ಕೊರೊನಾ ವೈರಸ್ ; ರಾಜ್ಯ ವಿಪತ್ತು ಎಂದು ಘೋಷಿಸಿದ ಕೇರಳ
ತಿರುವನಂತಪುರಂ, ಫೆಬ್ರವರಿ 04 : ಕೇರಳ ರಾಜ್ಯದಲ್ಲಿ ಮಾರಣಾಂತಿಕ ಕೊರೊನಾ ವೈರಸ್‌ನ 3ನೇ ಪ್ರಕರಣ ಪತ್ತೆಯಾಗಿದೆ. ಕೊರೊನಾವನ್ನು ರಾಜ್ಯ ಸರ್ಕಾರ ರಾಜ್ಯ ವಿಪತ್ತು ಎಂದು ಘೋಷಣೆ ಮಾಡಿದೆ.
ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸೋಮವಾರ ರಾತ್ರಿ ನಡೆದ ಸಭೆಯಲ್ಲಿ ರಾಜ್ಯ ವಿಪತ್ತು ಎಂದು ಘೋಷಣೆ ಮಾಡುವ ತೀರ್ಮಾನ ಕೈಗೊಳ್ಳಲಾಯಿತು. ಕಾಯಿಲೆಯಲ್ಲಿ ಹಂತ-ಹಂತವಾಗಿ ತಡೆಗಟ್ಟಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ.
ಕರ್ನಾಟಕದ ಪಕ್ಕದ ರಾಜ್ಯವಾದ ಕೇರಳದಲ್ಲಿ 3 ಕೊರೊನಾ ವೈರಸ್ ಪ್ರಕರಣಗಳು ಇದುವರೆಗೂ ಖಚಿತಗೊಂಡಿವೆ. 84 ಜನರ ಆರೋಗ್ಯದ ಮೇಲೆ ಕಣ್ಗಾವಲು ಇಡಲಾಗಿದೆ. ಇದರಿಂದಾಗಿ ರಾಜ್ಯ ಸರ್ಕಾರ ರಾಜ್ಯ ವಿಪತ್ತು ಎಂದು ಘೋಷಣೆ ಮಾಡಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಲಾಗಿದೆ. ಕೊರೊನಾವನ್ನು ತಡೆಗಟ್ಟಲು ಬೇಕಾದ ತುರ್ತು ಕ್ರಮಗಳನ್ನು ಕೈಗೊಳ್ಳುವ ಉಸ್ತುವಾರಿಯನ್ನು ಈ ಸಮಿತಿಯೇ ನೋಡಿಕೊಳ್ಳುತ್ತಿದೆ.

350ಕ್ಕೂ ಅಧಿಕ ಸಾವು
ಇದುವರೆಗೂ ವಿವಿಧ ದೇಶಗಳಲ್ಲಿ 17000ಕ್ಕೂ ಅಧಿಕ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಚೀನಾದಲ್ಲಿ 350 ಜನರು ಮೃತಪಟ್ಟಿದ್ದಾರೆ. ಕೇರಳ ರಾಜ್ಯದಲ್ಲಿ ಮೂರು ಪ್ರಕರಣಗಳು ಖಚಿತವಾಗಿದ್ದು. 84ಕ್ಕೂ ಅಧಿಕ ಜನರ ಆರೋಗ್ಯದ ಮೇಲೆ ಕಣ್ಗಾವಲು ಇಡಲಾಗಿದೆ.

ವಿದ್ಯಾರ್ಥಿಗೂ ವೈರಸ್ ತಗುಲಿದೆ
"ಕೇರಳದ ವಿದ್ಯಾರ್ಥಿನಿಗೆ ಕೊರೊನಾ ವೈರಸ್ ತಲುಲಿದೆ ಎಂಬ ಶಂಕೆ ಇತ್ತು. ಪರೀಕ್ಷೆ ಬಳಿಕ ಇದು ಖಚಿತಗೊಂಡಿದೆ. ಇದು ಸಾಂಕ್ರಾಮಿಕವಾಗಿ ಹರಡುವ ಸೋಂಕು ಆದ ಕಾರಣ ರಾಜ್ಯ ಸರ್ಕಾರ ರಾಜ್ಯ ವಿಪತ್ತು ಎಂದು ಘೋಷಣೆ ಮಾಡಿದೆ" ಎಂದು ಆರೋಗ್ಯ ಸಚಿವೆ ಕೆ. ಕೆ. ಶೈಲಜಾ ಹೇಳಿದ್ದಾರೆ.

ಪೊಲೀಸರಿಗೆ ಸೂಚನೆ
ಕೇರಳ ಸರ್ಕಾರ ಪೊಲೀಸರಿಗೆ ಹೆಚ್ಚಿನ ಅಧಿಕಾರವನ್ನು ಕೊಟ್ಟಿದೆ. ವೈರಸ್ ತಗುಲಿರುವ ಶಂಕೆ ಇದ್ದು ಚಿಕಿತ್ಸೆಗೆ ನಿರಾಕರಿಸಿದರೆ ಅವರನ್ನು ಬಂಧಿಸಿ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ವೈರಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸುವವರ ಮೇಲೆಯೂ ನೀಗಾ ಇಡಲು ಸೂಚನೆ ನೀಡಲಾಗಿದೆ.

ಕೇರಳದ ಅಂಕಿ ಸಂಖ್ಯೆಗಳು
ಕೇರಳ ರಾಜ್ಯದಲ್ಲಿ ಇದುವರೆಗೂ 3 ಕೊರೊನಾ ವೈರಸ್ ಪ್ರಕರಣಗಳು ಖಚಿತಗೊಂಡಿವೆ. 84 ಜನರ ಆರೋಗ್ಯದ ಮೇಲೆ ಆಸ್ಪತ್ರೆಯಲ್ಲಿ ನಿಗಾ ಇಡಲಾಗಿದೆ. ಮನೆಯಲ್ಲಿರುವ 2,239 ಜನರ ಮೇಲೆ ಕಣ್ಗಾವಲು ಇದೆ. 140 ಜನರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಇದರಲ್ಲಿ 46 ಪ್ರಕರಣಗಳು ನೆಗೆಟಿವ್ ಎಂಬ ವರದಿ ಬಂದಿದೆ.












Click it and Unblock the Notifications