ಜೂನ್ 10ರೊಳಗೆ ಮೈತ್ರಿ ಸರಕಾರ ಬೀಳುತ್ತದೆ ಎಂದ ಸಿದ್ದು ಆಪ್ತ, ಮಧುಗಿರಿ ಮಾಜಿ ಶಾಸಕ ರಾಜಣ್ಣ
Recommended Video
ತುಮಕೂರು, ಮೇ 27 : ತುಮಕೂರು ಜಿಲ್ಲೆಯ ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿ ಸೋಮವಾರ ಅಸಮಾಧಾನ ತಾರಕಕ್ಕೇರಿದೆ. ಕಾಂಗ್ರೆಸ್ ನ ಮಾಜಿ ಶಾಸಕ (ಮಧುಗಿರಿಯಲ್ಲಿ ಕಳೆದ ಬಾರಿ ಶಾಸಕ) ಕೆ.ಎನ್.ರಾಜಣ್ಣ ಅವರು ಸುದ್ದಿಗೋಷ್ಠಿ ನಡೆಸಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜಣ್ಣ, ಕಾಂಗ್ರೆಸ್ ಪಾಲಿಗೆ ತುಮಕೂರು ಭದ್ರಕೋಟೆ. ಬಿಜೆಪಿಯು ಕೆಲವೇ ಕ್ಷೇತ್ರಕ್ಕೆ ಸೀಮಿತ ಅಷ್ಟೇ. ಆದರೂ ದೇವೇಗೌಡರ ವಿರುದ್ಧ ಜಯ ಗಳಿಸಿದ ಬಸವರಾಜುಗೆ ಅಭಿನಂದನೆ ಹೇಳುತ್ತೇನೆ. ಏಕೆಂದರೆ, ಬಸವರಾಜು ಅವರು ಇಪ್ಪತ್ತು ವರ್ಷಗಳ ಕಾಲ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಬಿಜೆಪಿಗಿಂತ ಕಾಂಗ್ರೆಸ್ ನಾಯಕರ ಜತೆಗೆ ಸಂಪರ್ಕ ಚೆನ್ನಾಗಿದೆ ಎಂದಿದ್ದಾರೆ.
ತುಮಕೂರಿನಲ್ಲಿ ತಮ್ಮ ವೈಯಕ್ತಿಕ ಸಂಪರ್ಕದ ಕಾರಣಕ್ಕೆ ಬಸವರಾಜು ಬಿಜೆಪಿ ಟಿಕೆಟ್ ನಿಂದ ಜಯ ಪಡೆದಿದ್ದಾರೆ ಎಂದ ಅವರು, ನಾನು ಕಾಂಗ್ರೆಸ್ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ಈ ಬಾರಿಯ ಸೋಲಿಗೆ "ಝೀರೋ ಟ್ರಾಫಿಕ್" ಕಾರಣ ಎನ್ನುವ ಮೂಲಕ ಡಿಸಿಎಂ ಪರಮೇಶ್ವರ್ ರ ಬಗ್ಗೆ ವ್ಯಂಗ್ಯವಾಡಿದರು. ಇನ್ನೊಂದು ವಾರದಲ್ಲಿ "ಝೀರೋ ಟ್ರಾಫಿಕ್" ಕೆಳಕ್ಕೆ ಇಳಿಯಲಿದೆ ಎಂದು ಭವಿಷ್ಯ ನುಡಿದರು.

ಪರಮೇಶ್ವರ್ ಗೆ ಉಪಕಾರ ಸ್ಮರಣೆ ಇಲ್ಲ
ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡುವ ತನಕ ಮಾತ್ರ ಈಗಿನ ಮೈತ್ರಿ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿ ಇರಲಿದೆ. ಆ ನಂತರ ಮೈತ್ರಿ ಸರಕಾರ ಉರುಳಲಿದೆ ಎಂದ ರಾಜಣ್ಣ, ಅ ನಂತರ ಪರಮೇಶ್ವರ್ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ಆರಂಭಿಸಿದರು. "ನನ್ನ ಸಹಕಾರದಿಂದ ಗೆದ್ದು ಬಂದ ಅವನಿಗೆ ಉಪಕಾರ ಸ್ಮರಣೆ ಇಲ್ಲ" ಎಂದು ಹೇಳಿದ್ದಾರೆ.

ರೇವಣ್ಣ ಗೋಲ್ ಮಾಲ್ ಬಗ್ಗೆ ದಾಖಲೆ ಇದೆ
ಅಪೆಕ್ಸ್ ಬ್ಯಾಂಕ್ ಬಗ್ಗೆ ವಿಚಾರ ಮಾತನಾಡಿದ ಅವರು, ಯಾರು ಏನೇ ಮಾಡಿದರೂ ನಾನು ಐದು ವರ್ಷ ಅಧಿಕಾರಾವಧಿ ಪೂರೈಸುತ್ತೇನೆ. ರೇವಣ್ಣ ಬರಲಿ, ಅವರ ತಾತನೇ ಬರಲಿ. ನಾನು ಐದು ವರ್ಷ ಅಧಿಕಾರ ಪೂರ್ಣಗೊಳಿಸುತ್ತೇನೆ. ಕೆಎಂ ಎಫ್ ನಲ್ಲಿ ರೇವಣ್ಣ ಗೋಲ್ ಮಾಲ್ ಮಾಡಿರುವುದಕ್ಕೆ ನನ್ನ ಬಳಿ ದಾಖಲೆ ಇದೆ. ಅವರು ಏನು ಮಾಡ್ತಾರೋ ಮಾಡಲಿ. ಈಗ ಹೇಳುತ್ತಿರುವ ಮೂಗರ್ಜಿ ಮೂರು ವರ್ಷದ ಹಳೆಯದು. ಅದಕ್ಕೆ ಅವರು ಈಗ ತನಿಖೆ ಮಾಡುತ್ತಾರಂತೆ ಎಂದಿದ್ದಾರೆ ರಾಜಣ್ಣ.

ಮುಂದಿನ ಎಂ.ಪಿ. ಚುನಾವಣೆಗೆ ಬಸವರಾಜು ಕಾಂಗ್ರೆಸ್ ಅಭ್ಯರ್ಥಿ
ಮುಂದಿನ ಲೋಕಸಭಾ ಚುನಾವಣೆಗೆ ಈಗ ಬಿಜೆಪಿಯಲ್ಲಿ ಗೆದ್ದಿರುವ ಜಿ.ಎಸ್.ಬಸವರಾಜು ಅವರೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಗಲಿದ್ದಾರೆ. ಮುದ್ದಹನುಮೇಗೌಡರನ್ನು ಕುಣಿಗಲ್ ನಿಂದ ವಿಧಾನಸಭಾ ಚುನಾವಣೆಗೆ ನಿಲ್ಲಿಸಲಿದ್ದೇವೆ. ಈಗ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿ ದೇವೇಗೌಡರು ಸೋಲಲು "ಝೀರೋ ಟ್ರಾಫಿಕ್ ಮಿನಿಸ್ಟ್ರು" (ಡಾ.ಜಿ.ಪರಮೇಶ್ವರ) ಕಾರಣ ಎಂದರು.

ನನ್ನ ವಿರುದ್ಧ ಪ್ರತಿಭಟನೆಗೆ ಮುಂದಾದರೆ ನಾಲಗೆ ಸೀಳ್ತೀನಿ
"ಝೀರೋ ಟ್ರಾಫಿಕ್ ಮಿನಿಸ್ಟರ್"ರನ್ನು ಝೀರೋ ಮಾಡ್ತೀವಿ ಎಂದ ರಾಜಣ್ಣ, ಸರಕಾರ ಯಾವತ್ತೋ ಬೀಳುತ್ತಿತ್ತು. ಜೂನ್ ಹತ್ತನೇ ತಾರೀಕಿನ ಒಳಗೆ ಈ ಸರಕಾರ ಬೀಳುತ್ತದೆ. ನನ್ನ ವಿರುದ್ಧ ಯಾರಾದರೂ ತುಮಕೂರು ಜಿಲ್ಲೆಯಲ್ಲಿ ಧಿಕ್ಕಾರ ಕೂಗಿದರೆ ನಾನೇ ಅವರ ನಾಲಿಗೆ ಸೀಳುತ್ತೇನೆ. ದೇವೇಗೌಡರ ಸೋಲಿಗೆ ನಾನು ಕಾರಣ ಎಂದು ಕೆಲವರು ನನ್ನ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ. ಅವರಿಗೆ ಇದು ಎಚ್ಚರಿಕೆ ಎಂದಿದ್ದಾರೆ.












Click it and Unblock the Notifications