RCB: ಮತ್ತೆ ಆರ್‌ಸಿಬಿ ಸೇರುವ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಫಾಫ್ ಡುಪ್ಲೆಸಿಸ್
ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025ರ ಮೆಗಾ ಹರಾಜಿಗಾಗಿ ಕ್ಷಣಗಣನೆ ಆರಂಭವಾಗಿದೆ. ಭಾನುವಾರ (ನವೆಂಬರ್ 24) ಮಧ್ಯಾಹ್ನ 3 ಗಂಟೆಗೆ ಮೆಗಾ ಹರಾಜು ಆರಂಭವಾಗಲಿದೆ. 574 ಆಟಗಾರರು ಈ ಬಾರಿ ಮೆಗಾ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದು, ಅದರಲ್ಲಿ ಗರಿಷ್ಠ 204 ಆಟಗಾರರು ವಿವಿಧ ತಂಡಗಳನ್ನು ಸೇರಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕೂಡ ಹರಾಜಿಗಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.
ಐಪಿಎಲ್ ಮೆಗಾ ಹರಾಜಿಗೆ ಮುನ್ನ ಆರ್‌ಸಿಬಿ ಮೂವರು ಆಟಗಾರರನ್ನು ಮಾತ್ರ ಉಳಿಸಿಕೊಂಡಿದ್ದು ಎಲ್ಲರನ್ನೂ ಬಿಡುಗಡೆ ಮಾಡಿದೆ. ವಿರಾಟ್ ಕೊಹ್ಲಿ, ರಜತ್ ಪಟಿದಾರ್ ಮತ್ತು ಯಶ್ ದಯಾಳ್ ಮಾತ್ರ ತಂಡದಲ್ಲಿ ಉಳಿದುಕೊಂಡಿದ್ದಾರೆ. ನಾಯಕ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ವಿಲ್ ಜ್ಯಾಕ್ಸ್ ಸೇರಿದಂತೆ ಪ್ರಮುಖ ಆಟಗಾರರನ್ನು ಬಿಡುಗಡೆ ಮಾಡಿದೆ.

ಈ ಬಾರಿ ನಾಯಕ ಯಾರು?
ನಾಯಕ ಫಾಫ್ ಡುಪ್ಲೆಸಿಸ್‌ರನ್ನು ಬಿಡುಗಡೆ ಮಾಡಿರುವ ಆರ್ ಸಿಬಿ ಅವರನ್ನು ಖರೀದಿ ಮಾಡುತ್ತಾ ಇಲ್ಲವಾ ಎನ್ನುವ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಕಡಿಮೆ ಮೊತ್ತಕ್ಕೆ ಸಿಕ್ಕರ್ ಡುಪ್ಲೆಸಿಸ್‌ರನ್ನು ತೆಗೆದುಕೊಳ್ಳುವ ಬಗ್ಗೆ ಆರ್ ಸಿಬಿ ಯೋಚಿಸುವ ಸಾಧ್ಯತೆ ಇದೆ. ಈ ಬಗ್ಗೆ ಡುಪ್ಲೆಸಿಸ್ ಪ್ರತಿಕ್ರಿಯೆ ನೀಡಿದ್ದ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
"ಹರಾಜಿನ ಬಗ್ಗೆ ನಮಗೆ ತಿಳಿದಿರುವುದಿಲ್ಲ ಅಲ್ಲಿ ಏನಾಗಲಿದೆ ಎನ್ನುವುದು ಕೂಡ ಗೊತ್ತಿರುವುದಿಲ್ಲ, ಆದರಿಂದ ನವೆಂಬರ್ 24ರಂದು ಏನಾಗುತ್ತದೆ ಎನ್ನುವುದನ್ನು ನೋಡಲು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ನಾನು ಕೂಡ ಏನಾಗುತ್ತದೆ ಎಂದು ನೋಡಲು ಕಾಯುತ್ತಿದ್ದೇನೆ" ಎಂದು ಫಾಫ್ ಡುಪ್ಲೆಸಿಸ್ ಎಎನ್‌ಐಗೆ ತಿಳಿಸಿದ್ದಾರೆ.
ಮೂರು ಆವೃತ್ತಿಯಲ್ಲಿ ಆರ್ ಸಿಬಿ ತಂಡವನ್ನು ಮುನ್ನಡೆಸಿರುವ ಫಾಫ್ ಡುಪ್ಲೆಸಿಸ್ ಮತ್ತೆ ಆರ್ ಸಿಬಿ ಸೇರುವ ನಿರೀಕ್ಷೆಯಲ್ಲಿದ್ದಾರೆ. 40 ವರ್ಷದ ಡುಪ್ಲೆಸಿಸ್‌ಗೆ ಇದೇ ಕೊನೆಯ ಐಪಿಎಲ್ ಆಗುವ ಸಾಧ್ಯತೆ ಕೂಡ ಇದೆ. ಒಂದು ವೇಳೆ ಆರ್ ಸಿಬಿ ದೀರ್ಘಕಾಲದವರೆಗೆ ನಾಯಕನ ಹುಡುಕಾಟದಲ್ಲಿದ್ದರೆ ಡುಪ್ಲೆಸಿಸ್‌ರನ್ನು ಖರೀದಿ ಮಾಡುವ ಸಾಧ್ಯತೆ ಕಡಿಮೆ ಇದೆ.
ಕಳೆದ ಆವೃತ್ತಿಯಲ್ಲಿ ಫಾಫ್ ಡುಪ್ಲೆಸಿಸ್‌ರನ್ನು 7 ಕೋಟಿ ರೂಪಾಯಿಗೆ ಉಳಿಸಿಕೊಳ್ಳಲಾಗಿತ್ತು. ಈ ಬಾರಿ ಫಾಫ್ ಡುಪ್ಲೆಸಿಸ್ 2 ಕೋಟಿ ರೂಪಾಯಿ ಮೂಲ ಬೆಲೆ ಹೊಂದಿದ್ದಾರೆ. ಈ ಬಾರಿ 7 ಕೋಟಿಗಿಂತ ಕಡಿಮೆ ಮೊತ್ತಕ್ಕೆ ಹರಾಜಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.
ಫಾಫ್ ಡುಪ್ಲೆಸಿಸ್ ಐಪಿಎಲ್‌ನಲ್ಲಿ 138 ಪಂದ್ಯಗಳನ್ನಾಡಿದ್ದು 35.99 ಸರಾಸಿಯಲ್ಲಿ 4571 ರನ್ ಗಳಿಸಿದ್ದಾರೆ. 136.36 ಸ್ಟ್ರೈಕ್‌ರೇಟ್ ಹೊಂದಿದ್ದಾರೆ. 37 ಅರ್ಧಶತಕ ಗಳಿಸಿದ್ದಾರೆ. 40 ವರ್ಷವಾದರೂ ಫಾಫ್ ಇನ್ನೂ ಸಖತ್ ಫಿಟ್ ಆಗಿದ್ದಾರೆ. ಅವರ ನಾಯಕತ್ವದಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸೈಂಟ್ ಲೂಸಿಯಾ ಕಿಂಗ್ಸ್ ಚಾಂಪಿಯನ್ ಆಗಿತ್ತು. ಇದನ್ನೆಲ್ಲಾ ಪರಿಗಣಿಸಿ ಅವರನ್ನು ಮತ್ತೆ ತಂಡಕ್ಕೆ ಕರೆತರಲು ಆರ್ ಸಿಬಿ ಪ್ರಯತ್ನಿಸುವ ಸಾಧ್ಯತೆ ಇದೆ.












Click it and Unblock the Notifications