ಮತ್ತೆ ರಣರಂಗವಾದ ಶಬರಿಮಲೆ, ಇಂದು ಕೇರಳ ಬಂದ್!
Recommended Video

ತಿರುವನಂತಪುರಂ, ಜನವರಿ 03: ಬುಧವಾರ ಕೇರಳದ ಶಬರಿಮಲೆಯ ಅಯ್ಯಪ್ಪ ದೇವಾಲಯದೊಳಗೆ ಇಬ್ಬರು ಮಹಿಳೆಯರು ಪ್ರವೇಶಿಸಿದ ನಂತರ ಉಂಟಾದ ಗಲಭೆಯಲ್ಲಿ ಗಾಯಗೊಂಡಿದ್ದ ವ್ಯಕ್ತಿಯೋರ್ವ ಇಂದು ಮೃತನಾಗಿದ್ದಾನೆ.
ಈ ಘಟನೆಯಿಂದ ಆಕ್ರೋಶಗೊಂಡ ಹಿಂದುಪರ ಸಂಘಟನೆಗಳು ಕೇರಳ ಬಂದ್ ಗೆ ಕರೆನೀಡಿದ್ದು, ಶಬರಿಮಲೆ ಮತ್ತೊಮ್ಮೆ ರಣರಂಗವಾಗಿದೆ. ಶಬರಿಮಲೆ ಕರ್ಮ ಸಮಿತಿ ಕರೆದ ಬಂದ್ ಗೆ ಬಿಜೆಪಿ ಮತ್ತು ಬಲಪಂಥೀಯ ಸಂಘಟನೆಗಳು ಬೆಂಬಲ ನೀಡಿವೆ. ಕಾಂಗ್ರೆಸ್ ಮತ್ತಿತರ ಮೈತ್ರಿಕೂಟಗಳು ಈ ದಿನವನ್ನು 'ಕರಾಳ ದಿನ'ವನ್ನಾಗಿ ಆಚರಿಸಲು ಮುಂದಾಗಿವೆ.
ಸಿಪಿಐ(ಎಂ) ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಗಲಾಟೆಯಲ್ಲಿ ಚಂದ್ರನ್ ಉನ್ನಿಥನ್ (55) ಎಂಬ ವ್ಯಕ್ತಿ ಗಾಯಗೊಂಡಿದ್ದರು. ತಲೆಗೆ ಏಟು ಬಿದ್ದ ಪರಿಣಾಮ ಗಂಭಿರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದರು.

ಎಂಟು ನೂರು ವರ್ಷಗಳಿಂದ ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕಿದ್ದ ನಿರ್ಬಂಧವನ್ನು ಕಳೆದ ಸೆಪ್ಟೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ತೆರವುಗೊಳಿಸಿತ್ತು. ಆದರೆ ಮಹಿಳೆಯರ ಪ್ರವೇಶಕ್ಕೆ ಶಬರಿಮಲೆ ಅಯ್ಯಪ್ಪ ದೇವಾಲಯದ ಆಡಳಿತ ಮಂಡಳಿ ಅವಕಾಶ ಕೊಟ್ಟಿರಲಿಲ್ಲ.
ಬುಧವಾರ ನಸುಕಿನಲ್ಲಿ ಪೊಲೀಸ್ ಭದ್ರತೆಯ ಮೂಲಕ 40 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು ಶಬರಿಮಲೆ ದೇವಾಲಯ ಪ್ರವೇಶಿಸಿದ್ದರು. ಇದು ದೇಶದಾದ್ಯಂತ ಸುದ್ದಿಯಾಗಿತ್ತು. ಹಿಂದುಗಳ ಸಂಪ್ರದಾಯ ಮತ್ತು, ನಂಬಿಕೆಯನ್ನು ನಾಶ ಮಾಡಲಾಗುತ್ತಿದೆ ಎಂದು ಹಿಂದುಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಇಬ್ಬರು ಮಹಿಳೆಯರ ಪ್ರವೇಶದ ನಂತರ ಶಬರಿಮಲೆ ದೇವಾಲಯವನ್ನು ಶುದ್ಧೀಕರಣದ ಕಾರಣ ನೀಡಿ ಮೂರು ದಿನಗಳ ಕಾಲ ಮುಚ್ಚಲಾಗಿದೆ.












Click it and Unblock the Notifications