಕಾರಿ ಕಾಲೇಜು ಮತ್ತು ಖಾಸಗಿ ಕಾಲೇಜಿನಲ್ಲಿ ಹಿಜಾಬ್ ವಿವಾದ ತೀವ್ರವಾಗಿದೆ.

ಕುಂದಾಪುರದ ಸರ್ಕಾರಿ ಕಾಲೇಜಿನಲ್ಲಿ ನಿನ್ನೆ ವಿದ್ಯಾರ್ಥಿನಿಯರ ಒಂದು ತಂಡ ಹಿಜಾಬ್ ಧರಿಸಿದರೆ ಅದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳ ಗುಂಪು ಕೇಸರಿ ಶಲ್ಯವನ್ನು ಧರಿಸಿದ್ದರು. ಈ ಸಮರ ಇಂದೂ ಕೂಡಾ ಮುಂದುವರಿದಿದ್ದು, ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಕಾಲೇಜು ಪ್ರಾಂಶುಪಾಲರು ಗೇಟಿನಲ್ಲೇ ತಡೆದು ನಿಲ್ಲಿಸಿದ ಘಟನೆ ನಡೆದಿದೆ.

Hijab Row Kundapura College Principal Closed Gate For Students

ಸರ್ಕಾರದ ಆದೇಶದ ಪ್ರಕಾರ ಹಿಜಾಬ್ ಅಥವಾ ಕೇಸರಿ ಶಲ್ಯ ಧರಿಸಿದರೆ ಕಾಲೇಜು ಒಳಗೆ ಪ್ರವೇಶವಿರದ ಕಾರಣ ಪ್ರಾಂಶುಪಾಲರು ವಿದ್ಯಾರ್ಥಿನಿಯರನ್ನು ಕಾಲೇಜು ಗೇಟಿನ ಬಳಿ ತಡೆದು ನಿಲ್ಲಿಸಿದ್ದಾರೆ. ಸರ್ಕಾರದ ಆದೇಶದ ಪ್ರಕಾರ ಹಿಜಾಬ್ ಧರಿಸಿ ಕಾಲೇಜು ಆವರದೊಳಗೆ ಪ್ರವೇಶ ಇಲ್ಲ ಎಂಬುದಾಗಿ ಹೇಳಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯರು ಮತ್ತು ಪ್ರಾಂಶುಪಾಲರ ನಡುವೆ ಮಾತಿನ ಚಕಮಕಿ ನಡೆದಿದೆ. ಪ್ರಾಂಶುಪಾಲರ ವಿರುದ್ಧವೇ ವಿದ್ಯಾರ್ಥಿನಿಯರು ಏರುಧ್ವನಿಯಲ್ಲಿ ಹಿಜಾಬ್ ನಮ್ಮ ಧಾರ್ಮಿಕ ಹಕ್ಕು ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಂದಾಪುರದ ಖಾಸಗಿ ಕಾಲೇಜಿನಲ್ಲೂ ಹಿಜಾಬ್ ವಿರುದ್ಧ ಜೈಶ್ರೀರಾಮ್ ಘೋಷಣೆ ಮೊಳಗಿದೆ. ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಗುಂಪು ಕೇಸರಿ ಶಲ್ಯ ಧರಿಸಿ ಕಾಲೇಜಿನೊಳಗೆ ಪ್ರವೇಶಿಸಿದೆ. ಈ ವೇಳೆ ವಿದ್ಯಾರ್ಥಿಗಳ ಗುಂಪು ಜೈ ಶ್ರೀರಾಮ್ ಘೋಷಣೆಯನ್ನು ಕೂಗಿದೆ. ಹಿಜಾಬ್‌ಗಾಗಿ ಪಟ್ಟು ಹಿಡಿದ ವಿದ್ಯಾರ್ಥಿನಿಯರಿಗೆ ಸೆಡ್ಡು ಹೊಡೆಯಲು ವಿದ್ಯಾರ್ಥಿಗಳ ಗುಂಪು ಈ ಕೇಸರಿ ಶಾಲು ಅಭಿಯಾನ ಮಾಡಿದೆ.

ಇನ್ನು ಹಿಜಾಬ್ ವಿವಾದ ತೀವ್ರಗೊಳ್ಳುತ್ತಿರುವ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಉಡುಪಿ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಕಾಲೇಜಿನೊಳಗೆ ಯಾವುದೇ ಅನ್ಯ ವಸ್ತ್ರಕ್ಕೆ ಅವಕಾಶ ಇಲ್ಲವಾಗಿರೋದರಿಂದ ಈ ಬಗ್ಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳೋದಾಗಿ ಹೇಳಿದ್ದಾರೆ. ತಜ್ಞರ ಸಮಿತಿ ಈಗಾಗಲೇ ಹಿಜಾಬ್ ಪ್ರಕರಣ ಕುರಿತು ತನಿಖೆ ಮಾಡುತ್ತಿದ್ದು, ಸರ್ಕಾರ ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. "ಕಾಲೇಜುಗಳಲ್ಲಿ ಸಮವಸ್ತ್ರ ಬಿಟ್ಟು ಬೇರೆ ಯಾವುದೇ ಧಾರ್ಮಿಕ ವಸ್ತ್ರಗಳಿಗೆ ಅವಕಾಶ ಇಲ್ಲ. ಈ ಬಗ್ಗೆ ಶಿಕ್ಷಣ ಸಚಿವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಶಾಲೆ ಕಾಲೇಜುಗಳಲ್ಲಿ ಮಕ್ಕಳು ಒಂದೇ ಸಮವಸ್ತ್ರ ಧರಿಸಿ ನಾವೆಲ್ಲರೂ ಭಾರತಮಾತೆಯ ಮಕ್ಕಳು ಎಂಬುವುದನ್ನು ಸಾರಬೇಕು. ಆದರೆ ಹಿಜಾಬ್ ವಿಚಾರವನ್ನು ಕೆಲವರು ಅನಗತ್ಯವಾಗಿ ಎಳೆದು ತಂದು ಭಾವೈಕ್ಯತೆಗೆ ಧಕ್ಕೆ ತಂದಿದ್ದಾರೆ. ಈ ವಿದ್ಯಾರ್ಥಿನಿಯರಿಗೆ ಕೆಲ ಮತೀಯ ಸಂಘಟನೆಗಳು ನೆರವಾಗುವ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆ ಪೊಲೀಸರಿಗೆ ಕ್ರಮಕ್ಕೆ ಸೂಚಿಸಲಾಗಿದೆ" ಎಂದು ಹೇಳಿದ್ದಾರೆ.

ಒಟ್ಟಿನ್ನಲ್ಲಿ ಮತೀಯ ಸಂಘಟನೆಗಳ ಮಧ್ಯಪ್ರವೇಶದಿಂದ ಹಿಜಾನ್ ವಿವಾದ ಮತ್ತಷ್ಟು ಜಟಿಲವಾಗುತ್ತಿದ್ದು, ಇನ್ನೂ ಹಲವು ಕಾಲೇಜುಗಳಿಗೆ ಈ ವಿವಾದ ಕಿಚ್ಚು ಹಬ್ಬುವ ಸಾಧ್ಯತೆಗಳಿವೆ. ಜ್ಞಾನಾರ್ಜನೆಗಾಗಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಈ ವಿವಾದ ಅಡ್ಡಿಯಾಗುವ ಮುನ್ನ ಸರ್ಕಾರ ಎಚ್ಚೆತ್ತು ಈ ವಿವಾದಕ್ಕೆ ಅಂತಿಮ ತೆರೆ ಎಳೆಯಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+