Dinesh Karthik: ನಿವೃತ್ತಿಯಾದರೂ ಆರ್ಸಿಬಿ ತಂಡದಲ್ಲಿರುತ್ತಾರೆ ದಿನೇಶ್ ಕಾರ್ತಿಕ್!
ಆರ್ಸಿಬಿ ಅಭಿಮಾನಿಗಳು ದಿನೇಶ್ ಕಾರ್ತಿಕ್‌ರನ್ನು 'ಡಿಕೆ ಬಾಸು' ಎಂದೇ ಕರೆಯುತ್ತಾರೆ. ತಂಡ ಸಂಕಷ್ಟದಲ್ಲಿದ್ದಾಗ ಆಪದ್ಭಾಂಧವರಾಗಿದ್ದಾರೆ. ಆರ್ಸಿಬಿ ತಂಡಕ್ಕೆ ಕಪ್ ಗೆದ್ದುಕೊಟ್ಟು ಐಪಿಎಲ್‌ನಿಂದ ನಿವೃತ್ತಿಯಾಗುವ ಕನಸು ಹೊಂದಿದ್ದರು.
ಟೂರ್ನಿಯಿಂದಲೇ ಹೊರಬೀಳುವ ಹಂತದಿಂದ ಪುಟಿದೆದ್ದ ಆರ್ಸಿಬಿ ಸತತ ಆರು ಪಂದ್ಯಗಳನ್ನು ಗೆದ್ದು ಪ್ಲೇಆಫ್ ತಲುಪಿತ್ತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತು.

ರಾಜಸ್ಥಾನ ರಾಯಲ್ಸ್ ವಿರುದ್ಧದ ಸೋಲಿನ ಬಳಿಕ ದಿನೇಶ್ ಕಾರ್ತಿಕ್ ಅವರಿಗೆ ತಂಡದ ಆಟಗಾರರು ಗಾರ್ಡ್ ಆಫ್ ಹಾನರ್ ನೀಡಿದರು. ಆರ್ಸಿಬಿ ಫ್ರಾಂಚೈಸಿ ಕೂಡ ದಿನೇಶ್ ಕಾರ್ತಿಕ್ ಕುರಿತಂತೆ ವಿಶೇಷ ವಿಡಿಯೋವನ್ನು ಕೂಡ ಹಂಚಿಕೊಂಡಿದೆ.
ತಂಡದಲ್ಲಿರುತ್ತಾರೆ ದಿನೇಶ್ ಕಾರ್ತಿಕ್
ಕಳೆದ ಬಾರಿ ಐಪಿಎಲ್ ಆಡಿದ್ದ ಬಳಿಕ ವೀಕ್ಷಕ ವಿವರಣೆಗಾರರಾಗಿ ಕೆಲಸ ಮಾಡಿದ್ದ ದಿನೇಶ್ ಕಾರ್ತಿಕ ಈ ಐಪಿಎಲ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಮೋಡಿ ಮಾಡಿದ್ದರು. ಈಗ ಐಪಿಎಲ್‌ನಿಂದ ನಿವೃತ್ತಿ ಹೊಂದಿರುವ ದಿನೇಶ್ ಕಾರ್ತಿಕ್, ಮತ್ತೆ ವೀಕ್ಷಕ ವಿವರಣೆಗಾರರಾಗಿ ಕೆಲಸ ಮುಂದುವರೆಸುವ ಸಾಧ್ಯತೆ ಇದೆ.
ಆಟಗಾರನಾಗಿ ತಂಡದಿಂದ ನಿವೃತ್ತಿಯಾದರೂ, ದಿನೇಶ್ ಕಾರ್ತಿಕ್ ಆರ್ಸಿಬಿ ಜೊತೆಯೇ ಇರಬೇಕು ಎನ್ನುವುದು ಅಭಿಮಾನಿಗಳ ಆಸೆ. ದಿನೇಶ್ ಕಾರ್ತಿಕ್ ಹಿರಿಯ ಆಟಗಾರ, ಉತ್ತಮ ಮಾತುಗಾರ. ತಂಡ ಸೋತಾಗ ಅವರು ಆಟಗಾರರ ಆತ್ಮವಿಶ್ವಾಸ ಹೆಚ್ಚುವಂತೆ ಮಾತನಾಡಿದ್ದರು.
ಮುಂದಿನ ಐಪಿಎಲ್‌ನಲ್ಲಿ ದಿನೇಶ್ ಕಾರ್ತಿಕ್ ಆರ್ಸಿಬಿ ತಂಡದ ಮೆಂಟರ್ ಅಥವಾ ಬ್ಯಾಟಿಂಗ್ ಕೋಚ್ ಆಗಿ ತಂಡದಲ್ಲಿದ್ದರೆ ತಂಡಕ್ಕೆ ಲಾಭವಾಗಲಿದೆ ಎನ್ನುವ ಲೆಕ್ಕಾಚಾರ ಅಭಿಮಾನಿಗಳದ್ದಾಗಿದೆ.
ಅನುಭವ ಬಳಸಿಕೊಳ್ಳುತ್ತಾ ಆರ್ಸಿಬಿ?
ಆರ್ಸಿಬಿ ತಂಡ ಈ ಮೊದಲು ಎಬಿ ಡಿವಿಲಿಯರ್ಸ್ ಅವರನ್ನು ತಂಡಕ್ಕೆ ಮೆಂಟರ್ ಆಗಿ ಮಾಡಿಕೊಳ್ಳುವ ಅವಕಾಶ ಇದ್ದರೂ ಅದನ್ನು ಬಳಸಿಕೊಳ್ಳಲಿಲ್ಲ. ಆದರೆ ದಿನೇಶ್ ಕಾರ್ತಿಕ್ ತಂಡದ ಮೆಂಟರ್ ಅಥವಾ ಬ್ಯಾಟಿಂಗ್ ಕೋಚ್ ಆಗಲು ಅತ್ಯುತ್ತಮ ಆಯ್ಕೆಯಾಗಿದ್ದಾರೆ.
ವೀಕ್ಷಕ ವಿವರಣೆಗಾರರಾಗಿ ಕೆಲಸ ಮಾಡುವ ಅವರಿಗೆ, ವಿಶ್ವದ ವಿವಿಧ ತಂಡಗಳ ಆಟಗಾರರ ಬಗ್ಗೆ ಮಾಹಿತಿ ಇರುತ್ತದೆ. ದೇಶೀಯ ಕ್ರಿಕೆಟ್‌ನಲ್ಲಿ ಕೂಡ ಅವರು ಆಡಿದ್ದು, ಭಾರತೀಯ ಯುವ ಆಟಗಾರರ ಬಗ್ಗೆ ಕೂಡ ಮಾಹಿತಿ ಇರುತ್ತದೆ. ಅವರ ಅಪಾರ ಅನುಭವ ಐಪಿಎಲ್ 2025 ಮೆಗಾ ಹರಾಜಿನಲ್ಲಿ ಕೂಡ ಕೆಲಸಕ್ಕೆ ಬರಲಿದೆ. ಆದರೆ ಈ ಬಗ್ಗೆ ಆರ್ಸಿಬಿ ಮ್ಯಾನೇಜ್‌ಮೆಂಟ್ ಯೋಚಿಸಬೇಕಿದೆ.












Click it and Unblock the Notifications