ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬ್ರಿಜ್ ಭೂಷಣ್ ರಕ್ಷಣೆಗೆ ನಿಂತ ಬಿಜೆಪಿ: ಭಾರತೀಯ ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್ ನೇರ ಆರೋಪ
ನವದೆಹಲಿ, ಆಗಸ್ಟ್ 03: ಭಾರತೀಯ ಕುಸ್ತಿ ಫೆಡರೇಶನ್ ಮಾಜಿ ಅಧ್ಯಕ್ಷ ಹಾಗೂ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಲೈಂಗಿಕ ಕಿರುಕುಳ ಪ್ರಕರಣದಿಂದ ದೆಹಲಿ ನ್ಯಾಯಾಲಯ ಸೋಮವಾರ (ಆಗಸ್ಟ್ 3) ಖುಲಾಸೆಗೊಳಿಸಿದೆ. ಇದರ ಬೆನ್ನಲ್ಲೇ ಮಹಿಳಾ ಕುಸ್ತಿಪಟುಗಳು ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಈ ಕುರಿತು ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಪ್ರಕರಣದ ಆರಂಭದಿಂದಲೂ ಬ್ರಿಜ್ ಭೂಷಣ್ ಅವರನ್ನು ರಕ್ಷಿಸಲು ಸರ್ಕಾರದ ಇಡೀ ವ್ಯವಸ್ಥೆಯೇ ಕೆಲಸ ಮಾಡುತ್ತಿದೆ,' ಎಂದು ವಿನೇಶ್ ಫೋಗಟ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಆರು ಜನ ಮಹಿಳಾ ಕುಸ್ತಿಪಟುಗಳು ನೀಡಿದ್ದ ಲೈಂಗಿಕ ಕಿರುಕುಳ ದೂರಿನ ಕುರಿತು ಹೆಚ್ಚುವರಿ ಮುಖ್ಯ ಜುಡಿಶಿಯಲ್ ಮೆಜಿಸ್ಟ್ರೇಟ್ ಅಶ್ವಿನಿ ಪನ್ವಾರ್ ಅವರಿದ್ಧ ನ್ಯಾಯಪೀಠವು ವಿಚಾರಣೆ ನಡೆಸಿತು. ಈ ವೇಳೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಹಾಗೂ ಡಬ್ಲ್ಯೂಎಫ್‌ಐನ ಮಾಜಿ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಅವರನ್ನು ಆರೋಪ ಮುಕ್ತಗೊಳಿಸಿ ತೀರ್ಪು ನೀಡಿದೆ.

ಗಂಭೀರ ಆರೋಪ ಮಾಡಿದ ವಿನೇಶ್ ಫೋಗಟ್
ಈ ತೀರ್ಪು ಹೊರಬಿದ್ದ ಬೆನ್ನಲ್ಲೇ ವಿನೇಶ್ ಫೋಗಟ್ ಅವರು ಪ್ರತಿಕ್ರಿಯಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಮಹಿಳಾ ಕುಸ್ತಿಪಟುಗಳು ಹೊರಿಸಿದ್ದ ಲೈಂಗಿಕ ಕಿರುಕುಳದ ಆರೋಪಗಳಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಕೋರ್ಟ್ ದೋಷಿ ಎಂದು ಪರಿಗಣಿಸದೇ ಇರುವುದು ನಮಗೆ ತೀವ್ರ ಬೇಸರ ತರಿಸಿದೆ. ಪ್ರಕರಣ ಪ್ರಾರಂಭವಾದ ಮೊದಲ ದಿನದಿಂದಲೂ ಇಡೀ ಸರ್ಕಾರಿ ವ್ಯವಸ್ಥೆ ಬ್ರಿಜ್ ಭೂಷಣ್ ಅವರನ್ನು ಕಾಪಾಡಲು ಶ್ರಮವಹಿಸುತ್ತಿದೆ,' ಎಂದು ಆರೋಪ ಮಾಡಿದ್ದಾರೆ.
'ಹೆದರಿಕೆ, ಪ್ರಭಾವದ ವಿರುದ್ಧ ಧೈರ್ಯದ ಹೋರಾಟ'
ಆಡಳಿತಾರೂಢ ಪಕ್ಷದ ಅತ್ಯಂತ ಪ್ರಭಾವಿ ನಾಯಕನ ವಿರುದ್ಧ ದೂರು ನೀಡಿ ಎಫ್‌ಐಆರ್ ದಾಖಲಿಸುವುದೇ ದೊಡ್ಡ ಸವಾಲಾಗಿತ್ತು ಎಂದು ವಿನೇಶ್ ನೆನಪಿಸಿಕೊಂಡಿದ್ದಾರೆ. 'ಬ್ರಿಜ್ ಭೂಷಣ್ ತಮ್ಮ ರಾಜಕೀಯ ಪ್ರಭಾವ ಹಾಗೂ ಸರ್ಕಾರದ ಬೆಂಬಲವನ್ನು ಬಳಸಿಕೊಂಡು ಹಲವು ಯುವ ಮಹಿಳಾ ಕುಸ್ತಿಪಟುಗಳನ್ನು ಹೆದರಿಸಿ, ಬೆದರಿಸಿ ಪ್ರಕರಣವನ್ನು ಹಿಂಪಡೆಯುವಂತೆ ಮಾಡಿದ್ದರು,' ಎಂದು ಹೇಳಿದ್ದಾರೆ.
ಇಷ್ಟೆಲ್ಲಾ ಬೆದರಿಕೆಗಳು ಮತ್ತು ಒತ್ತಡಗಳ ನಡುವೆಯೂ, ಕೆಲ ಮಹಿಳಾ ಕುಸ್ತಿಪಟುಗಳು ಧೈರ್ಯದಿಂದ ಹಿಂಜರಿಯದೆ ನ್ಯಾಯಾಲಯದಲ್ಲಿ ಕೊನೆಯವರೆಗೂ ಹೋರಾಟ ಮುಂದುವರಿಸಿದರು. ಇದೀಗ ಕೋರ್ಟ್ ನೀಡಿದ ಈ ತೀರ್ಪಿನಿಂದ ಹೋರಾಟ ಮುಗಿದಿಲ್ಲ ಎಂದು ಸ್ಪಷ್ಟಪಡಿಸಿರುವ ಕುಸ್ತಿಪಟುಗಳು, ಕಾನೂನು ಸಮರವನ್ನು ಮುಂದುವರಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಕಾನೂನು ಹೋರಾಟ ಮುಂದುವರೆಸಲು ತೀರ್ಮಾನ
ಮಹಿಳಾ ಕುಸ್ತಿಪಟುಗಳು ಈಗಾಗಲೇ ತಮ್ಮ ವಕೀಲರಿಗೆ ತೀರ್ಪಿನ ವಿರುದ್ಧ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಸ್ಪಷ್ಟ ಸೂಚನೆ ನೀಡಲಾಗಿದೆ. ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಆದಷ್ಟು ಬೇಗ ಮೇಲ್ಮನವಿ ಅರ್ಜಿಯನ್ನು ಸಲ್ಲಿಕೆ ಮಾಡಲಾಗುತ್ತದೆ. ನಾವು ಯಾರೂ ಕೂಡ ಭರವಸೆಯನ್ನು ಕಳೆದುಕೊಂಡಿಲ್ಲ. ನ್ಯಾಯ ಸಿಗುವವರೆಗೂ ಕುಸ್ತಿಪಟುಗಳ ಈ ಹೋರಾಟ ಮುಂದುವರೆಯಲಿದೆ ಎಂದು ಫೋಗಟ್ ತಿಳಿಸಿದ್ದಾರೆ.
ಕ್ರೀಡಾ ವಲಯದಲ್ಲಿ ಭಾರಿ ಚರ್ಚೆ
ದೇಶಕ್ಕೆ ಪದಕ ತಂದುಕೊಟ್ಟ ಕ್ರೀಡಾಪಟುಗಳು ಬೀದಿಗಿಳಿದು ನಡೆಸಿದ ಸುದೀರ್ಘ ಹೋರಾಟದ ನಂತರವೂ ಆರೋಪಿಗಳಿಗೆ ಖುಲಾಸೆ ಸಿಕ್ಕಿರುವುದು ಕ್ರೀಡಾ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆದರೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ಭರವಸೆ ಇಟ್ಟು ಉನ್ನತ ನ್ಯಾಯಾಲಯದ ಮೆಟ್ಟಿಲೇರಲು ಕ್ರೀಡಾಪಟುಗಳು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಮತ್ಯಾವ ತಿರುವು ಪಡೆಯಲಿದೆ ಎಂದು ಕಾದುನೋಡಬೇಕಿದೆ.


Click it and Unblock the Notifications
