ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರ ಸಹಾಯಧನ ದುರುಪಯೋಗ: ತನಿಖೆಗೆ ಆಗ್ರಹಿಸಿದ ಶಾಸಕ ಡಾ.ರಂಗನಾಥ್
ತುಮಕೂರು, ಜೂನ್. 07: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಮಂಜೂರಾಗಿರುವ ಕೃಷಿ ಯಂತ್ರೋಪಕರಣ ಖರೀದಿಯ ಸಹಾಯಧನದಲ್ಲಿ ದುರುಪಯೋಗ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಕುಣಿಗಲ್ ಶಾಸಕ ಡಾ.ಹೆಚ್.ಡಿ.ರಂಗನಾಥ್ ಕೃಷಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಂಗಳವಾರ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಶಾಸಕ ಡಾ.ಹೆಚ್.ಡಿ.ರಂಗನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಾಥಮಿಕ ಕೃಷಿ ಸಹಕಾರ ಸಂಘ ಹಾಗೂ ಕೃಷಿ ಪರಿಕರ ಮಾರಾಟಗಾರರ ಸಭೆ ನಡೆಯಿತು. ಈ ವೇಳೆ ಎಸ್‌ಸಿ, ಎಸ್‌ಟಿ ರೈತರ ಸಹಾಯಧನ ದುರುಪಯೋಗ ನಡೆದಿರುವ ಬಗ್ಗೆ ತನಿಖೆ ನಡೆಸುವ ಸಂಬಂಧ ಉಡಾಫೆ ಉತ್ತರ ನೀಡಿದ ಜಿಲ್ಲಾ ಕೃಷಿ ಜಂಟಿ ನಿರ್ದೇಶಕರನ್ನು ಶಾಸಕ ಡಾ.ಹೆಚ್.ಡಿ.ರಂಗನಾಥ್ ಪ್ರಶ್ನಿಸಿದ್ದಾರೆ.

ಸಭೆಯಲ್ಲಿ "ಕೃಷಿ ಯಂತ್ರಧಾರೆ ಯೋಜನಡಿಯಲ್ಲಿ ಪ.ಜಾತಿ, ಪ.ಪಂಗಡ ಫಲಾನುಭವಿಗಳು ಕೃಷಿ ಯಂತ್ರೋಪಕರಣ ಖರೀದಿ ಮಾಡಲು ಸರ್ಕಾರ ಶೇ 70 ರಷ್ಟು ಸಹಾಯಧನ ನೀಡುತ್ತಿದೆ. ಆದರೆ ಖಾಸಗಿ ಕಂಪನಿ ಹಾಗೂ ಅದರ ಡೀಲರ್‌ಗಳು ಫಲಾನುಭವಿಗಳಿಂದ ದಾಖಲೆಗಳನ್ನು ಪಡೆದು ಕೃಷಿ ಇಲಾಖೆಗೆ ಸಲ್ಲಿಸಿ, ಸಬ್ಸಿಡಿ ಹಣವನ್ನು ನೇರವಾಗಿ ಖಾಸಗಿ ಕಂಪನಿ ತೆಗೆದುಕೊಳ್ಳುತ್ತದೆ. ಆದರೆ ಕಂಪನಿಯವರು ಹಾಗೂ ಅದರ ಡೀಲರ್ ಫಲಾನುಭವಿಗಳಿಗೆ ಯಂತ್ರೋಪಕರಣಗಳನ್ನು ಮಾರಾಟ ಮಾಡಿದ್ದೇವೆ, ಸಬ್ಸಿಡಿ ಹಣವನ್ನು ನೀಡದೇ ಅಮಾಯಕ ಎಸ್ಸಿಎಸ್ಟಿ ಪಲಾನುಭವಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ" ಎಂದು ಹುತ್ರಿದುರ್ಗ ವಿಎಸ್‌ಎಸ್‌ಎಸ್ ಅಧ್ಯಕ್ಷ ಬೋರೇಗೌಡ, ಉಪಾಧ್ಯಕ್ಷ ಹಾಲುವಾಗಿಲು ಸ್ವಾಮಿ ಆರೋಪಿಸಿದ್ದಾರೆ.
ವಿಎಸ್‌ಎಸ್‌ಎನ್ ಅಧ್ಯಕ್ಷರ ಅರೋಪ ಸಂಬಂಧ ಶಾಸಕ ಡಾ.ಹೆಚ್.ಡಿ.ರಂಗನಾಥ್, ಜಂಟಿ ನಿರ್ದೇಶಕ ಎಚ್.ರವಿ ಅವರಿಗೆ ಕರೆ ಮಾಡಿ ತಾಲೂಕಿನ ಹುತ್ರಿದುರ್ಗ ಹೋಬಳಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರ ಕೃಷಿ ಉಪಕರಣ ಖರೀದಿಯ ಸಬ್ಸಿಡಿ ಹಣ ದುರುಪಯೋಗ ಸಂಬಂಧ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಆದರೆ, ಶಾಸಕ ಸೂಚನೆಯನ್ನು ಲಘುವಾಗಿ ತಗೆದುಕೊಂಡ ಜಂಟಿ ನಿರ್ದೇಶಕ ಹೆಚ್.ರವಿ ಯಾವುದೇ ಅವ್ಯವಹಾರ ನಡೆದಿಲ್ಲ, ಇದು ನಿಮ್ಮ ಕಲ್ಪನೆಯಾಗಿದೆ, ತನಿಖೆ ನಡೆಸಲು ಸಿಬ್ಬಂದಿಗಳ ಕೊರತೆ ಇದೆ ಎಂದು ಉದ್ಧಟತನ ತೋರಿಸಿದ್ದಾರೆ.

ಅಧಿಕಾರಿಯ ಮಾತಿನಿಂದ ಕೋಪಗೊಂಡ ಶಾಸಕರು ತನಿಖೆ ನಡೆಸಿ ಅಮಾಯಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ನ್ಯಾಯ ದೊರಕಿಸಿ ಕೊಡಿ ಎಂದರೇ ಸಿಬ್ಬಂದಿ ಕೊರತೆ ಇದೆ ಎಂದು ನೆಪ ಹೇಳುತ್ತೀರ, ನಿಮ್ಮ ಉತ್ತರ ನೋಡಿದರೇ ಇದರಲ್ಲಿ ನೀವು ಪಾಲ್ಗೊಂಡಿರಬಹುದು ಅನಿಸುತ್ತಿದೆ ಎಂದು ತರಾಟೆ ತೆಗೆದುಕೊಂಡಿದ್ದು, ನಿಮ್ಮ ವಿರುದ್ದ ಕೃಷಿ ಸಚಿವರಿಗೆ ಪತ್ರ ಬರೆಯುವುದ್ದಾಗಿ ಎಚ್ಚರಿಕೆ ನೀಡಿದ್ದಾರೆ.
ಜಂಟಿ ನಿರ್ದೇಶಕ ಎಚ್.ರವಿ ಅವರ ಉಡಾಪೆ ಉತ್ತರ ಸಂಬಂಧ ರಾಜ್ಯ ಕೃಷಿ ನಿರ್ದೇಶಕ ಪುಟ್ಟರಾಜು ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿದ ಶಾಸಕರು, ಜಂಟಿ ನಿರ್ದೇಶಕರ ಉದ್ಧಟತನದಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಅವರು ಸರ್ಕಾರದ ಹಣ ಉಳಿಸಲು ಬಂದಿದ್ದಾರೋ ಅಥವಾ ಸರ್ಕಾರದ ಹಣ ವ್ಯಯ ಮಾಡಲು ಬಂದಿದ್ದಾರೋ ಗೊತ್ತಿಲ್ಲ ಅಂತಹ ಅಧಿಕಾರಿ ಜಿಲ್ಲೆಯಲ್ಲಿ ಇರುವುದು ಸೂಕ್ತವಲ್ಲ ಹೀಗಾಗಿ ಅವರ ವಿರುದ್ದ ಕ್ರಮಕೈಗೊಂಡು, ಅವ್ಯವಹಾರ ಸಂಬಂಧ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.












Click it and Unblock the Notifications