Tumakuru Lok Sabha Election 2024: ಕಾಂಗ್ರೆಸ್‌ಗೆ ಆತಂಕ ಮೂಡಿಸಿದ ಹೊಸ ಸಮೀಕ್ಷೆ!
ತುಮಕೂರು, ಏಪ್ರಿಲ್. 11: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಈಗಾಗಲೇ ಪಕ್ಷಗಳಲ್ಲೇ ಆಂತರಿಕ ಸಮೀಕ್ಷೆಗಳು ಹೊರಬರುತ್ತಿವೆ. ಇದರ ಜೊತೆಗೆ ಹಲವು ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು ಚುನಾವಣಾ ಪೂರ್ವ ಸಮೀಕ್ಷೆ ನಡೆಸುತ್ತಿವೆ. ಇದೇ ರೀತಿ ಕಲ್ಪತರು ನಾಡು ತುಮಕೂರು ಲೋಕಸಭಾ ಕ್ಷೇತ್ರದ ಬಗ್ಗೆಗೂ ಸಮೀಕ್ಷೆ ವರದಿ ಹೊರಬಿದ್ದಿದೆ.
ತುಮಕೂರಿನಲ್ಲಿ ಈ ಕಾಂಗ್ರೆಸ್ ಪಕ್ಷವೂ ಮಾಜಿ ಸಂಸದ ಮುದ್ದ ಹನುಮೇಗೌಡರಿಗೆ ಮಣೆ ಹಾಕಿದೆ. ಆದರೆ ಹೊಸ ಪ್ರಯೋಗಕ್ಕೆ ಮುಂದಾಗಿರುವ ಬಿಜೆಪಿ ಮಾತ್ರ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಇದಲ್ಲದೆ ಮೈತ್ರಿ ಅಭ್ಯರ್ಥಿಯಾಗಿ ಸ್ಥಳೀಯರಲ್ಲದ ಮಾಜಿ ಸಚಿವ ವಿ ಸೋಮಣ್ಣ ಅವರನ್ನು ಕಣಕ್ಕಿಳಿಸಿದೆ. ಇದಕ್ಕೆ ಪಕ್ಷದಲ್ಲೇ ದೊಡ್ಡ ಬಂಡಾಯ ಎದುರಿಸಿದೆ ಬಿಜೆಪಿ. ಹೀಗಿರುವಾಗ ಸ್ಥಳೀಯ ಮಾಧ್ಯಮ ಸಂಸ್ಥೆಯ ಸಮೀಕ್ಷೆ ಕಾಂಗ್ರೆಸ್‌ಗೆ ಆಘಾತ ನೀಡುವಂತಿದೆ.

ತುಮಕೂರು ನ್ಯೂಸ್ ಸಮೀಕ್ಷೆ ಹೇಳೊದೇನು?
ತುಮಕೂರಿನ ಸ್ಥಳೀಯ ಮಾಧ್ಯಮ ಸಂಸ್ಥೆಯಾದ ತುಮಕೂರು ನ್ಯೂಸ್ ಮತದಾರರ ಸಮೀಕ್ಷೆ ನಡೆಸಿದ್ದು, ವರದಿಯನ್ನು ಬಹಿರಂಗ ಮಾಡಿದೆ. ಈ ಸಮೀಕ್ಷೆಯ ಪ್ರಕಾರ ತುಮಕೂರು ಲೋಕಸಭೆ ಚುನಾವಣೆಯಲ್ಲಿ ಬಹುಪಾಲು ಮತದಾರರು ಬೆಜೆಪಿ- ಜೆಡಿಎಸ್ ಅಭ್ಯರ್ಥಿ ವಿ.ಸೋಮಣ್ಯ ಪರವಾಗಿ ಒಲವು ತೋರಿದ್ದಾರೆ ಎಂದಿದೆ.
ಕಲ್ಪತರು ನಾಡು ತುಮಕೂರಿನಲ್ಲಿ ವಿ ಸೋಮಣ್ಣ ಕಣಕ್ಕಿಳಿಯುವ ಮೂಲಕ ಸಕತ್ ಸುದ್ದಿಯಲ್ಲಿದ್ದಾರೆ. ಬಿಜೆಪಿಯಲ್ಲಿನ ಒಳಬೇಗುದಿ ಅವರನ್ನು ಸೋಲಿನತ್ತ ತಳ್ಳಲಿದೆ ಎನ್ನುವ ಊಹಾಪೋಹಗಳನ ನಡುವೆಯೇ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ www.tumkurnews.in ನಡೆಸಿದ ಆನ್ ಲೈನ್ ಮತದಾನ ಪ್ರಕ್ರಿಯೆ ಬೇರೆಯೆ ವರದಿ ನೀಡಿದೆ.
ಈ ಸಮೀಕ್ಷೆಗೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎನ್‌ಡಿಎ ಅಭ್ಯರ್ಥಿ ವಿ.ಸೋಮಣ್ಣ ಪರವಾಗಿ ಹೆಚ್ಚಿನ ಮತದಾರರು ಮತ ಚಲಾಯಿಸಿದ್ದಾರೆ. ಗೆಲ್ಲುವ ಅಭ್ಯರ್ಥಿ ಎಂದೇ ಪರಿಗಣಿಸಲಾಗಿರುವ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ ಎರಡನೇ ಸ್ಥಾನದಲ್ಲಿ ಇದ್ದಾರೆ.

ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಅವರ ಕಡೆಗೆ ಶೇಕಡಾ 59.11 ರಷ್ಟು ಜನರು ಒಲವು ತೋರಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಸ್ ಪಿ ಮುದ್ದಹನುಮೇಗೌಡ ಪರವಾಗಿ ಶೇಕಡಾ 39.62 ರಷ್ಟು ಜನರು ಮತ ಹಾಕಿದ್ದಾರೆ. ಇನ್ನು, ಇತರೆ ಅಭ್ಯರ್ಥಿಗಳಿಗೆ ಶೇಕಡಾ 1.26 ರಷ್ಟು ಮತದಾರರು ಜೈ ಎಂದಿದ್ದಾರೆ.
ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳು
ಈ ಬಾರಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಒಟ್ಟು 22 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂತೆಗೆದುಕೊಳ್ಳಲು ನಿಗದಿಯಾಗಿದ್ದ ಏಪ್ರಿಲ್ 8 ರಂದು 4 ಪಕ್ಷೇತರ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆದಿದ್ದಾರೆ. ಹೀಗಾಗಿ ಅಂತಿಮವಾಗಿ 18 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
* ಕಾಂಗ್ರೆಸ್ : ಎಸ್‌ಪಿ ಮುದ್ದಹನುಮೇಗೌಡ
* ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ : ವಿ.ಸೋಮಣ್ಣ
* ಬಹುಜನ ಸಮಾಜ ಪಕ್ಷ (ಬಿಎಸ್‌ಪಿ): ರಾಜಸಿಂಹ ಜೆ.ಎನ್
* ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ : ಪ್ರದೀಪ್ ಕುಮಾರ್ ದೊಡ್ಡ ಮುದ್ದೇಗೌಡ
* ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್): ಎಸ್.ಎನ್. ಸ್ವಾಮಿ
* ನ್ಯಾಷನಲ್ ಮಹಾಸಭಾ ಪಕ್ಷ : ಬಸವರಾಜು
* ಕನ್ನಡ ಪಕ್ಷ : ಡಾ. ಎಚ್.ಬಿ.ಎಂ. ಹಿರೇಮಠ್
ಪಕ್ಷೇತರ ಅಭ್ಯರ್ಥಿಗಳಾಗಿ ಕಪನಿ ಗೌಡ, ಬಿ.ದೇವರಾಜು, ಆರ್.ನಾರಾಯಣಪ್ಪ, ನೀಲಕಂಠೇಶ ಎಚ್.ಎಸ್. , ಆರ್. ಪುಷ್ಪ, ಪ್ರಕಾಶ್ ಆರ್ ಎ ಜೈನ್, ಮಲ್ಲಿಕಾರ್ಜುನಯ್ಯ, ಎಚ್.ಎಲ್. ಮೋಹನ್ ಕುಮಾರ್, ರಂಗನಾಥ ಆರ್.ಎಸ್., ಜೆ.ಕೆ ಸಮಿ ಮತ್ತು ಸಿದ್ದರಾಮೇಗೌಡ ಟಿ.ಬಿ ಕಣಕ್ಕಿಳಿದಿದ್ದಾರೆ.












Click it and Unblock the Notifications