ದೈಹಿಕ ಶಿಕ್ಷಕ ಸುರೇಂದ್ರ ಶೆಟ್ಟಿಯವರಿಗೆ 'ಅತ್ಯುತ್ತಮ ಶಿಕ್ಷಕ' ಪ್ರಶಸ್ತಿ
ಉಡುಪಿ, ಸೆಪ್ಟೆಂಬರ್ 30: ಕಮಲಶಿಲೆಯ ಶ್ರೀ ಬ್ರಾಹ್ಮೀ ದುರ್ಗಾ ಪರಮೇಶ್ವರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿರುವ ಸುರೇಂದ್ರ ಶೆಟ್ಟಿಯವರಿಗೆ 2019ನೇ ಸಾಲಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಜಿಲ್ಲಾ ರೋಟರಿ ವಲಯ 1ರ ಶೈಕ್ಷಣಿಕ ಸಮ್ಮೇಳನದಲ್ಲಿ ಭಾನುವಾರ (ಸೆ.29) ರಂದು ಶಾಲೆಯ ಭೌತಿಕ, ಶೈಕ್ಷಣಿಕ ಬೆಳವಣಿಗೆಗೆ ಶ್ರಮಿಸಿರುವ ಸುರೇಂದ್ರ ಶೆಟ್ಟಿಯವರಿಗೆ ಸನ್ಮಾನ ಮಾಡಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಬೈಂದೂರು ರೋಟರಿ ವಲಯ 1ರ ಅಸಿಸ್ಟೆಂಟ್ ಗವರ್ನರ್ ರವಿರಾಜ್ ಶೆಟ್ಟಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲಿಟ್ರೆಸಿ ವಿಭಾಗದ ಜಿಲ್ಲಾ ಚೇರ್ ಮೆನ್ ಆಗಿರುವ ಜಯಪ್ರಕಾಶ್ ಶೆಟ್ಟಿ, ರೋಟರಿ ಕ್ಲಬ್ ಬೈಂದೂರಿನ ಚೇರ್ ಮೆನ್ ಆಗಿರುವ ಕೃಷ್ಣಪ್ಪ ಶೆಟ್ಟಿ ಉಪಸ್ಥಿತರಿದ್ದರು.

ಸುರೇಂದ್ರ ಶೆಟ್ಟಿಯವರ ಗರಡಿಯಲ್ಲಿ ಪಳಗಿದ ಅನೇಕ ವಿದ್ಯಾರ್ಥಿಗಳು 2006 ರಿಂದ 2019ರ ಸಾಲಿನವರೆಗೂ ಅನೇಕ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಭಾಗ, ರಾಜ್ಯ, ರಾಷ್ಟ್ರ ಮಟ್ಟಕ್ಕೂ ಆಯ್ಕೆಯಾಗಿ ಶಾಲೆಗೆ, ಪೋಷಕರಿಗೆ ಕೀರ್ತಿ ತಂದಿದ್ದಾರೆ. ವಿದ್ಯಾದಾನದಲ್ಲಿನ ನಿಸ್ವಾರ್ಥ ಸೇವೆಗೆ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ತಮ್ಮ ನೆಚ್ಚಿನ ಶಿಕ್ಷಕರಿಗೆ ಪ್ರಶಸ್ತಿ ದೊರಕಿರುವುದು ಶ್ರೀ ಬ್ರಾಹ್ಮೀ ದುರ್ಗಾ ಪರಮೇಶ್ವರಿ ಶಾಲೆಯ ವಿದ್ಯಾರ್ಥಿಗಳಿಗೂ ಸಂತಸ ತಂದಿದೆ.












Click it and Unblock the Notifications