Breaking: ಸುದ್ದಿಗೋಷ್ಠಿಯಲ್ಲೇ ಸಚಿವ ಜೆ.ಸಿ. ಮಾಧುಸ್ವಾಮಿ ಬಗ್ಗೆ ಸಚಿವ- ಸಂಸದರ ಗುಸುಗುಸು
ತುಮಕೂರು, ಜನವರಿ 6: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಗುಸು ಗುಸು ಆಡಿಯೋ ಬಹಿರಂಗಗೊಂಡಿದ್ದು, ಆಡಳಿತಾರೂಢ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ.
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹಾಗೂ ತುಮಕೂರು ಸಂಸದ ಜಿ.ಎಸ್. ಬಸವರಾಜು ಅವರು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ವಿರುದ್ಧ ಅವಾಚ್ಯವಾಗಿ ಗುಸುಗುಸು ಮಾತನಾಡಿರುವ ಆಡಿಯೋ ಬಹಿರಂಗಗೊಂಡಿದ್ದು, ಬಿಜೆಪಿಗೆ ಭಾರೀ ಮುಜುಗರ ತಂದೊಡ್ಡಿದೆ.
ತುಮಕೂರಿನ ಸುದ್ದಿಗೋಷ್ಠಿಯಲ್ಲೇ ಕುಳಿತು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜುಗೆ ಸಂಸದ ಜಿ.ಎಸ್. ಬಸವರಾಜು ಚಾಡಿ ಹೇಳುತ್ತಿದ್ದ ವಿಡಿಯೋ ವೈರಲ್ ಆಗಿದೆ.

ಅಷ್ಟಕ್ಕೂ ನಡೆದಿದ್ದೇನೆಂದರೆ, ಇಬ್ಬರೂ ಪಕ್ಕದಲ್ಲೇ ಕುಳಿತು ಕುಶಲೋಪರಿ ವಿಚಾರಿಸುತ್ತಾ ಗುಸುಗುಸು ಮಾತನಾಡಲು ಶುರು ಮಾಡಿದರು. ಆ ವೇಳೆ ಸಚಿವರ ಕಿವಿಯಲ್ಲಿ ಪಿಸುಗುಟ್ಟಿದ ಜಿ.ಎಸ್. ಬಸವರಾಜು, ತಮ್ಮ ಹಳೆಯ ಸಿಟ್ಟನ್ನು ತೀರಿಸಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಸಚಿವ ಭೈರತಿ ಬಸವರಾಜ್ ಅವರ ಕಿವಿಯಲ್ಲಿ ಮಾಧುಸ್ವಾಮಿ ಅವರ ಕಾರ್ಯವೈಖರಿ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕುತ್ತಾರೆ. ಮಾತಿನ ಸಂದರ್ಭದಲ್ಲಿ ಬಸವರಾಜ್ ಅವರು ತೀರಾ ಕನಿಷ್ಠ ಪದಗಳಲ್ಲಿ ಮಾಧುಸ್ವಾಮಿಯನ್ನು ಟೀಕೆ ಮಾಡಿರುವ ಗುಟ್ಟು ರಟ್ಟಾಗಿದೆ.
ಭೈರತಿ ಬಸವರಾಜ್- ಜಿ.ಎಸ್. ಬಸವರಾಜು ಮಾತುಕತೆ
ಈ ನನ್ನ ಮಗ ನಮ್ಮ ಮಂತ್ರಿ ಹೇಂಗೆ ಗೊತ್ತಾ? ಎಂದು ಉತ್ತರ ಕೊರಿಯಾದ ಕಿಮ್‌ಜಾಂಗ್ ಉನ್‌ಗೆ ಹೋಲಿಸಿದ್ದಾರೆ. ಇವನಿಂದ ಒಂದು ಸೀಟ್ ಬರಲ್ಲ. ಮಾತು ಎತ್ತಿದರೆ, ಹೊಡಿ, ಬಡಿ, ಕಡಿ ಅಂತಾನೆ.
ಇವನು ಜಿಲ್ಲೆಯನ್ನು ಹಾಳುಮಾಡಿ ಬಿಟ್ಟಿದ್ದಾನೆ, ಅಧಿಕಾರಿಗಳನ್ನು ಏಕವಚನದಲ್ಲಿಯೇ ಬಯ್ಯುತ್ತಾನೆ. ಎಕ್ಸಿಕ್ಯೂಟಿವ್ ಇಂಜಿನಿಯರ್ ಒಬ್ಬರು ತಮ್ಮ ಆರೋಗ್ಯ ಸರಿಯಿಲ್ಲ ಎಂದರೂ, ನೀನು ನಿನ್ನ ಹೆಂಡತಿಯ ಸೀರೆ ಒಗೆಯಲಷ್ಟೇ ಲಾಯಕ್ಕು ಎಂದು ಜಿಲ್ಲಾ ಪಂಚಾಯತ್ ಸಭೆಯಲ್ಲಿ ಎಲ್ಲರ ಮುಂದು ಹೇಳಿ ಅವರನ್ನು ನಿಂದಿಸುತ್ತಾನೆ.
ಈ ವೇಳೆ ಸಚಿವ ಭೈರತಿ ಬಸವರಾಜ್ ಮಾತನಾಡಿ, ಸುಮ್ಮನಿರು ಆಮೇಲೆ ಮಾತನಾಡೋಣ ಎಂದು ಸಂಸದ ಜಿ.ಎಸ್. ಬಸವರಾಜ್ ಅವರನ್ನು ತಡೆಯುವ ಪ್ರಯತ್ನ ಮಾಡುತ್ತಾರೆ. ಆದರೂ ಸಂಸದರು ಮಾತ್ರ ಬೈಯ್ಯುತ್ತಲೇ ಇದ್ದರು.
ಭೈರತಿ ಬಸವರಾಜ್ ಇನ್ನೇನು ಮತ್ತೆ ಎಂದು ಹೇಳಿದ್ದು ಮತ್ತೆ ಆಡಿರುವ ಮಾತು ಸ್ಪಷ್ಟವಾಗಿ ಕೇಳಿಸುತ್ತಿಲ್ಲ. ಸುಮ್ಮನಿರು ಆಮೇಲೆ ಮಾತನಾಡೋಣ ಎಂದು ಸುದ್ದಿಗೋಷ್ಠಿ ಆರಂಭಿಸುತ್ತಾರೆ.
ಆದರೆ, ಸುಮ್ಮನಾಗದ ಸಂಸದ ಬಸವರಾಜು, ಹಾಳು ಮಾಡಿಬಿಟ್ಟಿದ್ದಾನೆ ನಮ್ಮ ಜಿಲ್ಲೆಯನ್ನು, ಮೊನ್ನೆ ಸಾವಿರ ಕೋಟಿ ಡಿಕ್ಲೈರ್ ಮಾಡಿಕೊಂಡು ಬಂದವನೇ. ನಮಗೆ ಯಾರಿಗೂ ಇನ್ವಿಟೇಶನ್ ಇಲ್ಲ, ಕರೆಯೋದು ಇಲ್ಲ. ನಿಮ್ಮ ಇಲಾಖೆಗೆ ಬಂದು ಹೇಳಿದರೆ ತಲೆಕೆಡಿಸಕೊಳ್ಳಬೇಡಿ ಎಂದು ಹೆಸರು ಹೇಳದೇ ಸಚಿವ ಜೆ.ಸಿ. ಮಾಧುಸ್ವಾಮಿ ವಿರುದ್ಧ ಪರೋಕ್ಷ ವಾಗ್ದಾಳಿ ಮುಂದುವರೆಸುತ್ತಾರೆ.
ನಂತರ ಆಗಿದ್ದೇನು?
ಗುರುವಾರ ತುಮಕೂರಿನಲ್ಲಿ ಸ್ಮಾರ್ಟ್ ಸಿಟಿ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟನೆ ಬಳಿಕ ಸಚಿವ ಭೈರತಿ ಬಸವರಾಜ್ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿ ಹೋಗೋಣ ಎಂದು ಕಾನೂನು ಸಚಿವ ಮಾಧುಸ್ವಾಮಿಯನ್ನು ಕರೆದರು. ಅದಕ್ಕೆ ಸಚಿವ ಸಂಪುಟ ಸಭೆ ನೆಪ ಹೇಳಿ ಸಚಿವ ಜೆ.ಸಿ. ಮಾಧುಸ್ವಾಮಿ ಕಾರ್ಯಕ್ರಮದಿಂದ ಅರ್ಧಕ್ಕೆ ವೇದಿಕೆಯಿಂದ ನಿರ್ಗಮಿಸಿದರು.
ಸಚಿವ ಮಾಧುಸ್ವಾಮಿ ಹೋಗುತ್ತಿರುವುದು ನೋಡಿದರೆ ಸಿಟ್ಟು, ಅಸಮಾಧಾನದಿಂದ ಎದ್ದುಹೋದಂತೆ ಇತ್ತು. ಅವರ ನಡೆ ಸಚಿವ ಭೈರತಿ ಬಸವರಾಜ್ ಮತ್ತು ಸಮಾರಂಭದಲ್ಲಿದ್ದವರಿಗೆ ಇರಿಸುಮುರುಸು ಉಂಟುಮಾಡಿದ್ದಂತೂ ನಿಜ.
ಅನೇಕರ ಅಸಮಾಧಾನ
ಅಂದ ಹಾಗೆ ಸಚಿವ ಜೆ.ಸಿ. ಮಾಧುಸ್ವಾಮಿ ವಿರುದ್ಧ ಸ್ವಪಕ್ಷೀಯರೇ ಕಿಡಿಕಾರುವುದು ಗುಟ್ಟಾಗಿ ಉಳಿದಿಲ್ಲ. ಈ ಹಿಂದೆ ತುಮಕೂರು ಗ್ರಾಮಾಂತರ ಶಾಸಕ
ಸುರೇಶ್ ಗೌಡ ಅಸಮಾಧಾನ ಹೊರಹಾಕಿದ್ದರು.
ತುಮಕೂರು ಜಿಲ್ಲಾಧ್ಯಕ್ಷರಾಗಿದ್ದ ಅವರು, ಮಾಧುಸ್ವಾಮಿ ಅವರ ಕಾರಣದಿಂದಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆಯು ಸಭೆಯಲ್ಲಿ ಬಹಿರಂಗವಾಗಿಯೇ ಕಿತ್ತಾಡಿಕೊಂಡಿದ್ದರು.
ಕಾಂಗ್ರೆಸ್ ಮಾತ್ರವಲ್ಲದೆ, ಕೆಲವು ಕಠಿಣ ನಡೆಗಳು ಮಾಧುಸ್ವಾಮಿ ಅವರಿಗೆ ಮುಳುವಾಗಿವೆ ಎಂಬುದನ್ನು ಅವರ ಆತ್ಮೀಯರೇ ಹೇಳುತ್ತಾರೆ. ಕೋಲಾರದಲ್ಲಿ ರೈತ ಮಹಿಳೆಗೆ ವಾಚಾಮಗೋಚರವಾಗಿ ಟೀಕಿಸಿದ್ದು ಕೂಡ ವಿವಾದಕ್ಕೆ ಕಾರಣವಾಗಿತ್ತು. ಅವರೊಬ್ಬ ಅತ್ಯುತ್ತಮ ಸಂಸದೀಯ ಪಟು, ಉತ್ತಮ ಭಾಷಣಕಾರರು, ಕಾನೂನು ಮತ್ತು ಸಂಸದೀಯ ನಡಾವಳಿಕೆ ಬಗ್ಗೆ ಸಾಕಷ್ಟು ಜ್ಞಾನ ತಿಳಿದುಕೊಂಡಿದ್ದಾರೆ ಬಗ್ಗೆ ಎರಡು ಮಾತಿಲ್ಲ.
ಸದನದಲ್ಲಿ ಬಿಜೆಪಿ ಸರ್ಕಾರ ಅನೇಕ ಸಂದರ್ಭಗಳಲ್ಲಿ ಇಕ್ಕಟ್ಟಿಗೆ ಸಿಲುಕಿಕೊಂಡಾಗ ಪ್ರತಿಪಕ್ಷಗಳನ್ನು ತಮ್ಮ ಮಾತಿನ ಮೂಲಕವೇ ಕಟ್ಟಿಹಾಕಿ ಕಮಲ ಪಕ್ಷದ ಮಾನವನ್ನು ಕಾಪಾಡಿ ಬಿಜೆಪಿಯ ರಕ್ಷಾ ಕವಚ ಎಂದೇ ಕರೆಯುತ್ತಿದ್ದರು. ಆದರೆ, ಅವರ ನೇರ ಮತ್ತು ನಿಷ್ಠುರ ಮಾತುಗಳೇ ಮುಳುವಾಗಿ ಪರಿಣಮಿಸಿರುವುದು ಕೂಡ ಅಷ್ಟೇ ಸತ್ಯ.!
ಕೆಲವು ತಿಂಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಗ್ಗೆ ಸುದ್ದಿಗೋಷ್ಠಿ ಕರೆದ ವೇದಿಕೆಯಲ್ಲಿ ಕಾಂಗ್ರೆಸ್ ನಾಯಕರಾದ ವಿ.ಎಸ್. ಉಗ್ರಪ್ಪ ಮತ್ತು ಸಲೀಂ ಆಡಿದ್ದ ಪಿಸುಮಾತು ಭಾರೀ ಸುದ್ದಿಯಾಗಿತ್ತು.
ಡಿಕೆಶಿ ದೊಡ್ಡ ಸ್ಕ್ಯಾಮ್, ಕಲೆಕ್ಷನ್ ಗಿರಾಕಿ ಎಂದು ಡಿ.ಕೆ. ಶಿವಕುಮಾರ್ ಆಪ್ತ ಹೇಳಿದರೆ, ಅತ್ತ ಉಗ್ರಪ್ಪ, 'ನಿಮಗೆ ಗೊತ್ತಿಲ್ಲ ನಾವೆಲ್ಲ ಪಟ್ಟು ಹಿಡಿದು ಅಧ್ಯಕ್ಷ ಸ್ಥಾನ ಕೊಡಿಸಿದ್ದು, ಆದರೆ ತಕ್ಕಡಿ ಮೇಲೆ ಹೇಳುತ್ತಿಲ್ಲ' ಎಂದಿದ್ದ ಸಂಭಾಷಣೆ ವೈರಲ್ ಆಗಿತ್ತು. ನಂತರ ಸಲೀಂ ಅವರನ್ನು ಕಾಂಗ್ರೆಸ್ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಿದರೆ, ವಿ.ಎಸ್. ಉಗ್ರಪ್ಪನವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು.












Click it and Unblock the Notifications