ಸಿದ್ದರಾಮಯ್ಯಗೆ ವಿನಾಶ ಕಾಲೇ ವಿಪರೀತ ಬುದ್ಧಿ ಎಂದ ಕರಂದ್ಲಾಜೆ
ಉಡುಪಿ, ಅಕ್ಟೋಬರ್ 5 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿನಾಶ ಕಾಲೇ ವಿಪರೀತ ಬುದ್ಧಿ ಎಂಬಂತಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.
ಉಡುಪಿಯಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಆದಾಯ ತೆರಿಗೆ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ವಿಚಾರದ ಬಗ್ಗೆ ಪ್ರಸ್ತಾವ ಮಾಡಿದರು. ಇನ್ನು ಕಾಂಗ್ರೆಸ್ ಸರಕಾರಕ್ಕೆ ಉಳಿಗಾಲವಿಲ್ಲ. ರಾಜ್ಯದ ಐಟಿ ಅಧಿಕಾರಿಗಳು ಭಯ ಪಡಲ್ಲ. ಐಟಿ ಮೇಲೆ ಸಂಶಯ ಇದ್ದರೆ ಮುಖ್ಯಮಂತ್ರಿಯವರು ಸಿಬಿಐಗೆ ದೂರು ನೀಡಲಿ ಎಂದು ಹೇಳಿದರು.

ರಾಜ್ಯ ಸರಕಾರ ಪರಿಮಿತಿ ಮೀರಿ ಅಧಿಕಾರ ಪ್ರಯೋಗ ಮಾಡುತ್ತಿದೆ. ಸಿದ್ದರಾಮಯ್ಯ ಅವರದು ಭಂಡ ಸರ್ಕಾರ ಎಂದು ಸಾಬೀತಾಗಿದೆ. ನೋಟ್ ಬ್ಯಾನ್ ನಂತರ ಹಲವು ಕಡೆ ಐಟಿ ದಾಳಿಗಳು ನಡೆದಿವೆ. ಕರ್ನಾಟಕದಲ್ಲೂ ದಾಳಿಗಳು ನಡೆದಿವೆ. ದೇಶದಲ್ಲೇ ಮೊದಲಬಾರಿಗೆ ಐಟಿ ಅಧಿಕಾರಿಗಳ ಮೇಲೆ ಎಸಿಬಿಯನ್ನು ಛೂ ಬಿಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತೆರೆಮರೆಯಲ್ಲಿ ನಡೆಯುತ್ತಿರುವ ಐಸಿಸ್ ಚಟುವಟಿಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಶೀಘ್ರವೇ ರಾಷ್ಟ್ರೀಯ ತನಿಖಾ ದಳ ಕಚೇರಿಯನ್ನು ಆರಂಭಿಸಬೇಕಿದೆ. ಕರಾವಳಿಯಲ್ಲಿ ಬೇರೂರಿರುವ ಪಿಎಫ್ಐ ಹಾಗೂ ಕೆ ಎಫ್ ಡಿ ಸಂಘಟನೆಯು ಸಿಮಿಯ ಇನ್ನೊಂದು ಮುಖವಾಗಿದೆ. ಇದೀಗ ಅದರ ಮತ್ತೊಂದು ಹೊಸ ಮುಖ ಐಸಿಸ್ ಕೂಡಾ ಕರಾವಳಿಗೆ ಕಾಲಿಟ್ಟಿದೆ ಎಂದರು.
ಪಿಎಫ್ ಐ, ಕೆಎಫ್ ಡಿ ಜೊತೆ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದೆ ಎನ್ನುವ ಮೂಲಕ ಸಚಿವ ಖಾದರ್ ಸುಳ್ಳು ಹೇಳಿದ್ದಾರೆ. ಕೆಎಫ್ ಡಿ, ಪಿಎಫ್ ಐ ಸಹಕಾರ ಬಿಜೆಪಿಗೆ ಅಗತ್ಯವಿಲ್ಲ. ಈ ಸಂಘಟನೆಗಳ ಜೊತೆ ಸಂಪರ್ಕವಿರುವುದು ಕಾಂಗ್ರೆಸ್ ಗೆ ಮಾತ್ರ ಎಂದು ಕಿಡಿ ಕಾರಿದರು.












Click it and Unblock the Notifications