ತುಮಕೂರು: ಅಳಿಯನಿಗೆ ಸಿಗದ ಟಿಕೆಟ್, ರಾಜೀನಾಮೆ ನೀಡಿದ ಹಿರಿಯ ಕಾಂಗ್ರೆಸ್ ನಾಯಕ
ತುಮಕೂರು, ಏಪ್ರಿಲ್ .07: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದೇ ಮಾಡಿದ್ದು, ಇಷ್ಟು ದಿನ ಬೂದಿ ಮುಚ್ಚಿದ ಕೆಂಡದಂತಿದ್ದ ಭಿನ್ನಮತ ಹೊರಬರುತ್ತಿದೆ. ತುಮಕೂರಿನಲ್ಲಿ ಷಫಿ ಅಹಮ್ಮದ್ ಅವರ ಕುಟುಂಬವನ್ನು ಹೊರತು ಪಡಿಸಿ ಹೊಸಬರಿಗೆ ಮಣೆ ಹಾಕಲಾಗಿದೆ. ಇದು ತುಮಕೂರು ನಗರ ಕಾಂಗ್ರೆಸ್ ಅನ್ನು ಒಡೆದುಹಾಕಿದೆ.
ಈ ಬಾರಿ ತುಮಕೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಯುವ ಮುಖಂಡ ಇಕ್ಬಾಲ್ ಅಹಮ್ಮದ್ ಅವರು ಸ್ಪರ್ಧಿಸಲಿದ್ದಾರೆ. ಹೈಕಮಾಂಡ್ ನಿರ್ಧಾರವನ್ನು ಮಾಜಿ ಶಾಸಕ, ಹಿರಿಯ ಕಾಂಗ್ರೆಸ್ ನಾಯಕ ಎಸ್.ಷಫಿ ಅಹಮ್ಮದ್ ವಿರೋಧಿಸಿದ್ದಾರೆ. ಗೆಲ್ಲುವ ಸಾಮರ್ಥ್ಯವಿಲ್ಲದ ಜೂನಿಯರ್ ವ್ಯಕ್ತಿಗೆ ಟಿಕೆಟ್ ನೀಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಕ ಳೆದ ನಾಲ್ಕು ದಶಕಗಳಿಂದಲೂ ಕಾಂಗ್ರೆಸ್ ತುಮಕೂರು ನಗರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುತ್ತಾ ಬಂದಿದ್ದು, ಮಾಜಿ ಶಾಸಕ ಷಫಿ ಅಹಮ್ಮದ್ ಕುಟುಂಬಕ್ಕೆ ಮಣೆ ಹಾಕಲಾಗಿತ್ತು. ಹಿರಿಯ ಕಾಂಗ್ರೆಸ್ ನಾಯಕ ಷಫಿ ಅಹಮ್ಮದ್ ಎರಡು ಬಾರಿ ಹಾಗೂ ಅವರ ಅಳಿಯ ರಫಿಕ್ ಅಹಮ್ಮದ್ ಒಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದರು. ಇದೇ ಮೊದಲ ಬಾರಿಗೆ ಇವರ ಕುಟುಂಬದ ಹೊರಗಿನವರಿಗೆ ಅವಕಾಶ ಮಾಡಿಕೊಡಲಾಗಿದೆ. ಶಫಿ ಅಹಮದ್ ಕುಟುಂಬ ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಬೇಕು ಎಂಬ ಕೂಗು ಕೇಳಿ ಬಂದಿತ್ತು.
ರಾಜೀನಾಮೆ ಪತ್ರದಲ್ಲಿ, ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಯಾವುದೇ ಸಾಮರ್ಥ್ಯವಿಲ್ಲದ ಜೂನಿಯರ್ ವ್ಯಕ್ತಿಗೆ ಟಿಕೆಟ್ ನೀಡಲಾಗಿದೆ. ತುಮಕೂರು ವಿಧಾನಸಭಾ ಕ್ಷೇತ್ರಕ್ಕೆ ನಾವು ಸ್ಪರ್ಧಿಸಿದಾಗಲೆಲ್ಲಾ ನಾವು 50,000 ಕ್ಕೂ ಹೆಚ್ಚು ಮತಗಳನ್ನು ಯಶಸ್ವಿಯಾಗಿ ಪಡೆದುಕೊಂಡಿದ್ದೇವೆ. ಜೊತೆಗೆ ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ಕೆಲಸ ಮಾಡಿದ್ದೇವೆ. ಪಕ್ಷವು ನನ್ನ ಯಾವುದೇ ಸೇವೆಯನ್ನು ಪರಿಗಣಿಸದಿರುವುದು ಮತ್ತು ನಿರ್ದಯವಾಗಿ ಪಕ್ಷದ ಟಿಕೆಟ್ ಅನ್ನು ನೀಡದಿರುವುದು ತುಂಬಾ ಅವಮಾನಕರವಾಗಿದೆ" ಎಂದು ಷಫಿ ಅಹಮ್ಮದ್ ಆರೋಪಿಸಿದ್ದಾರೆ.

"ಈ ಬಾರಿ ಉದ್ದೇಶಪೂರ್ವಕವಾಗಿ ದುರ್ಬಲ ಅಭ್ಯರ್ಥಿಗೆ ಪಕ್ಷದ ಟಿಕೆಟ್ ನೀಡಲಾಗಿದೆ, ಇದರಿಂದ ಭವಿಷ್ಯದಲ್ಲಿ ಅಲ್ಪಸಂಖ್ಯಾತರು ತುಮಕೂರು ನಗರ ಕ್ಷೇತ್ರದಿಂದ ಸೀಟು ಪಡೆಯಬಾರದು ಎಂಬ ಉದ್ದೇಶವಿದೆ. ಜಿಲ್ಲೆಯ ಅಲ್ಪಸಂಖ್ಯಾತರನ್ನು ದುರ್ಬಲಗೊಳಿಸಲು ನಮ್ಮ ನಾಯಕರು ಮೊದಲೇ ಯೋಜಿಸಿದ್ದಾರೆ. ಇದು ತುಮಕೂರು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಕಾಂಗ್ರೆಸ್ ಹೈಕಮಾಂಡ್ ಮುಸ್ಲಿಂ ಸಮುದಾಯದ ಹಿರಿಯ ಮುಖಂಡರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಹೀಗಾಗಿ ಇಂದು ನನ್ನ ಸಾವಿರಾರು ಅನುಯಾಯಿಗಳೊಂದಿಗೆ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಕೊನೆಯದಾಗಿ, ಪಕ್ಷಕ್ಕೆ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿದ ಕಾಂಗ್ರೆಸ್ ಪಕ್ಷಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನನ್ನ ರಾಜೀನಾಮೆಯನ್ನು ದಯವಿಟ್ಟು ಅಂಗೀಕರಿಸಿ. ಧನ್ಯವಾದಗಳು" ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ , ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿಗಳಾದ ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿ ಜಿ ಪರಮೇಶ್ವರ ಮತ್ತು ಡಿಸಿಸಿಯ ಅಧ್ಯಕ್ಷ ಚಂದ್ರಶೇಖರಗೌಡ ಅವರಿಗೆ ರವಾನಿಸಿದ್ದಾರೆ.












Click it and Unblock the Notifications