ಉಡುಪಿ: ಪೂಜೆ ಮಾಡಿ ಹೆಸರು ಬದಲಾಯಿಸಿದರೂ ಬಿಡದ ಲಾಡ್ಜ್ ಗ್ರಹಚಾರ; ಮತ್ತೊಂದು ಆತ್ಮಹತ್ಯೆ
ಉಡುಪಿ, ಏಪ್ರಿಲ್ 20: ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ಉಡುಪಿಯ ಖಾಸಗಿ ಲಾಡ್ಜ್ ಆತ್ಮಹತ್ಯೆ ಸ್ಪಾಟ್ ಆಗುತ್ತಿದೆಯಾ ಎನ್ನುವ ಅನುಮಾನ ಮೂಡುತ್ತಿದೆ. ಯಾಕೆಂದರೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಕೆಲವೇ ದಿನಗಳಲ್ಲಿ ಮತ್ತೋರ್ವ ಯುವಕ ಅದೇ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಉಡುಪಿಯ ಲಾಡ್ಜ್ ಹೆಸರು ಬದಲಾಯಿಸಿ, ನವಗ್ರಹ ಪೂಜೆ ಮಾಡಿಸಿದರೂ, ಈಗ ಮತ್ತೊಂದು ಆತ್ಮಹತ್ಯೆ ಅದೇ ಲಾಡ್ಜ್‌ನಲ್ಲಿ ಆಗಿದ್ದು, ಲಾಡ್ಜ್ ಮಾಲೀಕರನ್ನು ಕಂಗೆಡಿಸಿದೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ತನಿಖೆ ಹಂತದಲ್ಲಿ ಇದೆ. ಆದರೆ ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ಉಡುಪಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ಇರುವ ಶಾಂಭವಿ ಲಾಡ್ಜ್ ಆತ್ಮಹತ್ಯೆ ಸ್ಪಾಟ್ ಆಗುತ್ತಿದೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಎಂಟು ದಿನ ನಂತರ ಮತ್ತೊಬ್ಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಂಗಳೂರಿನ ಅಂಬ್ಲಮೊಗರು ನಿವಾಸಿ, ವೃತ್ತಿಯಲ್ಲಿ ಮೆಡಿಕಲ್ ರೆಪ್ ಆಗಿರುವ ಶರಣ್ ರಾಜ್ (33)ಎಂಬಾತ ಲಾಡ್ಜ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದು ಲಾಡ್ಜ್ ಮಾಲಿಕರು ಮತ್ತೆ ತಲೆನೋವು ತರಿಸಿದೆ.
ಸಂತೋಷ್ ಪಾಟೀಲ್ ಸಾವಿನ ಬಳಿಕ ಶಾಂಭವಿ ಲಾಡ್ಜ್‌ಗೆ ಜನ ಬರುವುದು ಕೂಡ ಕಡಿಮೆ ಆಗಿತ್ತು. ಹೀಗಾಗಿ ಮತ್ತೆ ಹಿಂದಿನಂತೆ ಮತ್ತೆ ಜನ ಬರುವಂತೆ ಆಗಲಿ, ಇನ್ನು ಮುಂದೆ ಯಾವುದೇ ತೊಂದರೆ ಆಗದಿರಲಿ ಅಂತ ಹೋಟೆಲ್‌ನಲ್ಲಿ ಹಾಗೂ ಸಂತೋಷ್ ಆತ್ಮಹತ್ಯೆ ಮಾಡಿಕೊಂಡ 207 ರೂಮ್‌ನಲ್ಲಿ ವಿಶೇಷ ಹೋಮ ಹಾಗೂ ಪೂಜೆಯನ್ನು ಲಾಡ್ಜ್ ಮಾಲೀಕರು ಮಾಡಿಸಿದ್ದರು.
ಅಲ್ಲದೇ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಅದೇ ಹೆಸರು ಇದ್ದರೆ ಜನರು ಬರುವುದಿಲ್ಲ ಅಂತ ಇತ್ತೀಚೆಗೆ ಶಾಂಭವಿ ಬದಲಾಗಿ 'ಸಂಭ್ರಮ' ಅಂತ ಹೆಸರು ಬದಲಾವಣೆ ಮಾಡಿದ್ದರು. ಲಾಡ್ಜ್ ದ್ವಾರದ ದಿಕ್ಕು ಸರಿ ಇಲ್ಲ. ಹೀಗಾಗಿ ಪ್ರವೇಶ ದ್ವಾರದ ದಿಕ್ಕನ್ನೇ ಬದಲಾಯಿಸಲು ಪ್ಲಾನ್ ಮಾಡಿಕೊಂಡಿದ್ದರು. ಈ ನಡುವೆ ಈಗ ಮತ್ತೊಂದು ಆತ್ಮಹತ್ಯೆ ಲಾಡ್ಜ್‌ನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕ ಶರಣ್ ರಾಜ್ ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಅಂತಾ ಹೇಳಲಾಗಿದೆ. ಉಡುಪಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಲಾಡ್ಜ್ ಪರಿಸ್ಥಿತಿಯೇ ಸರಿ ಇಲ್ಲ ಎನ್ನುವಂತಾಗಿದೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಬಳಿಕ ಜನ ಬರುವುದಿಲ್ಲ ಅಂತ ನೊಂದು ದೇವರ ಮೊರೆ ಹೋದ ಮಾಲಿಕರಿಗೆ ಈಗ ಯುವಕನ ಆತ್ಮಹತ್ಯೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications