ತುರುವೇಕೆರೆ ಕ್ಷೇತ್ರದಲ್ಲಿ ಪಕ್ಷಗಳಿಗೆ ಬಂಡಾಯದ ಬಿಸಿ!
Recommended Video

ತುಮಕೂರು, ನವೆಂಬರ್ 14 : ಬಿಜೆಪಿ ಪರಿವರ್ತನಾ ಯಾತ್ರೆಗೆ ತೆಂಗಿನಕಾಯಿ ಎಸೆಯುವ ಮೂಲಕ ತುರುವೇಕೆರೆ ಕ್ಷೇತ್ರ ರಾಜಕೀಯವಾಗಿ ಮತ್ತೆ ಚರ್ಚೆಗೆ ಬಂದಿದೆ. ಜೆಡಿಎಸ್ ಭದ್ರಕೋಟೆಯಾಗಿರುವ ಕ್ಷೇತ್ರದಲ್ಲಿ ಎಲ್ಲಾ ಪಕ್ಷಗಳಿಗೂ ಬಂಡಾಯದ ಬಿಸಿ ತಟ್ಟುತ್ತಿದೆ.
ಸದ್ಯ, ತುರುವೇಕೆರೆ ಕ್ಷೇತ್ರದ ಶಾಸಕರು ಜೆಡಿಎಸ್‌ನ ಎಂ.ಟಿ.ಕೃಷ್ಣಪ್ಪ. ಮೂರು ಬಾರಿ ಶಾಸಕರಾಗಿರುವ ಇವರಿಗೆ ಈ ಬಾರಿ ಬಂಡಾಯದ ಬಿಸಿ ತಟ್ಟಿದೆ. ನಾರಾಯಣ ಗೌಡ ಅವರು ಟಿಕೆಟ್ ಪಡೆಯುವ ಉತ್ಸಾಹದಲ್ಲಿ ಪ್ರಚಾರ ಆರಂಭಿಸಿದ್ದಾರೆ.
ನೆಲಮಂಗಲದಲ್ಲಿ ರಾಜಕೀಯ ನೆಲೆ ಕಂಡುಕೊಂಡಿದ್ದ ನಾರಾಯಣ ಗೌಡ ಅವರು ತುರುವೇಕೆರೆಗೆ ಬಂದಿದ್ದು ಹೊಸ ಲೆಕ್ಕಾಚಾರಕ್ಕೆ ಕಾರಣವಾಗಿದೆ. ಶಾಸಕ ಕೃಷ್ಣಪ್ಪ ವಿರುದ್ಧ ಪಕ್ಷದ ನಾಯಕರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಬಿಜೆಪಿಯಲ್ಲಿ ಮಸಾಲೆ ಜಯರಾಮ್ ಅವರಿಗೆ ಟಿಕೆಟ್ ಕೊಡುವುದಕ್ಕೆ ವಿರೋಧವಿದೆ. ಪರಿವರ್ತನಾ ಯಾತ್ರೆಯ ಸಂದರ್ಭದಲ್ಲಿ ಬಿಜೆಪಿಯ ರಥಕ್ಕೆ ತೆಂಗಿನಕಾಯಿ ತೂರಿ ಆಕ್ರೋಶ ಹೊರಹಾಕಲಾಗಿದೆ. ಮೂಲ ಮತ್ತು ವಲಸಿಗರು ಎಂದು ಪಕ್ಷ ಕವಲು ದಾರಿಯಲ್ಲಿ ಸಾಗುತ್ತಿದೆ...

ದೇವೇಗೌಡರು ಘೋಷಣೆ ಮಾಡಿದ್ದಾರೆ
'ಜಿಲ್ಲೆಯ ಎಲ್ಲಾ ಹಾಲಿ ಶಾಸಕರಿಗೆ ಟಿಕೆಟ್ ನೀಡುತ್ತೇವೆ' ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಆದ್ದರಿಂದ, ಎಂ.ಟಿ.ಕೃಷ್ಣಪ್ಪಗೆ ಟಿಕೆಟ್ ಖಚಿತವಾಗಿದೆ. ನಾರಾಯಣ ಗೌಡ ಬಂಡಾಯವ ಬಾವುಟ ಹಾರಿಸಿದ್ದು, ಎಲ್ಲಿಂದ ಟಿಕೆಟ್ ತರುತ್ತಾರೆ ಎಂಬುದು ಪ್ರಶ್ನೆಯಾಗಿದೆ.

ಕಾಂಗ್ರೆಸ್ ಟಿಕೆಟ್?
ನಾರಾಯಣ ಗೌಡ ಅವರು ಜೆಡಿಎಸ್ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತೇನೆ ಎಂದು ಬೆಂಬಲಿಗರ ಬಳಿ ಹೇಳುತ್ತಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ಅವರನ್ನು ಸೇರಿಸಿಕೊಳ್ಳುವುದಿಲ್ಲ ಎಂದು ಬಾಗಿಲು ಮುಚ್ಚಿದ್ದಾರೆ.

ಶಾಸಕರ ವಿರುದ್ಧ ಸಭೆ?
ಎಂ.ಟಿ.ಕೃಷ್ಣಪ್ಪ ವಿರುದ್ಧವೇ ನಾಯಕರು ತಿರುಗಿ ಬಿದ್ದಿದ್ದಾರೆ. ನಮ್ಮನ್ನು ಕಡೆಗಣಿಸಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಭಾಗ್ಯ ಅವರ ಪತಿ ರಮೇಶ್ ಗೌಡ ಆರೋಪ ಮಾಡುತ್ತಿದ್ದಾರೆ. ಪಕ್ಷದ ನಾಯಕರಾದ ಶಂಕರೇಗೌಡ, ಕೊಂಡಜ್ಜಿ ವಿಶ್ವನಾಥ್ ಮುಂತಾದವರು ಇದಕ್ಕೆ ಧ್ವನಿ ಗೂಡಿಸಿದ್ದಾರೆ. ನ.20ರಂದು ರಮೇಶ್ ಗೌಡ ಅವರು ಕರೆದಿರುವ ಸಮಾವೇಶಕ್ಕೆ ಕೃಷ್ಣಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ.

ಬಿಜೆಪಿಗೆ 'ಮಸಾಲೆ' ಸಂಕಟ
ಮಸಾಲೆ ಜಯರಾಂ ಅವರಿಗೆ ಟಿಕೆಟ್ ನೀಡುತ್ತೇವೆ ಎಂದು ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿರುವುದು ಬಿಜೆಪಿಯ ಮೂಲ ಕಾರ್ಯಕರ್ತರ ಸಿಟ್ಟಿಗೆ ಕಾರಣವಾಗಿದೆ. ಪರಿವರ್ತನಾಯಾತ್ರೆ ಸಂದರ್ಭದಲ್ಲಿ ತೆಂಗಿನಕಾಯಿ ತೂರಿ ಬಂದಿದ್ದು ಇದೇ ಕಾರಣಕ್ಕೆ. ಮೂಲ ಬಿಜೆಪಿ, ವಲಸೆ ಬಂದವರು ಎಂಬುದು ಬಿಜೆಪಿ ಬಂಡಾಯಕ್ಕೆ ಕಾರಣವಾಗಿದೆ.












Click it and Unblock the Notifications