ಕತುವಾ ತೀರ್ಪು: ಸ್ವರ್ಗದಲ್ಲಿರುವ ಆ ಎಂಟರ ಕೂಸಿಗೆ ನ್ಯಾಯ ಸಿಕ್ಕೀತಾ?
ಶ್ರೀನಗರ, ಜೂನ್ 10: ಕಳೆದ ವರ್ಷ ಜನವರಿ ತಿಂಗಳಿನಲ್ಲಿ ಜಮ್ಮು ಮತ್ತು ಕಾಶ್ಮೀರದ ಕತುವಾ ಎಂಬಲ್ಲಿ ಎಂಟು ವರ್ಷ ವಯಸ್ಸಿನ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಪಠಾಣಕೋಟ್ ನ್ಯಾಯಾಲಯ ತೀರ್ಪು ನೀಡಲಿದೆ.
ಇಡೀ ದೇಶದ ಗಮನ ಸೆಳೆದಿದ್ದ ಕತುವಾ ಪ್ರಕರಣ ಅದೆಷ್ಟು ಗಂಭೀರ ಸ್ವರೂಪ ಪಡೆದಿತ್ತೆಂದರೆ ಜಮ್ಮು-ಕಾಶ್ಮೀರ ಸ್ಕಾರಕ್ಕೆ ಬಿಜೆಪಿ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯುವುದಕ್ಕೆ ಅದೂ ಒಂದು ಕಾರಣ ಎಂಬಂತೆ ಬಿಂಬಿಸಲಾಗಿತ್ತು.
ಅತ್ಯಾಚಾರವಾಗಿದ್ದು ಮುಸ್ಲಿಂ ಬಾಲಕಿಯ ಮೇಲೆ, ಅತ್ಯಾಚಾರದ ಆರೋಪಿಗಳು ಹಿಂದುಗಳು ಎಂಬ ಕಾರಣಕ್ಕೆ ಈ ಪ್ರಕರಣ ಕೋಮು ರೂಪ ಪಡೆದು, ದೇಶದಾದ್ಯಂತ ಮತ್ತಷ್ಟು ಉದ್ವಿಗ್ನತೆ ಸೃಷ್ಟಿಸಿತ್ತು. ತಮ್ಮ ಮಗಳನ್ನು ಕೂಡಿಟ್ಟು, ಹಲವು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದವರಿಗೆ ಶಿಕ್ಷೆಯಾಗಬೇಕು ಎಂದು ಸಂತ್ರಸ್ತೆಯ ಕುಟುಂಬಸ್ಥರು ನಿರಂತರವಾಗಿ ಕೋರ್ಟು ಕಚೇರಿ ಅಲೆಯುತ್ತಿದ್ದಾರೆ. ಅಷ್ಟಕ್ಕೂ ಇದೀಗ ಕೋರ್ಟು ಸ್ವರ್ಗದಲ್ಲಿರುವ ಆ ಬಾಲಕಿಗೆ ಈಗಲಾದರೂ ನ್ಯಾಯ ದೊರಕಿಸಿಕೊಡುತ್ತದೆಯೇ ಎಂಬುದು ಇಂದು ತಿಳಿಯಲಿದೆ.

ಬೆಚ್ಚಿ ಬೀಳಿಸಿದ್ದ ಕತುವಾ ಪ್ರಕರಣ
ಜನವರಿ ತಿಂಗಳಿನಲ್ಲಿ ಕತುವಾದ ಎಂಟು ವರ್ಷದ ಮಗುವನ್ನು ಅಪಹರಿಸಿ, ಅದಕ್ಕೆ ಮತ್ತುಬರುವ ಔಷಧ ನೀಡಿ ಹಲವು ದಿನಗಳ ಕಾಲ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಆಕೆಯನ್ನು ಕೆಲ ದಿನಗಳ ಕಾಲ ಹತ್ತಿರದ ದೇವಾಲಯವೊಂದರಲ್ಲಿ ಇರಿಸಿಕೊಳ್ಳಲಾಗಿತ್ತು ಎಂಬುದೂ ಆರೋಪ. ಘಟನೆಗೆ ಸಂಬಂಧಿಸಿದಂತೆ ಎಂಟು ಜನರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಮುಗಿಸಿದೆ. ಈ ಪ್ರಕರಣವನ್ನು ತ್ವರಿತ ನ್ಯಾಯಾಲಯದ ಮೂಲಕ 90 ದಿನಗಳೊಳಗೆ ಇತ್ಯರ್ಥಗೊಳಿಸಬೇಕೆಂದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆದೇಶಿಸಿದ್ದರು.

ಯಾವ ಮತದವರೇ ಆಗಿರಲಿ, ನ್ಯಾಯ ಸಿಗಲಿ...
ಕೋಮು ಗಲಭೆ, ರಾಜಕೀಯ ಸ್ವಾರ್ಥ ಮುಸ್ಲಿಂ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ಮತ್ತು ಬಂಧಿತ ಆರೋಪಿಗಳು ಹಿಂದುಗಳಾಗಿರುವುದು ಪ್ರಕರಣಕ್ಕೆ ಕೋಮು ಬಣ್ಣವನ್ನು ಲೇಪಿಸಿದೆ. ಆದರೆ ಎಲ್ಲ ಸಿದ್ಧಾಂತಗಳನ್ನೂ ಮೀರಿ ಮಾನವೀಯತೆಯಿಂದ ಯೋಚಿಸಿದರೆ, ಒಬ್ಬ ಮುಗ್ಧ ಹೆಣ್ಣು ಮಗಳು ತಾನು ಮಾಡದ ತಪ್ಪಿಗೆ ಚಿತ್ರಹಿಂಸೆ ಅನುಭವಿಸಿ ಸತ್ತಿದ್ದಾಳೆ ಎಂಬುದಷ್ಟೇ ಸತ್ಯ! ಆದ್ದರಿಂದ ಮೊದಲು ನ್ಯಾಯ ಸಿಗಬೇಕು, ಜಾತಿ-ಮತ ಎಂಬ ಪೂರ್ವಗ್ರಹ ಬದಿಗಿಟ್ಟು ಆ ಕುಟುಂಬದ ನೋವನ್ನು ಕೊಂಚ ಮಟ್ಟಿಗಾದರೂ ಒರೆಸುವ ಪ್ರಯತ್ನ ಮಾಡಬೇಕಿದೆ.

60 ವರ್ಷ ವಯಸ್ಸಿನ ಹಿರಿಯ ನಾಗರಿಕನೂ ಆರೋಪಿ!
ಪ್ರಕರಣ ಭೇದಿಸಲು ಹೊರಟ ಪೊಲೀಸರು ಎಂಟು ಜನರನ್ನು ಬಂಧಿಸಿದ್ದರು. ಈ ಘಟನೆಯಲ್ಲಿ 60 ರ್ಷದ ನಿವೃತ್ತ ಸರ್ಕಾರಿ ನೌಕರ ಸಾಂಜಿ ರಾಮ್ ಎಂಬುವವನೂ ಶಾಮೀಲಾಗಿದ್ದಾನೆ ಎಂಬುದು ನಂತರ ತಿಳಿದುಬಂದಿತ್ತು. ಅಲ್ಲದೆ ಪೊಲೀಸ್ ಅಧಿಕಾರಿಗಳಾದ ಸುರೇಂದರ್ ವರ್ಮಾ, ಆನಂದ ದತ್ತ, ತಿಲಕ್ ರಾಜ್ ಮತ್ತು ಖಾಜುರಿಯಾ, ಅಲ್ಲದೆ ಸಾಂಜಿ ರಾಮ್ ಪುತ್ರ ವಿಶಾಲ್, ಸಂಬಂಧಿ ಒಬ್ಬ ಅಪ್ರಾಪ್ತ ಹುಡುಗ, ಆತನ ಸ್ನೇಹಿತ ಪರ್ವೇಶ್ ಕುಮಾರ್ ಮುಂತಾದವರು ಈ ಘಟನೆಯಲ್ಲಿ ಆರೋಪಿಗಳೆಂದು ಬಂಧಿಸಲಾಗಿತ್ತು.

ಪಠಾಣ್ ಕೋಟ್ ಕೋರ್ಟಿನ ಮುಂದೆ ಬಿಗಿ ಭದ್ರತೆ
ತೀರ್ಪಿನ ಹಿನ್ನೆಲೆಯಲ್ಲಿ ಪಠಾಣ್ ಕೋಟ್ ಕೋರ್ಟಿನ ಆವರಣದಲ್ಲಿ ಬಿಗಿಭದ್ರತೆಗೆ ಒತ್ತು ನೀಡಲಾಗಿದ್ದು, 1000 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.












Click it and Unblock the Notifications