Shivakumara Swamiji: ಇಂದು ಶಿವಕುಮಾರ ಶ್ರೀಗಳ 118 ಜನ್ಮದಿನೋತ್ಸವ: ಯಾರೆಲ್ಲಾ ಭಾಗಿ?
ತುಮಕೂರು ಏಪ್ರಿಲ್ 1: ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳ 118 ಜನ್ಮದಿನೋತ್ಸವ ಇಂದು ಆಚರಿಸಲಾಗುತ್ತಿದೆ. ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಇಂದು ಹಬ್ಬದ ಸಂಭ್ರಮ ಮನೆ ಮಾಡಿದೆ. ವಿಶೇಷ ಕಾರ್ಯಕ್ರಮಗಳ ಆಯೋಜನೆ ಕೂಡ ಮಾಡಲಿದೆ. ಈ ಕಾರ್ಯಕ್ರಮಗಳಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಭಾಗಿಯಾಗಿಲಿದ್ದು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭಾರೀ ಪೊಲೀಸ್ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.
ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿ ಇದೆ. ಅಲ್ಲದೆ ಗೃಹ ಸಚಿವ ಜಿ.ಪರಮೇಶ್ವರ್, ಡಿಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ವಿ.ಸೋಮಣ್ಣ, ಸುತ್ತೂರು ಶ್ರೀಗಳು ಸೇರಿ ಹಲವರು ಉಪಸ್ಥಿತರಿರಲಿದ್ದಾರೆ.

ಲಿಂಗೈಕ್ಯ ಡಾ ಶಿವಕುಮಾರ ಶ್ರೀಗಳ 118 ಜನ್ಮದಿನೋತ್ಸವವನ್ನು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಆಚರಿಸಲಾಗುತ್ತಿದೆ. ತುಮಕೂರು ಎಸ್‌ಪಿ ಅಶೋಕ್ ಕೆವಿ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಭಾಗಿಯಾಗುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ.
ಶ್ರೀ ಸಿದ್ಧಗಂಗಾ ಮಠದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ, ಮೈಸೂರಿನ ಶ್ರೀ ಸುತ್ತೂರು ವೀರಸಿಂಹಾಸನ ಸಂಸ್ಥಾನ ಮಠಾಧ್ಯಕ್ಷರಾ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ವೇದಿಕೆ ಕಾರ್ಯಕ್ರಮ ನಡೆಯುತ್ತದೆ. ಶ್ರೀಮಠದ ಉತ್ತರಾಧಿಕಾರಿ ಶ್ರೀ ಶಿವಸಿದ್ದೇಶ್ವರ ಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಇಂದಿನ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದ್ದು ಐದಾರು ಕಡೆಗಳಲ್ಲಿ ದಾಸೋಹ ವ್ಯವಸ್ಥೆಯನ್ನು ಶ್ರೀಮಠದಲ್ಲಿ ಮಾಡಿಕೊಳ್ಳಲಾಗಿದೆ. ಬೆಳಗ್ಗೆ 8 ಗಂಟೆಗೆ ಪೂಜ್ಯ ಶಿವಕುಮಾರಸ್ವಾಮೀಜಿಯವರ ಪ್ರತಿಮೆ ಉತ್ಸವ, ಗದ್ದುಗೆಯಲ್ಲಿ ವಿಶೇಷ ಪೂಜೆ ಆರಂಭವಾಗಿವೆ. ಅತಿಥಿಗಳು ಗದ್ದುಗೆ ದರ್ಶನ ಪಡೆದ ಬಳಿಕ ವೇದಿಕೆಗೆ ಆಗಮಿಸುವರು.
ಇನ್ನೂ ಬೃಹತ್ ಕಾರ್ಯಕ್ರಮದ ಹಿನ್ನಲೆಯಲ್ಲಿ 35 ಪಿಎಸ್‌ಐ, 80ಎಎಸ್‌ಐ, 536 ಎಚ್‌ಸಿ, ಪಿಸಿ, ಮಹಿಳಾ ಪಿಸಿ, 2 ಕೆಎಸ್‌ಆರ್‌ಪಿ ತುಕಡಿ, 01 ಬಿಡಿಡಿಎಸ್ ಟೀಂ, 5 ಎಎಸ್ಸಿ ಟೀಮ್, 1 ಎಸ್‌ಪಿ, 1 ಎಎಸ್‌ಪಿ, 7 ಡಿಎಸ್‌ಪಿ, 13 ಇನ್ಸ್‌ಪೆಕ್ಟರ್, ನಿಯೋಜಿಸಲಾಗಿದೆ ಎಂದು ಎಸ್‌ಪಿ ಕೆ.ವಿ.ಅಶೋಕ್ ತಿಳಿಸಿದ್ದಾರೆ. ಇನ್ನೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸೋಮವಾರ ಬೆಂಗಳೂರಿಗೆ ಆಗಮಿಸಯವ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ವಾಗತಿಸುವರು.
ಅಲ್ಲದೆ ನಡೆದಾಡುವ ದೇವರು, ಕಲ್ಪತರು ನಾಡಿನ ದೈವ, ತ್ರಿವಿಧ ದಾಸೋಹಿ ವಿಶ್ವದ ಶ್ರೇಷ್ಠ ಸಂತ ಪರಮಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 118 ನೇ ಜಯಂತಿಗೆ ಶುಭ ಕೋರಿದ್ದಾರೆ.












Click it and Unblock the Notifications