ಅಮೆರಿಕಾದಲ್ಲಿ ಡಾಕ್ಟರೇಟ್ ಅಧ್ಯಯನಕ್ಕಾಗಿ ತುಮಕೂರಿನ ಈ ವಿದ್ಯಾರ್ಥಿ ಪಡೆದ ಫೆಲೋಶಿಪ್ 3.8 ಕೋಟಿ!
ತುಮಕೂರು, ಜುಲೈ. 06: ತುಮಕೂರಿನ ಇಂಜಿನಿಯರಿಂಗ್ ಪದವೀಧರರೊಬ್ಬರು ಅಮೆರಿಕಾದ ಐವಿ ಲೀಗ್ ಶಾಲೆಯ ಪ್ರತಿಷ್ಠಿತ ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದಲ್ಲಿ ಜೈವಿಕ ಇಂಜಿನಿಯರಿಂಗ್‌ನಲ್ಲಿ ಡಾಕ್ಟರೇಟ್ ಅಧ್ಯಯನ ನಡೆಸಲು ಬರೋಬ್ಬರಿ 4,58,000 ಡಾಲರ್ ಅಂದರೆ 3.8 ಕೋಟಿ ರೂಪಾಯಿ ಫೆಲೋಶಿಪ್ ಪಡೆದಿದ್ದಾರೆ.
ಪ್ರಸ್ತುತ, ಯಶವಂತ ಮಹೇಶ್ ಅವರು ಬೆಂಗಳೂರಿನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಕ್ಯಾನ್ಸರ್ ಸಿಸ್ಟಮ್ಸ್ ಬಯಾಲಜಿ ಲ್ಯಾಬೊರೇಟರಿನಲ್ಲಿ ಸಂಶೋಧನಾ ಸಹಾಯಕರಾಗಿದ್ದಾರೆ. ಅವರು 2020 ರಲ್ಲಿ ತುಮಕೂರಿನ ಸಿದ್ದಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (SIT) ನಿಂದ ಜೈವಿಕ ತಂತ್ರಜ್ಞಾನದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

"ನಾನು ಜೈವಿಕ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಮಾಡುತ್ತೇನೆ. ಇದು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳ ನಡುವಿನ ಅಂತರ-ಶಿಸ್ತಿನ ಕಾರ್ಯಕ್ರಮವಾಗಿದೆ. ಕೋರ್ಸ್ ಅವಧಿಯು 5 ವರ್ಷಗಳು (2023-28). ನಾನು ನೇರ ಪಿಎಚ್‌ಡಿಗೆ ಆಯ್ಕೆಯಾಗಿದ್ದೇನೆ ಹಾಗಾಗಿ ಸಂಪೂರ್ಣ ಫೆಲೋಶಿಪ್ ಬೆಂಬಲ ಸಿಕ್ಕಿದೆ" ಎಂದು ಯಶವಂತ ಮಹೇಶ್ ಸಮತಸ ಹಂಚಿಕೊಂಡಿದ್ದಾರೆ.
ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯವು ಅಮೆರಿಕಾದ ಉನ್ನತ ಶಿಕ್ಷಣಕ್ಕಾಗಿ ಅತ್ಯಂತ ಹಳೆಯ ಸಂಸ್ಥೆಗಳಲ್ಲಿ ಒಂದಾಗಿದೆ. ಎಂಆರ್‌ಎನ್‌ಎ (mRNA) ಲಸಿಕೆ ತಂತ್ರಜ್ಞಾನಗಳನ್ನು ವಿಶ್ವವಿದ್ಯಾನಿಲಯದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ಸಮರ್ಥ ಕೋವಿಡ್-19 ಲಸಿಕೆ ಅಭಿವೃದ್ಧಿಗೆ ಕಾರಣವಾಯಿತು. ಇಂತಹ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರೆಟ್ ಮಾಡಲು ಯಶವಂತ ಮಹೇಶ್ ಅವರಿಗೆ ಸ್ಥಾನ ದೊರೆತಿದೆ.

ಕೃಷಿ ಕುಟುಂಬದಿಂದ ಬಂದ ಯಶವಂತ ಮಹೇಶ್
ಯಶವಂತ ಮಹೇಶ್ ತುಮಕೂರು ಜಿಲ್ಲೆಯ ಹೆಬ್ಬೂರು ಹೋಬಳಿಯ ಕೆಂಬಾಳಾವು ಗ್ರಾಮದ ಕೃಷಿ ಕುಟುಂಬದಿಂದ ಬಂದವರು. ಇನಿಶಿಯೇಟಿವ್ ಫಾರ್ ರಿಸರ್ಚ್ ಅಂಡ್ ಇನ್ನೋವೇಶನ್ ಇನ್ ಸೈನ್ಸ್ (IRIS), ನ್ಯಾಷನಲ್ ಸೈನ್ಸ್ ಫೇರ್ 2012, ನವದೆಹಲಿಯಲ್ಲಿ ಅವರು ತಮ್ಮ ಪ್ರಾಜೆಕ್ಟ್‌ಗಳಿಗಾಗಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.
ವಿಶ್ವದ ಅತಿದೊಡ್ಡ ಪೂರ್ವ ಕಾಲೇಜು ಸಂಶೋಧನಾ ಮೇಳ ಮತ್ತು ಸ್ಟೀಮ್ ಸ್ಪರ್ಧೆಯಾದ ಅಮೆರಿಕಾದ ಫೀನಿಕ್ಸ್‌ನಲ್ಲಿ ವಾರ್ಷಿಕ ಇಂಟೆಲ್ ಇಂಟರ್‌ನ್ಯಾಶನಲ್ ಸೈನ್ಸ್ ಆಫ್ ಎಂಜಿನಿಯರಿಂಗ್ ಫೇರ್ (ISEF) 2013 ರಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸುವ ಕಿರಿಯ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದರು. ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಜೂನಿಯರ್ ಸೈಂಟಿಸ್ಟ್ ಪ್ರಶಸ್ತಿ ಮತ್ತು ಇಂಟೆಲ್ ಫೌಂಡೇಶನ್ ಇಂಡಿಯಾದಿಂದ ಅವಿಷ್ಕಾರ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಇದಲ್ಲದೆ ಯಶವಂತ ಮಹೇಶ್ ಅವರು ಅಂತರರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಅರ್ಧ ಡಜನ್ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ ಈ ಸಾಧನೆಗಾಗಿ ಎಸ್‌ಐಟಿ ಕಾಲೇಜಿನಲ್ಲಿನ ತಮ್ಮ ಶಿಕ್ಷಕರಿಗೆ ಮತ್ತು ಐಐಎಸ್‌ಸಿಯಲ್ಲಿ ವಿಜ್ಞಾನಿಗಳಾದ ಕೆ.ಶೇಖರ್ ಮತ್ತು ಮೋಹಿತ್ ಕುಮಾರ್ ಜಾಲಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.












Click it and Unblock the Notifications