WTC Final: ಭಾರತ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅಶ್ವಿನ್‌ಗಿಲ್ಲ ಅವಕಾಶ: ಕಾರಣ ಏನು?
ಲಂಡನ್‌ನ ಕೆನ್ನಿಂಗ್ಟನ್ ಓವಲ್ ಅಂಗಳದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಭಾರತ ಅತ್ಯುತ್ತಮ ತಂಡವನ್ನು ಕಣಕ್ಕಿಳಿಸಿದೆ. ಅಚ್ಚರಿ ಎನ್ನುವಂತೆ ಭಾರತದ ಪ್ಲೇಯಿಂಗ್ ಇಲೆವೆನ್‌ನಲ್ಲಿ ವಿಶ್ವದ ನಂಬರ್ 1 ಟೆಸ್ಟ್ ಬೌಲರ್ ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆಯುವಲ್ಲಿ ವಿಫಲವಾದರು.
ರವಿಚಂದ್ರನ್ ಅಶ್ವಿನ್ ಅಥವಾ ಉಮೇಶ್ ಯಾದವ್ ಇಬ್ಬರಲ್ಲಿ ಒಬ್ಬರು ಆಡುವ ಬಳಗದಲ್ಲಿ ಸ್ಥಾನ ಪಡೆಯುತ್ತಾರೆ ಎನ್ನುವುದು ಗೊತ್ತಿತ್ತು, ಅಪಾರ ಅನುಭವ ಹೊಂದಿರುವ ಅಶ್ವಿನ್ ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿ ಕೂಡ ಕೊಡುಗೆ ಕೊಡುವ ಸಾಮರ್ಥ್ಯ ಹೊಂದಿರುವುದರಿಂದ ಅವರೇ ಮೊದಲ ಆಯ್ಕೆಯಾಗಬಹುದು ಎಂದು ಹೇಳಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಉಮೇಶ್ ಯಾದವ್ ಸ್ಥಾನ ಪಡೆದುಕೊಂಡರು.

ರೋಹಿತ್ ಶರ್ಮಾ ಹೇಳಿದ್ದೇನು?
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಬಳಿಕ ಮಾತನಾಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, "ನಾವು ಬೌಲಿಂಗ್ ಮಾಡಲಿದ್ದೇವೆ. ಓವಲ್‌ನಲ್ಲಿ ಮೋಡ ಕವಿದ ವಾತಾವರಣ ಇದೆ, ಪಿಚ್‌ನಲ್ಲಿ ಯಾವ ಬದಲಾವಣೆ ಆಗುವುದಿಲ್ಲ, ಆದ್ದರಿಂದ ನಾಲ್ವರು ವೇಗಿಗಳು ಮತ್ತು ಒಬ್ಬ ಸ್ಪಿನ್ನರ್ ಆಡಿಸಲು ನಿರ್ಧರಿಸಿದ್ದೇವೆ. ಅಶ್ವಿನ್ ಅವರನ್ನು ತಂಡದಿಂದ ಕೈಬಿಡುವ ನಿರ್ಧಾರ ತುಂಬಾ ಕಠಿಣವಾಗಿದೆ. ಅವರು ಪಂದ್ಯವನ್ನು ಗೆಲ್ಲಿಸಿಕೊಡುವ ಬೌಲರ್" ಎಂದು ಹೇಳಿದರು.
ಅಜಿಂಕ್ಯ ರಹಾನೆ ಬಗ್ಗೆ ಕೂಡ ರೋಹಿತ್ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದರು, ರಹಾನೆ ಅಪಾರ ಅನುಭವ ಹೊಂದಿರುವ ಬ್ಯಾಟರ್, ಅವರು 80ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರ ಅನುಭವ ತಂಡಕ್ಕೆ ಬೇಕು ಎಂದು ಹೇಳಿದರು.
ಅಶ್ವಿನ್ ಕೈಬಿಟ್ಟಿದ್ದಕ್ಕೆ ಹಲವರ ಅಚ್ಚರಿ
ಇನ್ನು ಅಶ್ವಿನ್ ಅವರನ್ನು ತಂಡದಿಂದ ಕೈಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ. ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಪಂದ್ಯಗಳ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಅವರು 25 ವಿಕೆಟ್ ಪಡೆದು ಮಿಂಚಿದ್ದರು, ಬ್ಯಾಟಿಂಗ್‌ನಲ್ಲಿ ಕೂಡ ಅವರು ಗಮನಾರ್ಹ ಪ್ರದರ್ಶನ ನೀಡಿದ್ದರು. ಪಿಚ್ ಯಾವುದೇ ಇದ್ದರೂ, ಅವರು ಬ್ಯಾಟರ್ ಗಳನ್ನು ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದರು, ಅವರಿಗೆ ಅವಕಾಶ ನೀಡಬೇಕು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಉಭಯ ತಂಡಗಳ ಪ್ಲೇಯಿಂಗ್ 11
ಭಾರತ: ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಶ್ರೀಕರ್ ಭರತ್(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಉಸ್ಮಾನ್, ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮರೂನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್(ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್.












Click it and Unblock the Notifications