ದೀಪಾವಳಿ ಹಬ್ಬದ ದಿನವೇ ಉಡುಪಿಯಲ್ಲಿ ನಾಲ್ವರ ಭೀಕರ ಹತ್ಯೆ: ಹಂತಕ ನಿಗೂಢ
ಉಡುಪಿ, ನವೆಂಬರ್ 12: ಉಡುಪಿ ಜಿಲ್ಲೆಯ ನೇಜಾರಿನಲ್ಲಿ ನಡೆದ ಭೀಕರ ಹತ್ಯೆ ಇಡೀ ಕರಾವಳಿಯನ್ನೇ ಬೆಚ್ಚಿ ಬೀಳಿಸಿದೆ. ಮಾಸ್ಕ್ ಹಾಕಿಕೊಂಡು ಬಂದ ದುಷ್ಕರ್ಮಿ ನಾಲ್ವರನ್ನು ಚೂರಿ ಇರಿದು ಕೊಂದಿದ್ದು, ಮನೆಯೇ ಸ್ಮಶಾನವಾಗಿದೆ. ನಾಲ್ವರನ್ನು ಭೀಕರವಾಗಿ ಕೊಂದ ಆತ ಯಾರು? ಕೊಂದದ್ದು ಯಾಕೆ ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿದೆ.
ನಾಡಿನೆಲ್ಲೆಡೆ ಇವತ್ತು ದೀಪಾವಳಿ ಸಂಭ್ರಮವಾದರೆ ಉಡುಪಿಯಲ್ಲಿ ಇಂದು ಭೀಕರ ಹತ್ಯೆಯಾಗಿದೆ. ಬೆಳ್ಳಂಬೆಳಗ್ಗೆಯೇ ಉಡುಪಿಯ ನೇಜಾರಿನ ಜನ ಭೀಕರ ಹತ್ಯೆ ಕಂಡು ಬೆಚ್ಚಿ ಬಿದ್ದಿದ್ದಾರೆ.

ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ನೇಜಾರು ತೃಪ್ತಿ ನಗರದಲ್ಲಿರುವ ಮೃತರ ಮನೆಗೆ ಬೆಳಗ್ಗಿನ ವೇಳೆ ಬಂದ ದುಷ್ಕರ್ಮಿಯೊಬ್ಬ ತಾಯಿ ಹಾಗೂ ಮೂವರು ಮಕ್ಕಳನ್ನು ಚೂರಿಯಿಂದ ಇರಿದು ಕೊಂದು ವೃದ್ಧೆಯನ್ನು ಗಾಯಗೊಳಿಸಿದ್ದಾನೆ. ತಾಯಿ ಹಸೀನಾ (46) ಆಕೆಯ ಮಕ್ಕಳಾದ ಅಫ್ನಾನ್ (23), ಅಯಾಂಜ್ (21), ಮತ್ತು ಅಸೀಮ್ (14) ದುಷ್ಕರ್ಮಿಯ ಇರಿತದಿಂದ ಮೃತಪಟ್ಟವರು ಎಂದು ಗುರುತಿಸಲಾಗಿದೆ.
ದುಷ್ಕರ್ಮಿಯಿಂದ ಕೊಲೆಯಾದ ಹಸೀನಾ ಅವರ ಪತಿ ಗಲ್ಫ್ ದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಖಕ್ಕೆ ಬಿಳಿ ಬಣ್ಣದ ಮಾಸ್ ಧರಿಸಿದ್ದ ಬಂದ ದುಷ್ಕರ್ಮಿ ಚಾಕುವಿನಿಂದ ಇರಿದು ಹಸೀನಾ ಹಾಗೂ ಅವರ ಇಬ್ಬರು ಮಕ್ಕಳನ್ನು ಇರಿದಿದ್ದಾನೆ. ಮನೆಯೊಳಗಿನ ಕಿರುಚಾಟ ಕೇಳಿ, ಹೊರಗಡೆ ಆಡಲು ತೆರಳಿದ್ದ ಆಸಿಫ್, ಸೈಕಲ್ ಮನೆ ಅಂಗಳದಲ್ಲಿ ಕೆಡವಿ ಒಳಗೆ ಓಡುತ್ತಿದ್ದಂತೆ ಆತನಿಗೂ ದುಷ್ಕರ್ಮಿ ಚಾಕುನಿಂದ ಇರಿದು ಕೊಲೆ ಮಾಡಿದ್ದಾನೆ.
ದುಷ್ಕರ್ಮಿ ಸಂತೆಕಟ್ಟೆಯಿಂದ ರಿಕ್ಷಾದಲ್ಲಿ ಬಂದು ಈ ಕೃತ್ಯ ನಡೆಸಿ ನಂತರ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ಡಾ.ಅರುಣ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯನ್ನು ಪರಿಶೀಲಿಸಿದ್ದಾರೆ.

ನಾಲ್ವರನ್ನು ಕೊಲೆ ಮಾಡಿದ ವ್ಯಕ್ತಿ ಯಾರು? ಯಾಕಾಗಿ ಈ ರೀತಿ ಕೊಲೆ ಮಾಡಿದ್ದಾನೆ ಎನ್ನುವುದು ಇನ್ನೂ ನಿಗೂಢವಾಗಿದೆ. ಹೀಗಾಗಿ ಪೊಲೀಸರು ಕೊಲೆಗಾರ ಯಾರು ಯಾಕಾಗಿ ಕೊಲೆ ಮಾಡಿದ ಎನ್ನುವ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.












Click it and Unblock the Notifications