ತುಮಕೂರು ಡಿಸಿ ಹತ್ಯೆ ಯತ್ನ, ತನಿಖೆಗೆ ಸೂಚನೆ
ತುಮಕೂರು, ಏ. 15 : ಮರಳು ಮಾಫಿಯಾದವರು ಜಿಲ್ಲಾಧಿಕಾರಿಯನ್ನು ಕೊಲೆ ಮಾಡಲು ಯತ್ನಿಸಿದ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಸಚಿವ ಟಿ.ಬಿ.ಜಯಚಂದ್ರ ಅವರು ತುಮಕೂರು ಎಸ್ಪಿಗೆ ಸೂಚನೆ ನೀಡಿದ್ದಾರೆ. ಕೊಲೆ ಯತ್ನ ನಡೆದಿರುವ ಬಗ್ಗೆ ಡಿಸಿ ಮಂಗಳವಾರ ಸಚಿವರಿಗೆ ಮಾಹಿತಿ ನೀಡಿದ್ದರು.
ತುಮಕೂರಿನಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರು ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಕೊಲೆ ಯತ್ನ ಪ್ರಕರಣದ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದೇನೆ, ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.[ಮರಳು ಮಾಫಿಯಾದಿಂದ ತಹಶೀಲ್ದಾರ್ ಹತ್ಯೆ ಯತ್ನ]

ತುಮಕೂರು ಜಿಲ್ಲೆಯ ಅಗತ್ಯ ಕಾಮಗಾರಿಗೆ ಮಂಗಳೂರು ಮತ್ತು ಹಾಸನ ಜಿಲ್ಲೆಯಿಂದ ಉತ್ಪಾದಿತ ಮರಳು ಸರಬರಾಜು ಮಾಡಲು ಸೂಚನೆ ನೀಡಲಾಗಿದೆ. ಮರಳು ಮಾಫಿಯಾ ಎಂದು ಹೇಳುವ ವಿರೋಧ ಪಕ್ಷಗಳ ಹೇಳಿಕೆ ಪ್ರಚೋದಿತವಾದದ್ದು, ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು. [ಮರಳು ಮಾಫಿಯಾ ಎಂದರೇನು? ಏನಿದರ ಮರ್ಮ?]
ಡಿಸಿ ಕೊಲೆ ಯತ್ನ : ತುಮಕೂರು ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿಯೇ ಮಂಗಳವಾರ ತಮ್ಮ ಮೇಲೆ ನಡೆದ ಕೊಲೆ ಯತ್ನದ ಬಗ್ಗೆ ಮಾಹಿತಿ ನೀಡಿದ್ದರು. ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಲಾರಿ, ಟ್ರ್ಯಾಕ್ಟರ್ ಮಾಲೀಕರ ಸಭೆಯಲ್ಲಿ ಈ ವಿಷಯ ಬಹಿರಂಗ ಪಡಿಸಿದ್ದರು. [ಅಧಿಕಾರಿಗೆ ಬೆದರಿಕೆ ಹಾಕಿದ ವರ್ತೂರು ವಿರುದ್ಧ ದೂರು]
ಮಧುಗಿರಿಯಿಂದ ತುಮಕೂರಿಗೆ ಮರಳು ಸಾಗಿಸುತ್ತಿದ್ದ ಲಾರಿಯನ್ನು ತಡೆಯಲು ಹೋದಾಗ ನನ್ನ ಕಾರಿಗೆ ಲಾರಿ ಡಿಕ್ಕಿ ಹೊಡೆಸುವ ಯತ್ನ ನಡೆದಿತ್ತು ಎಂಬ ಸತ್ಯವನ್ನು ಹೇಳಿದ್ದರು. ಜಿಲ್ಲಾಧಿಕಾರಿಗಳ ಹೇಳಿಕೆ ಅನ್ವಯ ತನಿಖೆ ನಡೆಸುವಂತೆ ಸಚಿವರು ಸೂಚನೆ ನೀಡಿದ್ದಾರೆ.












Click it and Unblock the Notifications