ಜಯಮಾಲಾ ನನಗಿಂತಲೂ ಹೆಚ್ಚು ಗ್ಲ್ಯಾಮರಸ್ ಎಂದ ಪ್ರಮೋದ್ ಮಧ್ವರಾಜ್
ಉಡುಪಿ, ಆಗಸ್ಟ್.30: ಉಡುಪಿಯಲ್ಲಿ ಜಯಮಾಲಾ ಗಾಳಿ ಎದ್ದಿದೆ. ಜಯಮಾಲಾರಷ್ಟು ಗ್ಲ್ಯಾಮರ್ ಯಾರಿಗಿದೆ? ಅವರು ವೆರಿ ಗ್ಲ್ಯಾಮರಸ್ ಡಿಸ್ಟ್ರಿಕ್ಟ್ ಮಿನಿಸ್ಟರ್ . ನನಗಿಂತ ಅವರೇ ಹೆಚ್ಚು ಗ್ಲ್ಯಾಮರಸ್ ಆಗಿದ್ದಾರೆ ಎಂದು ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದರು.
ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಚಿವೆ ಜಯಮಾಲಾ ಅವರನ್ನು ಹಾಡಿಹೊಗಳಿದರು. ಕಾಂಗ್ರೆಸ್ ಪಕ್ಷ ಆನೆ ಇದ್ದ ಹಾಗೆ. ಎಷ್ಟು ಚಿಕ್ಕ ಚಿತ್ರ ಬರೆದರೂ ಅದು ಆನೆಯೇ, ಸೂರ್ಯ-ಚಂದ್ರ ಇರುವ ತನಕ ಕಾಂಗ್ರೆಸ್ ಇರುತ್ತದೆ.
ಕಾಂಗ್ರೆಸ್ ಪಕ್ಷವನ್ನು ಯಾರಿಂದಲೂ ಅಳಿಸಲು ಸಾಧ್ಯವೇ ಇಲ್ಲ. ಕಾಂಗ್ರೆಸ್ ಬಹಳ ಪ್ರಾಚೀನವಾದ ಪಕ್ಷ. ನಾನು ಬಿಟ್ಟರೂ ಕಾಂಗ್ರೆಸ್ ಪಕ್ಷ ಉಳಿಯುತ್ತದೆ. ಯಾರು ಇಲ್ಲದಿದ್ದರೂ ಕಾಂಗ್ರೆಸ್ ಪಕ್ಷವನ್ನು ಮುಕ್ತ ಮಾಡಲು ಅಸಾಧ್ಯ.ಹಾಗಂತ ನಾನು ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಚುನಾವಣಾ ವಾತಾವರಣ ಕಾಂಗ್ರೆಸ್ ಪರವಾಗಿದೆ. ಬಿಜೆಪಿ ಶಾಸಕರ ಹಣೆಬರಹ ಏನಂತ ಜನಕ್ಕೆ ಗೊತ್ತಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಉಡುಪಿ ನಗರಸಭೆ ಕಳೆದ 5 ವರ್ಷ ಕಾಂಗ್ರೆಸ್ ಕೈಯಲ್ಲಿ ಇತ್ತು. ವಿಧಾನಸಭಾ ಚುನಾವಣೆಯಲ್ಲಿ ನಮಗೆ ಹಿನ್ನಡೆಯಾಯಿತು. ಆದರೆ ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯವನ್ನು ಜನ ಮೆಚ್ಚಿಕೊಂಡಿದ್ದಾರೆ. ನಗರಸಭೆ ವಿರುದ್ಧ ಪ್ರತಿಭಟನೆ ಮಾಡಲು ಬಿಜೆಪಿಗೆ ಆಸ್ಪದವೇ ಇರಲಿಲ್ಲ.
ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡಿದ್ದೇವೆ. ಈ ಬಾರಿ ಮತ್ತೆ ಜನ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಮಧ್ವರಾಜ್ ತಿಳಿಸಿದರು.












Click it and Unblock the Notifications