ದೇವೇಗೌಡರು ಸೋಲಲು ಅವರ ಸೊಸೆಯಂದಿರು ಕಾರಣ: ಕಾಂಗ್ರೆಸ್ ಮುಖಂಡ
Recommended Video
ಬೆಂಗಳೂರು, ಮೇ 27: ದೇವೇಗೌಡ ಅವರು ತುಮಕೂರು ಲೋಕಸಭೆ ಚುನಾವಣೆಯಲ್ಲಿ ಸೋಲಲು ಅವರ ಇಬ್ಬರು ಸೊಸೆಯಂದಿರಾದ ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ ಅವರೇ ಕಾರಣ ಎಂದು ತುಮಕೂರಿನ ಯುವ ಕಾಂಗ್ರೆಸ್ ಮುಖಂಡ ಹೇಳಿದ್ದಾರೆ.
ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಮತ್ತು ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಪುತ್ರ ಆರ್.ರಾಜೇಂದ್ರ ಮಾತನಾಡಿ, ಇಬ್ಬರು ಸೊಸೆಯರಿಂದಲೇ ದೇವೇಗೌಡ ಅವರಿಗೆ ಈ ಗತಿ ಬಂದಿದೆ ಎಂದು ಹೇಳಿದರು.
ದೇವೇಗೌಡ ಅವರ ಸೊಸೆಯಂದಿರು ತಮ್ಮ ಮಕ್ಕಳಿಗೆ ಚುನಾವಣೆ ಟಿಕೆಟ್ ಬೇಕೆಂದು ಹಠ ಹಿಡಿದಿದ್ದರಿಂದಲೇ ದೇವೇಗೌಡ ಅವರಿಗೆ ಸೇಫ್ ಆಗಿದ್ದ ಹಾಸನ, ಮಂಡ್ಯ ಕ್ಷೇತ್ರಗಳನ್ನು ಬಿಟ್ಟುಕೊಟ್ಟು ಒಲ್ಲದ ಮನಸ್ಸಿನಿಂದ ತುಮಕೂರಿನಲ್ಲಿ ಬಂದು ಚುನಾವಣೆ ಸ್ಪರ್ಧಿಸಿದರು ಎಂದು ರಾಜೇಂದ್ರ ಹೇಳಿದರು.
ಚುನಾವಣೆಯಲ್ಲಿ ನಾವು (ಕಾಂಗ್ರೆಸ್) ನವರು ನಮ್ಮ ಶಕ್ತಿಮೀರಿ ದೇವೇಗೌಡ ಅವರ ಪರವಾಗಿ ಕೆಲಸ ಮಾಡಿದೆವು, ಆದರೆ ಜೆಡಿಎಸ್ ನವರಿಂದ ನಿರೀಕ್ಷಿಸಿದಷ್ಟು ಕೆಲಸ ಮಾಡಲಿಲ್ಲ, ಅವರ ಪಕ್ಷದ ರಾಷ್ಟ್ರಾಧ್ಯಕ್ಷರನ್ನು ಗೆಲ್ಲಿಸಿಕೊಳ್ಳಲು ಅಗತ್ಯ ಶ್ರಮ ಅವರು ಹಾಕಲಿಲ್ಲ ಎಂದು ರಾಜೇಂದ್ರ ಆರೋಪಿಸಿದರು.

'ದೇವೇಗೌಡ ಅವರು ರಾಜಣ್ಣ ಮನೆಗೆ ಬಂದಿಲ್ಲ'
ದೇವೇಗೌಡ ಅವರು ಚುನಾವಣೆ ಸಂದರ್ಭದಲ್ಲಿ ತುಮಕೂರಿನ ಎಲ್ಲ ಮುಖಂಡರಿಗೆ ಬಂದು ಹೋದರು ಆದರೆ ನಮ್ಮ ತಂದೆ ಮಾಜಿ ಶಾಸಕ ರಾಜಣ್ಣ ಅವರ ಮನೆಗೆ ಬರಲಿಲ್ಲ, ನಮ್ಮ ಮನೆಯ ಪಕ್ಕದ ಮನೆಗೆ ಬಂದಿದ್ದರು ಆದರೆ ನಮ್ಮ ಮನೆಗೆ ಬರಲಿಲ್ಲ, ಹಾಗೆಂದು ನಾವು ಅವರ ವಿರುದ್ಧವಾಗಿಯೇನೂ ಕೆಲಸ ಮಾಡಲಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

ಮೈತ್ರಿ ಜರಿದ ಕಾಂಗ್ರೆಸ್ ಯುವ ಮುಖಂಡ
ಮೈತ್ರಿಯನ್ನು ಜರಿದ ಅವರು, ಮೈತ್ರಿಯಿಂದ ಕಾಂಗ್ರೆಸ್‌ಗೆ ದೊಡ್ಡ ಪೆಟ್ಟು ಬಿದ್ದಿದೆ. ಕಳೆದ ಚುನಾವಣೆಯಲ್ಲಿ ಎಂಟು ಸ್ಥಾನ, ಉಪಚುನಾವಣೆಯಲ್ಲಿ ಎರಡು ಸ್ಥಾನ ಗೆದ್ದಿದ್ದ ಕಾಂಗ್ರೆಸ್‌ಗೆ ಈ ಬಾರಿ ಒಂದು ಸ್ಥಾನ ಸಹ ಸಿಗಲಿಲ್ಲ. ರಾಹುಲ್ ಪ್ರಧಾನಿ ಆಗುತ್ತಾರೆಂದು ಜೆಡಿಎಸ್ ಕೊಟ್ಟ ಹಿಂಸೆಯನ್ನು ಸಹಿಸಿಕೊಂಡು ನಾವು ಕೆಲಸ ಮಾಡಿದೆವು ಎಂದು ಅವರು ಹೇಳಿದರು.

ಕುಮಾರಸ್ವಾಮಿ ಬಗ್ಗೆ ಅಸಮಾಧಾನ
ಕುಮಾರಸ್ವಾಮಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರಾಜೇಂದ್ರ, ಕುಮಾರಸ್ವಾಮಿ ಕಾರ್ಯ ತೃಪ್ತಿ ತಂದಿಲ್ಲ, ರಾಜ್ಯದಲ್ಲಿ ಬರ ಇರುವಾಗ ಅವರು ತಾಜ್ ವೆಸ್ಟ್ ಎಂಡ್‌ನಲ್ಲಿ ಕೂತು ಆಡಳಿತ ಮಾಡುತ್ತಾರೆ. ಇದನ್ನೆಲ್ಲಾ ನೋಡಿದ ಜನ ನಮಗೆ ಹೇಗೆ ಮತ ಹಾಕುತ್ತಾರೆ ಎಂದು ಅವರು ಪ್ರಶ್ನಿಸಿದರು.

ಮಾಜಿ ಶಾಸಕ ರಾಜಣ್ಣ ಪುತ್ರ
ರಾಜೇಂದ್ರ ಅವರು ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಪುತ್ರರಾಗಿದ್ದು, ರಾಜ್ಯ ಯುವ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಕೆ.ಎನ್.ರಾಜಣ್ಣ ಅವರೂ ಸಹ ಮೈತ್ರಿ ಸರ್ಕಾರದ ಮೇಲೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದು, ಪರಮೇಶ್ವರ್ ಅವರೇ ದೇವೇಗೌಡ ಅವರು ಸೋಲಲು ಕಾರಣ ಎಂದು ಹೇಳಿದ್ದಾರೆ.












Click it and Unblock the Notifications