Breaking: ಕರ್ನಾಟಕದಲ್ಲಿ ಕೊರೊನಾ ವೈರಸ್‌ಗೆ 3ನೇ ಬಲಿ
ಬೆಂಗಳೂರು, ಮಾರ್ಚ್ 27: ಕೊರೊನಾ ವೈರಸ್ ಕರ್ನಾಟಕದಲ್ಲಿ ಮೂರನೇ ಬಲಿ ಪಡೆದುಕೊಂಡಿದೆ.
ತುಮಕೂರಿನಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ. ತುಮಕೂರಿನಲ್ಲಿ ಇದು ಮೊದಲ ಸಾವಾಗಿದೆ. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಬೆಳಗ್ಗೆ 10.45ಕ್ಕೆ ವ್ಯಕ್ತಿ ಮೃತಪಟ್ಟಿರುವುದಾಗಿ ತುಮಕೂರು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ತುಮಕೂರಿನಲ್ಲಿ ಪಾಸಿಟಿವ್ ಕೇಸ್ ಇಲ್ಲದಿದ್ದರೂ ಸೋಂಕಿತ ಸಾವನ್ನಪ್ಪಿದ್ದಾನೆ. ರಾಜ್ಯದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದೆಯೇ ಎನ್ನುವ ಆತಂಕ ಎದುರಾಗುತ್ತಿದೆ. ಶಿರಾ ಮೂಲದ 60 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ.
ಮಾರ್ಚ್ 5 ರಂದು ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ರೈಲಿನ ಎಸ್ 6 ಕೋಚ್‌ನಲ್ಲಿ ದೆಹಲಿಗೆ ಪ್ರಯಾಣಿಸಿದ್ದರು. ಮಾರ್ಚ್ 11 ರಂದು ದೆಹಲಿಯಿಂದ ಬೆಂಗಳೂರಿಗೆ ಕೊಂಗು ಎಕ್ಸ್‌ಪ್ರೆಸ್‌ನಲ್ಲಿ ಎಸ್ 6 ಬೋಗಿಯಲ್ಲಿ ವಾಪಸಾಗಿದ್ದರು.. ಮಾರ್ಚ್ 14 ರಂದು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತುಮಕೂರಿಗೆ ಮಧ್ಯರಾತ್ರಿ 12.40ಕ್ಕೆ ಪ್ರಯಾಣಿಸಿದ್ದರು.
ಕಲಬುರಗಿಯಲ್ಲಿ 70 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದರು. ಅದಾದ ಬಳಿಕ ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯರಿಗೂ ಕೂಡ ಕೊರೊನಾ ತಗುಲಿತ್ತು. ಗೌರಿಬಿದನೂರಿನ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ ಮೃತಪಟ್ಟಿದ್ದು ಇದು ಕರ್ನಾಟಕದಲ್ಲಿ ಕೊರೊನಾ ವೈರಸ್‌ಗೆ ಮೃತಪಟ್ಟ ಎರಡನೇ ಪ್ರಕರಣವಾಗಿತ್ತು. ಈಗ ತುಮಕೂರಿನಲ್ಲಿ 60 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ.
ರಾಜ್ಯದ ಈವರೆಗಿನ ಕೊರೊನಾ ವೈರಸ್ ಸೋಂಕಿತ ಪ್ರಕರಣ ಪೈಕಿ 11 ಪ್ರಕರಣಗಳಲ್ಲಿ ಸೋಂಕಿತರು ಗಲ್ಫ್ ರಾಷ್ಟ್ರಗಳಿಂದ ಬಂದವರು. 8 ಮಂದಿ ದುಬೈನಿಂದ ವಾಪಸ್ಸಾಗಿದ್ದರೆ, ಮೂವರು ಸೌದಿಯಿಂದ ಬಂದವರು. ಒಂದು ಪ್ರಕರಣದಲ್ಲಿ ಇಂಗ್ಲೆಂಡ್‌ನಿಂದ ದುಬೈ ಮಾರ್ಗವಾಗಿ ಬಂದ ವ್ಯಕ್ತಿಗೂ ಸೋಂಕು ದೃಢಪಟ್ಟಿದೆ.
ಕಲಬುರಗಿಯಲ್ಲಿ ಮೃತಪಟ್ಟ 79 ವರ್ಷದ ವೃದ್ಧ ಕೂಡಾ ಮೆಕ್ಕಾ ಯಾತ್ರೆ ಮುಗಿಸಿ ಬಂದವರು. ಇದೇ ರೀತಿ ಮೂವರು ಮೆಕ್ಕಾದಿಂದ ಬಂದವರಿಗೆ ಸೋಂಕು ದೃಢಪಟ್ಟಿದೆ. ಚಿಕ್ಕಬಳ್ಳಾಪುರದ ತಾಯಿ-ಮಗ ಇಬ್ಬರೂ ಮೆಕ್ಕಾದಿಂದ ಬಂದ ಬಳಿಕವೇ ಸೋಂಕು ದೃಢಪಟ್ಟಿದೆ.
ಮಡಿಕೇರಿಯ ವ್ಯಕ್ತಿ ಕೂಡಾ ದುಬೈನಿಂದ ವಾಪಸ್ ಬಂದಿದ್ದರು. ಧಾರವಾಡದ ವ್ಯಕ್ತಿ ಕೂಡಾ ದುಬೈನಿಂದ ಬಂದವರು. 22 ವರ್ಷದ ಭಟ್ಕಳ ಯುವಕ ಕೂಡಾ ದುಬೈನಿಂದ ಮಂಗಳೂರಿಗೆ ವಾಪಸ್ ಬಂದಿದ್ದರು.
ತುಮಕೂರಿನ ವ್ಯಕ್ತಿ ಯಶವಂತಪುರ ರೈಲು ನಿಲ್ದಾಣದಿಂದ ತುಮಕೂರಿಗೆ ತೆರಳಿದ್ದರು. ಅವರ ಜೊತೆ 33 ಮಂದಿ ಸಂಪರ್ಕದಲ್ಲಿದ್ದು, ಅವರನ್ನೂ ತೀವ್ರ ನಿಗಾದಲ್ಲಿಡಲಾಗಿದೆ. ವ್ಯಕ್ತಿ ಮಾರ್ಚ್ 23 ರಿಂದ ತುಮಕೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications