ರಾಜ್ಯದ ಈ ರೈಲು ನಿಲ್ದಾಣಕ್ಕೆ ಶ್ರೀ ಶಿವಕುಮಾರ ಸ್ವಾಮೀಜಿ ಹೆಸರು: ಜಿ.ಪರಮೇಶ್ವರ ಮಹತ್ವದ ಅಪ್ಡೇಟ್ಸ್
ತುಮಕೂರು, ಏಪ್ರಿಲ್ 10: ನಮ್ಮ ಕುಟುಂಬಕ್ಕೂ ತುಮಕೂರಿನ ಮಠ ಮಠಕ್ಕೂ ಅವಿನಾಭವ ಸಂಬಂಧವಿದೆ. ಇತ್ತೀಚೆಗೆ ನಡೆದ ಶ್ರೀಶಿವಕುಮಾರ ಸ್ವಾಮೀಜಿಗಳ ಜನ್ಮದಿನಾಚರಣೆಗೆ ಬರಲು ಆಗಿರಲಿಲ್ಲ. ಅದಕ್ಕಾಗಿ ಇಂದು ಸ್ವಾಮೀಜಿಗೆ ಗೌರವ ಸಮರ್ಪಣೆ ಮಾಡಲು ಬಂದಿದ್ದೇನೆ. ಸಿದ್ದಲಿಂಗಸ್ವಾಮೀಜಿಗೆ ನಮನ ಸಲ್ಲಿಸಿದ್ದೇನೆ. ನಮ್ಮ ತಂದೆ ಹಾಗೂ ಹಿರಿಯ ಸ್ವಾಮೀಜಿ ಜೊತೆಗೆ ಇದ್ದಂತಹ ಸಂಬಂಧ ಯಾವಾಗಲೂ ಇರುತ್ತದೆ ಎಂದಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು, ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರಿಡುವ ಕುರಿತು ಮಹತ್ವದ ಅಪ್ಡೇಟ್ ನೀಡಿದ್ದಾರೆ.
ಗುರುವಾರ ತುಮಕೂರಿನ ಸಿದ್ದಗಂಗಾ ಮಠದ ಭೇಟಿ ನಂತರ ಸುದ್ದಿಗಾರರ ಬಳಿ ಮಾತನಾಡಿದ ಅವರು, ಶ್ರೀ ಶಿವಕುಮಾರ ಸ್ವಾಮೀಜಿಗಳ ಅಪಾರ ಭಕ್ತಗಣಕ್ಕೆ ಸಿಹಿ ಸುದ್ದಿ ನೀಡಿದ್ದಾರೆ. ತುಮಕೂರು ರೈಲ್ವೇ ನಿಲ್ದಾಣಕ್ಕೆ ಶಿವಕುಮಾರ ಸ್ವಾಮೀಜಿ ಹೆಸರಿಡುವ ವಿಚಾರಕ್ಕೆ ಪ್ರತಕ್ರಿಯಿಸಿದರು. ಇಲ್ಲಿನ ನಿಲ್ದಾಣಕ್ಕೆ ಸ್ವಾಮೀಜಿ ಹೆಸರಿಡುವ ಪ್ರಸ್ತಾವನೆ ಸರ್ಕಾರಕ್ಕೆ ಬಂದಿತ್ತು.

ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆಗೆ ಮಾತನಾಡಿ, ಒಪ್ಪಿಗೆ ಪಡೆದು ಆದೇಶ ಹೊರಡಿಸಲಾಗುತ್ತದೆ. ಈ ಮೂಲಕ ತುಮಕೂರು ರೈಲ್ವೇ ನಿಲ್ದಾಣ ಸ್ವಾಮೀಜಿ ಅವರ ಹೆಸರಿನಲ್ಲಿ ಶಾಶ್ವತವಾಗಿ ಇರುತ್ತದೆ ಎಂದು ಹೇಳಿದರು.
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶಿವಕುಮಾರ ಸ್ವಾಮೀಜಿಗಳ ಹೆಸರು ಇಡುವ ಮೂಲಕ ಸರ್ಕಾರ ಅವರಿಗೆ ಗೌರವ ಕೊಡುವ ಕೆಲಸ ಮಾಡಲಿದೆ. ಈ ಬಗ್ಗೆ ಕೇಂದ್ರ ಸಚಿವ ವಿ.ಸೋಮಣ್ಣನವರು ಒತ್ತಾಯ ಮಾಡಿದ್ದಾರೆ. ರೈಲ್ವೆ ಇಲಾಖೆಯಿಂದ ಕೇಂದ್ರದಲ್ಲಿ ಮಂಜೂರು ಮಾಡಿಸಿದ್ದಾರೆ. ಈ ವಿಚಾರದಲ್ಲಿ ವಿಳಂಬವಾಗಿಲ್ಲ. ಸರ್ಕಾರ ಪ್ರಕ್ರಿಯೆ ನಿಯಮಾನುಸಾರವೇ ನಡೆಯಬೇಕಿರುತ್ತದೆ.
ಯಾವುದೇ ರಸ್ತೆಗೆ, ಸರ್ಕಲ್, ಕಟ್ಟಡಕ್ಕೆ ಹೆಸರಿಡಬೇಕಾದರೆ ಒಂದು ಪ್ರೊಸಿಜರ್ ಇರಲಿದ್ದು, ಅದನ್ನು ಪಾಲಿಸಬೇಕಾಗುತ್ತದೆ.
ಪ್ರಸ್ತಾವನೆಗಳು ಬಂದಾಗ ಪರಿಶೀಲನೆ ಮಾಡಿ, ಸಾಧಕ ಭಾದಕಗಳನ್ನ ನೋಡಿ ಸರ್ಕಾರ ಅನುಮತಿ ಕೊಡುತ್ತದೆ. ಇದೆಲ್ಲ ಪ್ರಕ್ರಿಯೆಗಾಗಿ ಕೊಂಚ ತಡವಾಗಿರಬಹುದು. ಶೀಘ್ರವೇ ರೈಲ್ವೆ ನಿಲ್ದಾಣಕ್ಕೆ ಹೆಸರಿಡಲಾಗುವುದು ಎಂದು ಜಿ.ಪರಮೇಶ್ವರ ಹೇಳಿದರು.

ಭದ್ರಾ ಮೇಲ್ದಂಡೆ ಹಣ ನೀಡದ ಕೇಂದ್ರ..
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಒತ್ತಾಯ ಮಾಡಲಾಗಿದೆ. ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆಗೆ ಮನವಿ ಮಾಡಿದ್ದೇವೆ. ಕೇಂದ್ರವು ಎರಡು ವರ್ಷದ ಹಿಂದೆ 5300 ಕೋಟಿ ರೂಪಾಯಿ ಅನುದಾನ ಕೊಡುವುದಾಗಿ ತಿಳಿಸಿತ್ತು. ಆದರೆ ಬಜೆಟ್‌ನಲ್ಲಿ ಹೇಳಿದಂತೆ ನಡೆದುಕೊಂಡಿಲ್ಲ ಎಂದರು.
ಹೀಗೆ ಅನುದಾನ ಸಿಗುವ ಘೋಷಣೆ ಕೇಳಿ ಬಹಳ ಸಂತೋಷವಾಗಿತ್ತು. ಈ ಬೃಹತ್ ಯೋಜನೆಯಿಂದ ಅನೇಕ ತಾಲ್ಲೂಕುಗಳಿಗೆ ಅನುಕೂಲವಾಗಲಿದೆ ಎಂದು ಭಾವಿಸಿದ್ದೆವು. ಆದರೆ ಕಾರಣಾಂತರಗಳಿಂದ ಹಣ ಅವರು ಕೊಡಲಿಲ್ಲ. ಆದರೆ ಯೋಜನೆ ನಿಲ್ಲಿಸುವ ಮನಸ್ಸಿಲ್ಲ. ಬೇಗೆ ಕಾಮಗಾರಿ ಪೂರ್ಣಗೊಳಿಸಲು ನಮ್ಮ ಸರ್ಕಾರ ಮುಂದಾಗಿದೆ. ಕೆಲವು ಕಡೆಗಳಲ್ಲಿ ಅರಣ್ಯ ಪ್ರದೇಶ ಎದುರಾಗಿದ್ದು, ಅಲ್ಲಿ ಕೊಂಚ ತಡವಾಗಿದೆ. ಈ ಯೋಜನೆಯಿಂದ ಮಧುಗಿರಿಗೆ ಸ್ವಲ್ಪ ನೀರು ಸಿಗಲಿದೆ. ಆದರೆ ಕೊರಟಗೆರೆ ಬರುವುದು ಅನುಮಾನ ಎಂದು ಅವರು ವಿವರಿಸಿದರು.
ಪಾವಗಡಕ್ಕೆ ನೀರು ಲಭ್ಯತೆ : ಎತ್ತಿನಹೊಳೆ ಯೋಜನೆ ಅಪ್ಡೇಟ್ಸ್
ರೂಪಾಯಿ 2300 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆ ಮಾಡಿದ್ದು, ಚಳ್ಳಕೆರೆ, ಕೂಡ್ಲಗಿ, ಹಿರಿಯೂರು ಎಲ್ಲಾ ಕಡೆಗೂ ನೀರು ಹರಿದು ಬರಲಿದೆ. ಪಾವಗಡಕ್ಕೆ ಈಗಾಗ್ಲೆ 328 ಹಳ್ಳಿಗಳಲ್ಲಿ 270 ಹಳಿಗಳಿಗೆ ನೀರು ಕೊಡುತ್ತಿದ್ದೇವೆ. ಈ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀಘ್ರವೇ ಜಾರಿಗೊಳಿಸಲಿದ್ದಾರೆ.
ಎತ್ತಿನಹೊಳೆ ಯೋಜನೆಯ ಕಾಮಗಾರಿ ನಡೆಯುತ್ತಿದೆ. ಅದಕ್ಕಾಗಿ ಹಣ ಬಿಡುಗಡೆ ಮಾಡಲಿದ್ದೇವೆ. ಆರ್ಥಿಕ ವ್ಯವಸ್ಥೆ ಯಲ್ಲಿ ಅನುದಾನ ಒದಗಿಸುತ್ತಿದ್ದೇವೆ. ಮುಂದಿನ ಜೂನ್ ತಿಂಗಳಲ್ಲಿ ಅರಸಿಕೆರೆಗೆ ನೀರು ತಲುಪಲಿದೆ. ಮುಂದಿನ ವರ್ಷ ಜೂನ್ ಗೆ ತುಮಕೂರಿಗೆ ನೀರು ಬರಬಹುದು. ಈಗಲೂ ತುಮಕೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಅವರು ಹೇಳಿದರು.
ಮೇ ನಲ್ಲಿ ಹೇಮಾವತಿಯಿಂದ ಒಂದೇರಡು ಟಿಎಂಸಿ ನೀರು ಬಿಡಿಸುವಂತೆ ಹಾಸನ ಉಸ್ತುವಾರಿ ರಾಜಣ್ಣ ಜೊತೆಗೆ ಮಾತನಾಡುತ್ತೇವೆ ಎಂದು ಅವರು, ಎಐಸಿಸಿ ಅಧಿವೇಶನಕ್ಕೆ ಗೈರು ಕುರಿತು ಉತ್ತರಿಸಿದರು. ನಾವೆಲ್ಲರೂ ಎಐಸಿಸಿ ಸದಸ್ಯರು. ನಮಗೆ ಎಐಸಿಸಿ ಅಧಿವೇಶನಕ್ಕೆ ಆಹ್ವಾನ ಇರುತ್ತದೆ. ಆದರೆ ಕಾರಣಾಂತರಗಳಿಂದ ಹೋಗಲು ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು.












Click it and Unblock the Notifications