ತುಮಕೂರು; ರಾಕೇಶ್ ಟಿಕಾಯತ್ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ
ತುಮಕೂರು, ಮೇ31: ರೈತ ನಾಯಕ ರಾಕೇಶ್ ಟಿಕಾಯತ್ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ, ಕರ್ನಾಟಕದ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ರೈತರ ಕ್ಷಮೆ ಕೇಳಬೇಕು ಹಾಗೂ ಕೃತ್ಯಕ್ಕೆ ಕಾರಣರಾದವರನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿ ರೈತರು, ಪ್ರಗತಿಪರ ಚಿಂತಕರು, ಕರವೇ ಕಾರ್ಯಕರ್ತರು ಸಂಯುಕ್ತ ಹೋರಾಟ ಕರ್ನಾಟಕದ ಅಡಿಯಲ್ಲಿ ಮಂಗಳವಾರ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ನೇತ್ರತ್ವದಲ್ಲಿ ರೈತರು, ಪ್ರಗತಿಪರ ಚಿಂತಕರು, ದಲಿತ ಸಂಘರ್ಷ ಸಮಿತಿ ಸದಸ್ಯರು, ಮಹಿಳಾ ಹೋರಾಟಗಾರರು, ಕನ್ನಡಪರ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿ ಸರಕಾರದ ವಿರುದ್ದ, ಗೃಹಮಂತ್ರಿಗಳ ವಿರುದ್ದ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು, "ಕರ್ನಾಟಕ ರಾಜ್ಯದ ಇತಿಹಾಸದಲ್ಲಿಯೇ ಈ ಘಟನೆ ತಲೆ ತಗ್ಗಿಸುವಂತಹ ವಿಚಾರವಾಗಿದೆ. ಅತಿಥಿ ದೇವೋಭವ ಎಂಬುದು ಕರ್ನಾಟಕದ ಸಂಸ್ಕೃತಿ. ಇದಕ್ಕೆ ವಿರುದ್ಧವೆಂಬಂತೆ ರಾಜ್ಯಕ್ಕೆ ಅತಿಥಿಯಾಗಿ ಬಂದ ರೈತ ನಾಯಕ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ನಡೆಸಿ, ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡಿರುವುದು ಇಡೀ ರಾಜ್ಯಕ್ಕೆ ಮಾಡಿದ ಅಪಮಾನ" ಎಂದರು.

"ಇದನ್ನು ಇಡೀ ದೇಶದ ರೈತ ಸಮೂಹ ಉಗ್ರವಾಗಿ ಖಂಡಿಸುತ್ತದೆ. ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ಕೂಡಲೇ ಅವರ ಕ್ಷಮೆ ಕೇಳಬೇಕು. ಹಲ್ಲೆ ಮಾಡಿದವರನ್ನು ಬಂಧಿಸಿ, ಉಗ್ರ ಶಿಕ್ಷೆಗೆ ಗುರಿಪಡಿಸಬೇಕು. ಇಂತಹ ಘಟನೆಗಳು ಮರುಕಳುಹಿಸದಂತೆ ಸರಕಾರ ಎಚ್ಚರಿಕೆ ವಹಿಸಬೇಕು. ರೈತ ನಾಯಕರ ಪ್ರವಾಸದ ವೇಳೆ ಸೂಕ್ತ ಭದ್ರತೆ ಒದಗಿಸಬೇಕು" ಎಂದು ಆಗ್ರಹಿಸಿದರು.
ನಾಡಗೀತೆಗೆ ಅಪಮಾನ; "ರಾಜ್ಯ ಸರಕಾರ ರೋಹಿತ್ ಚಕ್ರತೀರ್ಥ ಎಂಬ ಅರೆಬರೆ ತಿಳುವಳಿಕೆ ಉಳ್ಳ ವ್ಯಕ್ತಿಯನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷನನ್ನಾಗಿ ಮಾಡಿ, ಇಡೀ ಶೈಕ್ಷಣಿಕ ವಲಯವನ್ನೇ ಗೊಂದಲದ ಗೂಡಾಗಿದೆ. ಅಲ್ಲದೇ ಕನ್ನಡಿಗರು ಒಪ್ಪುವ ಕುವೆಂಪು ಅವರ ರಚಿಸಿದ ನಾಡಗೀತೆಗೆ ಅಪಮಾನ ಮಾಡುವ ಮೂಲಕ ಕನ್ನಡನಾಡಿಗೆ ಕಳಂಕ ತಂದಿರುವ ಈತನ ವಿರುದ್ದ ಕಾನೂನು ಕ್ರಮ ಜರುಗಿಸಿ, ಆತನ ನೇತೃತ್ವದ ಸಮಿತಿಯನ್ನು ವಜಾ ಮಾಡಬೇಕೆಂದು" ಎಂದು ಗೋವಿಂದರಾಜು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕುರಿತು ಸಾಹಿತಿ ಡಾ. ಜಿ. ವಿ. ಆನಂದಮೂರ್ತಿ, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜಿ. ಸಿ. ಶಂಕರಪ್ಪ, ಉದ್ಯಮಿ ತಾಜುದ್ದೀನ್ ಷರೀಫ್ ಮುಂತಾದವರು ಪಾಲ್ಗೊಂಡಿದ್ದರು.












Click it and Unblock the Notifications