ಹೆಚ್ಚಿನ ಚಿಕಿತ್ಸೆಗೆ ಚೆನ್ನೈಗೆ ಸಿದ್ದಗಂಗಾ ಶ್ರೀ, ತಜ್ಞ ವೈದ್ಯರಿಂದ ಚಿಕಿತ್ಸೆ
ತುಮಕೂರು, ಡಿಸೆಂಬರ್ 07: ಸಿದ್ದಗಂಗಾ ಶ್ರೀಗಳ ಆರೋಗ್ಯ ಸುಧಾರಿಸಿದೆ ಆದರೆ ತಜ್ಞ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಡಿಸೆಂಬರ್ 7 ರಂದು ಚೆನ್ನೈಗೆ ಕರೆದುಕೊಂಡು ಹೋಗಲಾಗುವುದು ಎಂದು ಸಿದ್ದಗಂಗಾ ಮಠದ ಆಡಳಿತ ಮಂಡಳಿ ಹೇಳಿದೆ.
ಇಂದಿನಿಂದ ಚೆನ್ನೈನ ಪ್ರತಿಷ್ಠಿತ ರೇಲಾ ಇನ್‌ಸ್ಟಿಟ್ಯೂಟ್ ಆಂಡ್ ಮೆಡಿಕಲ್ ಸೆಂಟರ್‌ಗೆ ಸ್ವಾಮೀಜಿ ಅವರನ್ನು ದಾಖಲು ಮಾಡಲಿದ್ದು, ಅಲ್ಲಿಯೇ ಸ್ವಾಮೀಜಿ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತದೆ.
ಗುರುವಾರ ರಾತ್ರಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ಧಗಂಗಾ ಮಠದ ಅಧ್ಯಕ್ಷ ಡಾ.ಸಿದ್ಧಲಿಂಗ ಸ್ವಾಮೀಜಿ , ಶ್ರೀಗಳ ಆರೋಗ್ಯ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಉದ್ದೇಶದಿಂದ ಶುಕ್ರವಾರ ಮಧ್ಯಾಹ್ನ ಅಥವಾ ಸಂಜೆ ಚೆನ್ನೈಗೆ ತೆರಳಲು ನಿರ್ಧರಿಸಲಾಗಿದೆ' ಎಂದು ಹೇಳಿದರು.

'ಸ್ವಾಮೀಜಿ ಅವರಿಗೆ ಸ್ಟೆಂಟ್ ಅಳವಡಿಸುವ ಅಥವಾ ಇತರೆ ಚಿಕಿತ್ಸೆ ನೀಡುವ ಬಗ್ಗೆ ಅಲ್ಲಿಗೆ ಹೋದ ಮೇಲೆ ತಿಳಿಯಲಿದೆ' ಎಂದು ಅವರು ಹೇಳಿದ್ದಾರೆ.
ಸ್ವಾಮೀಜಿಯವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ರವೀಂದ್ರ ಮಾತನಾಡಿ, 'ಸ್ವಾಮೀಜಿ ಆರೋಗ್ಯವಾಗಿದ್ದಾರೆ. ರೋಗ ನಿರೋಧಕ ಔಷಧಿ ನೀಡಲಾಗಿದೆ. ಪದೇ ಪದೇ ಈ ರೀತಿ ಕಾಣಿಸಿಕೊಳ್ಳುವ ಸೋಂಕಿನಿಂದ ಆರೋಗ್ಯ ಸಮಸ್ಯೆ ಆಗುತ್ತಿದೆ. ಅದಕ್ಕಾಗಿ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಲು ಹೆಚ್ಚಿನ ಚಿಕಿತ್ಸೆ ಅನಿವಾರ್ಯವಾಗಿದೆ' ಎಂದು ಮಾಹಿತಿ ನೀಡಿದ್ದಾರೆ.
ವಿಖ್ಯಾತ ವೈದ್ಯ ಡಾ.ಎಲ್.ಎನ್.ಕುಮಾರ್ ಅವರ ನೇತೃತ್ವದಲ್ಲಿ ಚೆನ್ನೈನಲ್ಲಿ ಶ್ರೀಗಳಿಗೆ ಚಿಕಿತ್ಸೆ ನಡೆಯಲಿದೆ. ರಾಜ್ಯದ ವೈದ್ಯರೂ ಸಹ ನಾಳೆ ಸಿದ್ದಗಂಗಾ ಶ್ರೀಗಳ ಜೊತೆ ಚೆನ್ನೈಗೆ ತೆರಳಲಿದ್ದಾರೆ.












Click it and Unblock the Notifications