ಉಡುಪಿಯಲ್ಲಿ ನಕಲಿ ಪೊಲೀಸ್; ಮಹಿಳೆಯ ಚಿನ್ನಾಭರಣ ಕಳುವು!
ಉಡುಪಿ, ಜನವರಿ 11: ಕಳೆದ ವಾರ ಉಡುಪಿ ಜಿಲ್ಲಾ ಪೊಲೀಸರು ಅಂತರ್ ಜಿಲ್ಲಾ ಸರಗಳ್ಳನನ್ನು ಬಂಧಿಸಿದ್ದರು. ತಾನು ಪೊಲೀಸ್ ಎಂದು ನಂಬಿಸಿದ ವ್ಯಕ್ತಿಯೊಬ್ಬ ಮಹಿಳೆಯೋರ್ವರ ಚಿನ್ನಾಭರಣ ದೋಚಿರುವ ಘಟನೆ ಉಡುಪಿಯಲ್ಲಿ ಭಾನುವಾರ ನಡೆದಿದೆ.
ಉಡುಪಿಯ ಅಂಬಲಪಾಡಿ ಜಂಕ್ಷನ್ ಬಳಿ 40 ಸಾವಿರ ರೂ. ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ನಡೆದಿದೆ. ಅಸಲಿ ಪೊಲೀಸರು ನಕಲಿ ಪೊಲೀಸ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಅಂಬಲಪಾಡಿಯ ವಸಂತಿ ಎಂಬುವವರು ಭಾನುವಾರ ಮನೆಯೊಂದರಲ್ಲಿನ ಕೆಲಸ ಮುಗಿಸಿ ನಡೆದುಕೊಂಡು ಹೋಗುತ್ತಿದ್ದರು. ಅಂಬಲಪಾಡಿಯ ಶ್ಯಾಮಿಲಿ ಹಾಲ್‌ನ ವಾಹನ ಪಾರ್ಕಿಂಗ್ ಸ್ಥಳದ ಬಳಿ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕ್ ನಿಲ್ಲಿಸಿ ನಿಂತುಕೊಂಡಿದ್ದರು.

ವಸಂತಿಯವರನ್ನು ತಡೆದ ಇಬ್ಬರೂ ನಾವು ಪೊಲೀಸರು ಮುಂದೆ ಯಾರೋ ಹೆಂಗಸಿಗೆ ಚೂರಿ ತೋರಿಸಿ ಚಿನ್ನದ ಸರ ತೆಗೆದುಕೊಂಡು ಹೋಗಿದ್ದಾರೆ. ನಿಮ್ಮ ಚಿನ್ನಾಭರಣಗಳನ್ನು ತೆಗೆದು ಕೊಡಿ, ಪೇಪರ್‌ನಲ್ಲಿ ಕಟ್ಟಿಕೊಡುತ್ತೇವೆ ಎಂದು ನಂಬಿಸಿದ್ದಾರೆ.
ಮುಕ್ಕಾಲು ಪವನ್ ಚಿನ್ನದ ಸರ ಹಾಗೂ ಅರ್ಧ ಪವನ್‌ನ 2 ಚಿನ್ನದ ಬಳೆಗಳನ್ನು ಪಡೆದುಕೊಂಡು ಪೇಪರ್‌ನಲ್ಲಿ ಸುತ್ತಿ ವಾಪಾಸು ಕೊಟ್ಟಿದ್ದರು. ನಂತರ ಸಂಶಯಗೊಂಡ ಮಹಿಳೆ ಅವರು ಕೊಟ್ಟ ವಸ್ತುವನ್ನು ನೋಡಿದಾಗ ಅದರಲ್ಲಿ 5 ನಕಲಿ ಬಳೆಗಳು ಇದ್ದವು.
ವಂಚನೆ ಪ್ರಕರಣದ ಬಗ್ಗೆ ವಸಂತಿಯವರು ಉಡುಪಿ ನಗರ ಠಾಣೆಗೆ ದೂರು ನೀಡಿದ್ದಾರೆ. ಗಮನಾರ್ಹ ಸಂಗತಿ ಎಂದರೆ ಪೊಲೀಸರ ಸೋಗಿನಲ್ಲಿ ಚಿನ್ನಾಭರಣ ದೋಚುವ ಜಾಲ ಈ ಹಿಂದೆ ಉಡುಪಿಯಲ್ಲಿ ಸಕ್ರಿಯವಾಗಿತ್ತು.
ಇದೀಗ ಮತ್ತೆ ಅದೇ ರೀತಿಯ ಜಾಲ ಸಕ್ರಿಯವಾಗಿದ್ದು ಮಹಿಳೆಯರ ಆತಂಕ ಹೆಚ್ಚುವಂತೆ ಮಾಡಿದೆ. ಅಸಲಿ ಪೊಲೀಸರು ವಂಚಕರನ್ನು ಹುಡುಕಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.












Click it and Unblock the Notifications