Attur Basilica: ಅತ್ತೂರು ಜಾತ್ರೆ ಆರಂಭಗೊಂಡರೆ ರಾತ್ರಿ ಆಗುವುದಿಲ್ಲ: ಸಂತ ಲಾರೆನ್ಸ್ ಜಾತ್ರೆಗೆ ಕ್ಷಣಗಣನೆ
ಉಡುಪಿ, ಜ 21: ಜಿಲ್ಲೆಯ ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಚರ್ಚ್ , ಕರಾವಳಿಯ ಬಹುಮುಖ್ಯ ಧಾರ್ಮಿಕ ಕೇಂದ್ರ. ಹಿಂದೂ, ಮುಸ್ಲಿಂ, ಕ್ರೈಸ್ತರನ್ನು ವರ್ಷಂಪ್ರತಿ ಒಂದುಗೂಡಿಸುವ ಇಲ್ಲಿಯ ಅತ್ತೂರು ಜಾತ್ರೆ ಇನ್ನೂ ವಿಶೇಷ. ಕ್ರಿಶ್ಚನ್ನರಂತೆಯೇ ಹಿಂದೂ, ಮುಸ್ಲಿಮರು ಈ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದು ವಿಶೇಷ.
"ನೀವು ನನಗೆ ಸಾಕ್ಷಿಗಳಾಗುವಿರಿ" ಎಂಬುದು ಈ ಬಾರಿಯ ವಾರ್ಷಿಕ ಜಾತ್ರೆಯ ಘೋಷವಾಕ್ಯ. ಜನವರಿ 22 ರಿಂದ 26ರತನಕ ಇಲ್ಲಿ ವಾರ್ಷಿಕ ಉತ್ಸವ ನಡೆಯಲಿದ್ದು ಒಟ್ಟು 35 ಬಲಿಪೂಜೆಗಳು ನಡೆಯಲಿವೆ.
ಪ್ರತೀ ದಿನ ಪೂರ್ವಾಹ್ನ 8, 10, 12, ಅಪರಾಹ್ನ 2, 4, 6, 8 ಗಂಟೆಗೆ ಬಲಿಪೂಜೆಗಳು ನಡೆಯಲಿವೆ. ಜ. 21ರಂದು ಮಧ್ಯಾಹ್ನ 3.30ಕ್ಕೆ ಅಸ್ವಸ್ಥರಿಗಾಗಿ ದಿವ್ಯ ಬಲಿಪೂಜೆ, ಆರಾಧನೆ ಹಾಗೂ ಪರಮ ಪ್ರಸಾದದ ಮೆರವಣಿಗೆ ಇರಲಿದೆ.

ದೇವಸ್ಥಾನ ಮಾದರಿಯ ಪುಷ್ಕರಣಿ:
ಹಿಂದೂ ದೇವಾಲಯದಂತೆ ಈ ಚರ್ಚ್ ನಲ್ಲೂ ಪುಷ್ಕರಣಿ ಇದೆ. ಇಲ್ಲಿನ ಆರಾಧ್ಯ ದೈವ ಸಂತ ಲಾರೆನ್ಸ್ ಸಂತಾನಭಾಗ್ಯ ಸೇರಿದಂತೆ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ. ಅದಕ್ಕಾಗಿ ವಿವಿಧ ಗಾತ್ರದ ಕ್ಯಾಂಡಲ್ಗಳನ್ನು ತಂದು ಜನರು ತಮ್ಮ ಬೇಡಿಕೆಗಳನ್ನು ದೇವರ ಮುಂದಿಡುತ್ತಾರೆ. ಇಲ್ಲಿ ಕ್ಯಾಂಡಲ್ ಹಚ್ಚಿ ಬೇಡಿಕೊಂಡರೆ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂಬ ನಂಬಿಕೆ ಎಲ್ಲ ಧರ್ಮೀಯರಲ್ಲೂ ಇದೆ.
ಅತ್ತೂರು ಜಾತ್ರೆ ಆರಂಭಗೊಂಡರೆ ರಾತ್ರಿ ಆಗುವುದಿಲ್ಲ ಎಂಬುದು ಪ್ರತೀತಿ. ಆ ದಿನಗಳಲ್ಲಿ ಹಗಲು ರಾತ್ರಿಯೆನ್ನದೆ ಜನಸಾಗರವೇ ಹರಿದು ಬರುತ್ತದೆ. ವಾರ್ಷಿಕ ಜಾತ್ರೆ ಹಿನ್ನೆಲೆಯಲ್ಲಿ ಸಂತ ಲಾರೆನ್ಸ್ ಚರ್ಚ್‌ಗೆ ವಿಶೇಷವಾಗಿ ವಿದ್ಯುತ್ ದೀಪ ಅಲಂಕಾರ ಮಾಡಲಾಗುತ್ತಿದೆ.
ಸಹಸ್ರಾರು ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಜಿಲ್ಲಾಡಳಿತದ ಸಹಕಾರ ದೊಂದಿಗೆ ನಡೆದಿವೆ" ಎಂದು ಬಸಿಲಿಕಾದ ವಂ| ಆಲ್ವನ್ ಡಿ'ಸೋಜಾ ಮಾಹಿತಿ ನೀಡಿದ್ದಾರೆ.












Click it and Unblock the Notifications