ತುಮಕೂರಿನಲ್ಲಿ ಆನೆಗಳನ್ನು ಕಾಡಿಗಟ್ಟಲು ಹರಸಾಹಸ
ತುಮಕೂರು, ಫೆ.3 : ಭಾನುವಾರ ಮುಂಜಾನೆ ತುಮಕೂರು ನಗರದ ಹೃದಯ ಭಾಗಕ್ಕೆ ನುಗ್ಗಿ ಜನರನ್ನು ಆತಂಕಗೊಳಿಸಿದ್ದ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಗೆ ಸೋಮವಾರ ಆರಂಭವಾಗಲಿದೆ. ಇದಕ್ಕಾಗಿ ದುಬಾರೆ ಶಿಬಿರದಿಂದ ಮೂರು ಸಾಕಾನೆಗಳನ್ನು ತುಮಕೂರಿಗೆ ಕರೆಸಲಾಗಿದೆ. ಒಟ್ಟು ಎರಡು ಗುಂಪುಗಳಲ್ಲಿ 9 ಕಾಡಾನೆಗಳು ನಗರದ ಹೊರವಲಯದಲ್ಲಿ ಬಿಡಾರ ಹೂಡಿವೆ.
ತುಮಕೂರು ನಗರದ ಹೊರವಲಯದ ಮಲ್ಲಸಂದ್ರ ಕೆರೆಯಲ್ಲಿ 6 ಆನೆಗಳು ಮತ್ತು ಗುಳೂರು ಕೆರೆಯಲ್ಲಿ 3 ಆನೆಗಳು ಬೀಡುಬಿಟ್ಟಿವೆ. ಇವುಗಳನ್ನು ಬನ್ನೇರುಘಟ್ಟ ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು ತಯಾರಿ ನಡೆಸಿದ್ದು, ಅದಕ್ಕಾಗಿ ದುಬಾರೆ ಶಿಬಿರದಿಂದ ಮೂರು ಸಾಕಾನೆಗಳನ್ನು ಕರೆಸಲಾಗಿದೆ.

ಸೋಮವಾರ ಬೆಳಗ್ಗೆ ತುಮಕೂರಿಗೆ ಆಗಮಿಸಿರುವ ಮೂರು ಸಾಕಾನೆಗಳು ಸಿದ್ಧಾರ್ಥ ನರ್ಸರಿಯಲ್ಲಿವೆ. ಮಧ್ಯಾಹ್ನದ ವೇಳೆಗೆ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಆನೆಗಳು ಎರಡು ಗುಂಪುಗಳಾಗಿದ್ದು, ಕಾರ್ಯಾಚರಣೆಗೆ ಸ್ಪಲ್ಪ ಅಡ್ಡಿ ಉಂಟುಮಾಡಿದೆ.
ಭಾನುವಾರ ಬೆಳಗ್ಗೆ ನಗರದಲ್ಲಿ ಪರೇಡ್ : ಮೂರು ಕಾಡಾನೆಗಳು ಭಾನುವಾರ ಬೆಳಗ್ಗೆ ತುಮಕೂರು ನಗರಕ್ಕೆ ಆಗಮಿಸಿ ಜನರನ್ನು ತಲ್ಲಣಗೊಳಿಸಿದ್ದವು. ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳಿದ್ದ ಮಾರ್ಗದ ವಾಹನ ಸಂಚಾರ ಬಂದ್ ಮಾಡಿದರು. ಅಲ್ಲದೇ ಜನತೆಗೆ ಮೈಕ್ ಮೂಲಕ ಆನೆ ಬಂದಿವೆ, ಮನೆಯಿಂದ ಹೊರಗೆ ಬರಬೇಡಿ ಎಂದು ಮಾಹಿತಿ ನೀಡಿದರು.
ಮುಂಜಾನೆ ವಾಯು ವಿಹಾರಕ್ಕೆ ಬರುವವರಿಗೂ ಮಾಹಿತಿ ನೀಡಿದರು. ಅರಣ್ಯ ಇಲಾಖೆಯ 30ಕ್ಕೂ ಹೆಚ್ಚು ಸಿಬ್ಬಂದಿ ಪಟಾಕಿ ಹೊಡೆದು, ಡೋಲು ಬಾರಿಸಿ ಆನೆಗಳನ್ನು ಗುಳೂರು ಕೆರೆಗೆ ಓಡಿಸುವಲ್ಲಿ ಯಶಸ್ವಿಯಾದರು. ಆದ್ದರಿಂದ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ. ಆದರೆ, ಕೆಲವು ಮನೆಯ ಕಾಪೌಂಡ್ ಆನೆ ದಾಳಿಯಿಂದ ಧ್ವಂಸವಾಗಿದೆ.
ಭಾನುವಾರ 3 ಕಾಡಾನೆಗಳು ತುಮಕೂರು ರಿಂಗ್ ರಸ್ತೆ ಮೂಲಕ ನಗರ ಪ್ರವೇಶಿಸಿ. ಅಲ್ಲಿಂದ ನಗರದ ಹೃದಯ ಭಾಗವಾದ ಅಶೋಕನಗರ, ಎಚ್.ಎಂ.ಎಸ್ ಕಾಲೇಜು, ಗೋಕುಲ ಬಡಾವಣೆ ಸುತ್ತಮುತ್ತ ಸಂಚಾರ ಮಾಡಿವೆ. ಅಲ್ಲಿಂದ ನಗರದ ರೈಲ್ವೆ ಹಳಿ ದಾಟಿ ರಾತ್ರಿ 2 ಗಂಟೆ ಸುಮಾರಿಗೆ ಎಸ್.ಐ.ಟಿ ಕಾಲೇಜಿನ ಕ್ರೀಡಾಂಗಣದ ಕಾಂಪೌಂಡ್ ಗೋಡೆ ಒಡೆದು ಒಳನುಗ್ಗಿವೆ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಪೊಲೀಸರು ಪಟಾಕಿ ಸಿಡಿಸಿದ್ದರಿಂದ ನಗರದ ರೈಲ್ವೆ ಗೇಟ್ ದಾಟಿ ಗುಳೂರು ಕೆರೆ ಸೇರಿಕೊಂಡಿವೆ.












Click it and Unblock the Notifications