ಮೋದಿಗೆ ದಸರೀಘಟ್ಟ ಚೌಡೇಶ್ವರಿ ಅಮ್ಮನ ಅಪ್ಪಣೆಯಾಗಿತ್ತೇ?
ಕನಕಪುರ, ಮೇ 20: ಇದೀಗತಾನೇ ನರೇಂದ್ರ ಮೋದಿ ಅವರ ಹೆಸರನ್ನು ಪ್ರಧಾನಿ ಸ್ಥಾನಕ್ಕೆ ಎಲ್ ಕೆ ಅಡ್ವಾಣಿ ಸಹಿತ ಹಿರಿಯ ನಾಯಕರು ಅನುಮೋದಿಸಿದ್ದಾರೆ. ಆದರೆ ಮೋದಿ ಪ್ರಧಾನಿಯಾಗುವುದಕ್ಕೆ ಕರ್ನಾಟಕದ ಕೊಡುಗೆ ಏನು? ಎಂಬ ಪ್ರಶ್ನೆ ತೂರಿಬಂದಾಗ ಉತ್ತರವಾಗಿ 17 ಸಂಸದರು ಪ್ರತ್ಯಕ್ಷರಾಗುತ್ತಾರೆ. ಆದರೆ ಪರೋಕ್ಷಕವಾಗಿ ಬೇರೆಯದ್ದೂ ಒಂದು ಕೊಡುಗೆ ಇದೆ.
ಅದನ್ನು ಬಿಡಿಸಿ ಹೇಳುವ ಮುನ್ನ ನರೇಂದ್ರ ಮೋದಿ ಅವರು ಪ್ರಧಾನಿಯಾಗುವುದಕ್ಕೆ ಕಳೆದ ಸೆ. 15ರಂದು ಮಹೂರ್ತ ಫಿಕ್ಸ್ ಆಗಿತ್ತು ಎಂದು ಹೇಳುವ ಹಾಗಿಲ್ಲ. ಏಕೆಂದರೆ ಸ್ವತಃ ಮೋದಿ ಅವರು ಅದಕ್ಕಿಂತಲೂ ಮುಂಚೆ ಅಂದರೆ 2006ರಲ್ಲಿಯೇ ತಾವು ಪ್ರಧಾನಿಯಾಗುವ ಕನಸು ಕಂಡವರು.
2006ರಲ್ಲಿ ಏನಾಯಿತೆಂದರೆ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಕನಕಪುರದ ಬಳಿಯಿರುವ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರ ರಾಜಕೀಯ ಭವಿಷ್ಯದ ಬಗ್ಗೆ ಚರ್ಚೆ ನಡೆದಿತ್ತು.

ಅದಕ್ಕೆ ತಕ್ಷಣ ಮೋದಿ ಸಮ್ಮತಿಸುತ್ತಿದ್ದಂತೆ ಶ್ರೀ ರವಿಶಂಕರ್ ಗುರೂಜಿ ಅವರು ದಸರೀಘಟ್ಟ ಪ್ರಭುಲಿಂಗ ಸ್ವಾಮೀಜಿ ಅವರಿಗೆ ಕರೆ ಮಾಡಿ, ಅಮ್ಮನವರ ವಿಗ್ರಹವನ್ನು ತೆಗೆದುಕೊಂಡು ಬರುವಂತೆ ಹೇಳಿಕಳುಹಿಸಿದರು. ದೇವಸ್ಥಾನದಲ್ಲಿರುವ ಅಮ್ಮನವರ ಪಂಚಲೋಹ ವಿಗ್ರವು ಭಕ್ತರು ಕೇಳುವ ಪ್ರಶ್ನೆಗೆ ಉತ್ತರ ನೀಡುತ್ತದೆ.
ಅದರಂತೆ ಚೌಡೇಶ್ವರಿ ಅಮ್ಮನವರ ವಿಗ್ರಹವು ಆಶ್ರಮ ತಲುಪುತ್ತಿದ್ದಂತೆ ಮೋದಿ ರಾಜಕೀಯ ಭವಿಷ್ಯದ ಬಗ್ಗೆ ಕೇಳಲಾಯಿತು. ಆಗ ಅಮ್ಮನವರು ಭವಿಷ್ಯದಲ್ಲಿ ದೇಶದ ಉನ್ನತ ಸ್ಥಾನ ಅಲಂಕರಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಈಗ ಮೋದಿ ದೇಶದ ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸುತ್ತಿದ್ದಾರೆ. ಹಾಗಾದರೆ ಪ್ರಧಾನಿ ಮೋದಿ ಅವರು ಚೌಡೇಶ್ವರಿ ಅಮ್ಮನವರ ಪೂಜೆಗಾಗಿ ದಸರೀಘಟ್ಟಕ್ಕೆ ಭೆಟಿ ನೀಡುತ್ತಾರಾ?
ಪುಣ್ಯಕ್ಷೇತ್ರವಾದ ದಸರೀಘಟ್ಟ ಗ್ರಾಮದ ಶ್ರೀ ಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವವು ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ನಡೆಯುತ್ತದೆ. ಪುಣ್ಯಕ್ಷೇತ್ರ ದಸರೀಘಟ್ಟದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications