WTC Points Table: ಸರಣಿ ಗೆದ್ದ ಭಾರತ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿ ಹೇಗಿದೆ?
ಸೋಮವಾರ ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಐದು ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಅಂಕಪಟ್ಟಿಯಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ.
ರೋಹಿತ್ ಶರ್ಮಾ ನೇತೃತ್ವದ ಭಾರತ ಐದು ಪಂದ್ಯಗಳ ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿದೆ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.

ರಾಂಚಿ ಟೆಸ್ಟ್ ಪಂದ್ಯಕ್ಕೆ ಮುನ್ನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಪಿಸಿಟಿ ( ಪಾಯಿಂಟ್ ಶೇಕಡಾವಾರು) 59.52% ಹೊಂದಿತ್ತು. ನಾಲ್ಕನೇ ಟೆಸ್ಟ್ ಗೆಲುವಿನ ಬಳಿಕ ಪಿಸಿಟಿ 64.58% ಕ್ಕೆ ಹೆಚ್ಚಾಗಿದೆ.
ಈ ಗಮನಾರ್ಹ ಹೆಚ್ಚಳದ ಪರಿಣಾಮ ಭಾರತ ಆಸ್ಟ್ರೇಲಿಯಾ (55%) ಮತ್ತು ಬಾಂಗ್ಲಾದೇಶ (50%) ಗಿಂತ ಉತ್ತಮ ಪಿಸಿಟಿಯೊಂದಿಗೆ ಎರಡನೇ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಏಕೆಂದರೆ ಎರಡು ತಂಡಗಳು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.
ಇಗ್ಲೆಂಡ್ 19.44% ಪಾಯಿಂಟ್-ಪರ್ಸೆಂಟೇಜ್‌ನೊಂದಿಗೆ 9ನೇ ಸ್ಥಾನಕ್ಕೆ ಕುಸಿತ ಕಂಡಿದ್ದು, ವಿಶ್ವ ಚಾಂಪಿಯನ್‌ಶಿಪ್ ಫೈನಲ್ ತಲುಪುವ ಅವಕಾಶವನ್ನು ಬಹುತೇಕ ಕಳೆದುಕೊಂಡಿದೆ.
ಭಾರತ 2024-2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೈಕಲ್‌ನಲ್ಲಿ ಈವರೆಗೂ 8 ಪಂದ್ಯಗಳನ್ನು ಆಡಿದ್ದು, ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಎರಡು ಪಂದ್ಯಗಳಲ್ಲಿ ಸೋತಿದ್ದು, ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.
ಮೊದಲ ಸ್ಥಾನದಲ್ಲಿ ನ್ಯೂಜಿಲೆಂಡ್
ಅಂಕಪಟ್ಟಿಯಲ್ಲಿ, ನ್ಯೂಜಿಲೆಂಡ್ ಇದುವರೆಗೆ ಕೇವಲ ನಾಲ್ಕು ಟೆಸ್ಟ್‌ಗಳನ್ನು ಆಡಿದ್ದರೂ ಸಹ ಪ್ರಭಾವಶಾಲಿ 75% ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿ ಉಳಿದುಕೊಂಡಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೈಕಲ್‌ನಲ್ಲಿ ಟೆಸ್ಟ್ ಪಂದ್ಯದ ಗೆಲುವಿಗೆ 12 ಅಂಕಗಳನ್ನು, ಟೈಗೆ ಆರು ಮತ್ತು ಡ್ರಾಗೆ ನಾಲ್ಕು ಅಂಕಗಳನ್ನು ನೀಡಲಾಗುತ್ತದೆ. ಆದರೆ ತಂಡಗಳು ತಮ್ಮ ಶೇಕಡಾವಾರು ಪಾಯಿಂಟ್‌ಗಳ ಆಧಾರದ ಮೇಲೆ ಅಂಕಪಟ್ಟಿಯಲ್ಲಿ ಸ್ಥಾನವನ್ನು ಪಡೆಯುತ್ತವೆ.
2025 ರಲ್ಲಿ ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮೊದಲ ಎರಡು ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
ಚಾಂಪಿಯನ್‌ಶಿಪ್‌ನ ಹಿಂದಿನ ಎರಡೂ ಆವೃತ್ತಿಗಳಲ್ಲಿ ಫೈನಲ್‌ಗೆ ತಲುಪಿದ್ದ ಭಾರತ, ಉದ್ಘಾಟನಾ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತರೆ, ಕಳೆದ ವರ್ಷ ಆವೃತ್ತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿದೆ. ಈಗ ಮೂರನೇ ಬಾರಿ ಫೈನಲ್‌ಗೇರುವ ಉತ್ಸಾಹದಲ್ಲಿದೆ.
ಮಾರ್ಚ್ 7 ರಂದು ಧರ್ಮಶಾಲಾದಲ್ಲಿ ಐದನೇ ಮತ್ತು ಅಂತಿಮ ಟೆಸ್ಟ್ ಪ್ರಾರಂಭವಾಗಲಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ತಮ್ಮ ಎರಡನೇ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಲು ಭಾರತಕ್ಕೆ ಈಗ ಸುವರ್ಣ ಅವಕಾಶವಿದೆ.












Click it and Unblock the Notifications