ಮೈಸೂರು, ತುಮಕೂರುಗಳಲ್ಲೂ ಮಳೆಯ ಅವಾಂತರ
ತುಮಕೂರು, ಸೆಪ್ಟೆಂಬರ್ 27: ಬೆಂಗಳೂರಿನಲ್ಲಿ ಸೆ. 26 ರಾತ್ರಿ ಸುರಿದ ಮಳೆ ಜನರ ಜೀವನವನ್ನು ಭಾರೀ ಪ್ರಮಾಣದಲ್ಲಿ ಅಸ್ತವ್ಯಸ್ತಗೊಳಿಸಿದ ರೀತಿಯಲ್ಲೇ ಮೈಸೂರು, ತುಮಕೂರು ಜಿಲ್ಲೆಗಳಲ್ಲೂ ವರುಣನ ಆರ್ಭಟಕ್ಕೆ ನಾಗರಿಕರು ತತ್ತರಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ದಸರಾ ಸಂಭ್ರಮದಲ್ಲಿ ಮುಳುaಗಿ ಹೋಗಿದ್ದ ಸಾಂಸ್ಕೃತಿಕ ನಗರಿಯ ಉತ್ಸಾಹಕ್ಕೆ ಮಳೆರಾಯ ತಣ್ಣೀರೆರೆಚಿದ್ದಾನೆ. ದಸರಾ ಅಂಗವಾಗಿ ಏರ್ಪಡಿಸಲಾಗಿದ್ದ ಹಲವಾರು ವೇದಿಕೆಗಳು, ಆಚರಣೆಗೆ ಸಿದ್ಧವಾಗಿದ್ದ ಮೈದಾನಗಳು ಜಲಾವೃತವಾಗಿರುವುದರಿಂದ ಅಲ್ಲಿನ ಜನರಿಗೆ ಭ್ರಮನಿರಸನವಾಗಿದೆ. ದಸರಾ ಪ್ರಯುಕ್ತ ಆಯೋಜಿಸಲಾಗಿದ್ದ ಓಪನ್ ಸ್ಟ್ರೀಟ್ ಕಾರ್ಯಕ್ರಮಕ್ಕೆ ತೊಂದರೆಯಾಗಿದೆ.

ಇನ್ನು, ಮೈಸೂರಿನ ಹಲವಾರು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿರುವುದರಿಂದ ನಾಗರಿಕರು ಪರಿತಪಿಸುವಂತಾಗಿದೆ. ಚಿಕ್ಕ ಗಡಿಯಾರ, ಗಾಂಧಿ ನಗರ ಸೇರಿದಂತೆ ಹಲವಾರು ಪ್ರದೇಶಗಳು ಜಲಾವೃತವಾಗಿವೆ.
ಇನ್ನು, ತುಮಕೂರು ಜಿಲ್ಲೆಯಲ್ಲೂ ಸೆ. 26ರ ರಾತ್ರಿ ವರುಣ ಅಬ್ಬರಿಸಿದ್ದಾನೆ. ತುಮಕೂರು ನಗರ, ತುಮಕೂರು ತಾಲೂಕು ವ್ಯಾಪ್ತಿಯ ಪ್ರದೇಶಗಳು ಸೇರಿದಂತೆ ಕೊರಟಗೆರೆ, ಗುಬ್ಬಿ, ತಿಪಟೂರುಗಳಲ್ಲೂ ಅತ್ಯಧಿಕ ಮಳೆಯಾಗಿದೆ.












Click it and Unblock the Notifications