ಮಹಿಳಾ ಮೀಸಲಾತಿ ಕಲ್ಪಿಸಿದ್ದು ಇಂದಿರಾ ಅಲ್ಲ ಗೌಡ್ರು
ತುಮಕೂರು, ಜ.23: ಈ ದೇಶದಲ್ಲಿ ಮಹಿಳೆಯರಿಗೆ ಅಧಿಕಾರ ದೊರೆಯಬೇಕು ಎಂಬ ಏಕೈಕ ಉದ್ದೇಶದಿಂದ ಸಂವಿದಾನಕ್ಕೆ ತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳಲ್ಲಿ ಶೇ. 33ರಷ್ಟು ಮೀಸಲಾತಿ ಕಲ್ಪಿಸಿದ್ದು ದೇವೇಗೌಡರು. 18 ವರ್ಷ ಅಧಿಕಾರ ನಡೆಸಿದ್ದ ಇಂದಿರಾಗಾಂಧಿಯವರಿಂದಲೂ ಇದು ಸಾಧ್ಯವಾಗಿರಲ್ಲಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ಹೇಳಿದ್ದಾರೆ.
ಹಿಂದುಳಿದ ವರ್ಗಗಳ ಓಲೈಕೆಗಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಮಾವೇಶಗಳ ಹಾದಿ ಹಿಡಿದ ಬೆನ್ನಲೇ ಜೆಡಿಎಸ್ ಕೂಡಾ ಸಮಾವೇಶಗಳ ಮೂಲಕ ಉತ್ತರ ನೀಡುತ್ತಿದೆ. ಸಾಲು ಸಾಲು ಸಮಾವೇಶಗಳನ್ನು ಜೆಡಿಎಸ್ ಹಮ್ಮಿಕೊಂಡಿದೆ. ಈ ಪೈಕಿ ತುಮಕೂರಿನಲ್ಲಿ ರಾಜ್ಯಮಟ್ಟದ ಮಹಿಳಾ ಸಮಾವೇಶ ಮೊದಲನೆಯದಾಗಿದೆ.
ಇದು ಜಾತಿ ಸಮಾವೇಶವಲ್ಲ: ಬೇರೆ ಪಕ್ಷಗಳ ರೀತಿಯಲ್ಲಿ ಜಾತಿಯ ಹೆಸರಿನಲ್ಲಿ ಸಮಾವೇಷ ನಡೆಸಿ ತಮ್ಮ ಕುರ್ಚಿ ಭದ್ರಪಡಿಸಿಕೊಳ್ಳಲು ಮುಂದಾಗುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸ್ಪಷ್ಟ ಪಡಿಸಿದ್ದಾರೆ. ಮುಂದಿನ ತಿಂಗಳು ಜೆಡಿಎಸ್ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪಅವರ ನೇತೃತ್ವದಲ್ಲಿ ನಡೆಯ ಲಿರುವುದು ಗುರುವಂದನಾ ಸಮಾವೇಶವೇ ಹೊರತು ಯಾದವ ಸಮುದಾಯದ ಸಮಾವೇಶವಲ್ಲ ಎಂದು ಸ್ಪಷ್ಟೀಕರಣ ನೀಡಿದ ಅವರು, ಮೈಸೂರಿನಲ್ಲಿಯೇ ಹಿಂದುಳಿದ ವರ್ಗಗಳ ಸಮಾವೇಶ ನಡೆಸುವುದಾಗಿ ತಿಳಿಸಿದರು. ತುಮಕೂರಿನ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಮಹಿಳಾ ಸಮಾವೇಶದ ಚಿತ್ರಗಳು ಹಾಗೂ ಇನ್ನಷ್ಟು ವರದಿ ಮುಂದಿದೆ...

ಜೆಡಿಎಸ್ ಮಹಿಳಾ ಸಮಾವೇಶದಲ್ಲಿ ದೇವೇಗೌಡರ ಭಾಷಣ
ಯಾರು ಮಹಿಳೆಯರ ಪರವಾಗಿದ್ದಾರೆ ಎಂಬುದನ್ನು ತಿಳಿಸುವ ಸಲುವಾಗಿ ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು. ದೇವೇಗೌಡ ಬದುಕಿರುವವರೆಗೂ ಜೆಡಿಎಸ್ ಪಕ್ಷ ವನ್ನು ಮೂಲೆಗುಂಪು ಮಾಡಲು ಸಾಧ್ಯವಿಲ್ಲ. ಕೇವಲ ಒಂದೆರಡು ಸಮಾವೇಶಗಳನ್ನು ಮಾಡಿದಾಕ್ಷಣ ಜೆಡಿಎಸ್ ನೆಲಕಚ್ಚಿದೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಜೆಡಿಎಸ್ ರಾಜ್ಯದಲ್ಲಿ ಬದುಕುಳಿದಿದೆ ಎಂದು ತೋರಿಸುವುದಕ್ಕಾಗಿ ಈ ಸಮಾವೇಶ ಎಂದ ಎಚ್.ಡಿ. ದೇವೇಗೌಡರು, ಮುಂದಿನ ಮೂರು ತಿಂಗಳ ಕಾಲ ಸಮಾವೇಶಗಳ ಮೂಲಕವೇ ವಿರೊಧ ಪಕ್ಷಗಳಿಗೆ ಉತ್ತರ ನೀಡಲಿದ್ದೇವೆ ಎಂದರು.

ಸ್ವಂತ ಶಕ್ತಿ ಅಧಿಕಾರ ಈಗ ಅಸಾಧ್ಯ : ದೇವೇಗೌಡ
ಹೊಂದಾಣಿಕೆ ರಾಜಕೀಯ: ಇಂದು ದೇಶದಲ್ಲಿ ಕಾಂಗ್ರೆಸ್, ಬಿಜೆಪಿ ಎರಡು ಕೂಡ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಎಲ್ಲರೂ ಹೊಂದಾಣಿಕೆಗಾಗಿ ಹಾತೊರೆಯುತ್ತಿದ್ದಾರೆ. ಮೋದಿಯ ಆಟ ಏನಿದ್ದರೂ ಪರ್ಯಾಯ ಪಕ್ಷಗಳಿಲ್ಲದ ಕಡೆಗಳಲ್ಲಿ ಮಾತ್ರ, ಕೇರಳ, ತಮಿಳುನಾಡು, ಆಂದ್ರಪ್ರದೇಶ, ಬಿಹಾರ ಗಳಲ್ಲಿ ಬಿಜೆಪಿ ಎಷ್ಟು ಸೀಟು ಗೆಲ್ಲುತ್ತದೆ ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಬಿಜೆಪಿಗೆ ಪರ್ಯಾಯವಾಗಿ ಜೆಡಿಎಸ್ ಸಿಡಿದು ನಿಲ್ಲಲಿದೆ ಎಂದರು.

ಜೆಡಿಎಸ್ ನಿಂದ ಸಮಾವೇಶಗಳ ಮೇಲೆ ಸಮಾವೇಶ
ಜ.29 ರಂದು ಬೆಂಗಳೂರು ನಗರದಲ್ಲಿ ಯುವ ಜನತಾ ಮೆರವಣಿಗೆ, ಫೆ.2 ರಂದು ಹಿರಿಯೂರಿನಲ್ಲಿ ರಾಜ್ಯ ಘಟಕದ ಅಧ್ಯಕ್ಷರ ನೇತೃತ್ವದಲ್ಲಿ ಯಾದವ ಸಮಾವೇಶ, ಫೆ.9 ರಂದು ರಾಯಚೂರಿನಲ್ಲಿ ರೈತರ ಸಮಾವೇಶ, ಫೆ 2ನೇ ವಾರದಲ್ಲಿ ತೃತೀಯ ರಂಗದ ಸಮಾವೇಶ ಆಯೋಜಿಸುತ್ತಿರುವುದಾಗಿ ಕುಮಾರಸ್ವಾಮಿ ಮಾಹಿತಿ ನೀಡಿದರು.

ಕಾಂಗ್ರೆಸ್ ನಿಂದ ಜಾತಿ ಸಮಾವೇಶ
ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಮಂತ್ರ ಜಪಿಸುವ ಬದಲು ಜಾತಿ ಆಧಾರಿತ ಸಮಾವೇಶ ಹಮ್ಮಿಕೊಂಡು ಜನತೆಯ ದಿಕ್ಕು ತಪ್ಪಿಸುತ್ತಿದೆ ಎಂದು ಆರೋಪಿಸಿದರು. ಎತ್ತಿನ ಹೊಳೆ ತೀರ್ಮಾನ ಪ್ರಕಟಿಸಲಿ: ಎತ್ತಿನ ಹೊಳೆ ಯೋಜನೆ ಬಗ್ಗೆ ಸರ್ಕಾರ ತನ್ನ ತೀರ್ಮಾನ ಪ್ರಕಟಿಸಲಿ. ಭದ್ರ ಮೇಲ್ದಂಡೆ ಯೋಜನೆ ಮೂಲಕ ಬಯಲು ಸೀಮೆಗೆ ನೀರು ಹರಿಸುವ ಯೋಜನೆ ಗತಿ ಏನಾಗಿದೆ ಎಂಬುದನ್ನು ಜಿಲ್ಲಾ ಉಸ್ತುವಾರಿ ಸಚಿವರು ಬಹಿರಂಗ ಮಾಡಲಿ ಎಂದು ಎಚ್‌ಡಿಕೆ ಆಗ್ರಹಿಸಿದರು.

ಲೋಕಸಭೆ ಚುನಾವಣೆಗೆ ಜೆಡಿಎಸ್ ತಯಾರಿ
ದೇವೇಗೌಡರನ್ನು ಹೊರತು ಪಡಿಸಿ ನಮ್ಮ ಕುಟುಂಬದ ಯಾರೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸದಂತೆ ತೀರ್ಮಾನ ಕೈಗೊಂಡಿದ್ದೇವೆ. ಒಂದು ವೇಳೆ ಯಾವುದೇ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿ ಸಿಗದೆ ಹೋದರೆ ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯಾರಾದರೊಬ್ಬರು ಅನಿವಾರ್ಯವಾಗಿ ಸ್ಪರ್ಧಿಸುವುದು ಖಚಿತ ಎಂದು ಕುಮಾರಸ್ವಾಮಿ ತಿಳಿಸಿದರು.












Click it and Unblock the Notifications