Vaibhav Sooryavanshi: ದುಲೀಪ್ ಟ್ರೋಫಿಗೂ ಮುನ್ನ ಉಪನಾಯಕ ವೈಭವ್ ಸೂರ್ಯವಂಶಿ ವಿಶೇಷ ಸಂದೇಶ, ಭಾರಿ ವೈರಲ್
Vaibhhav Sooryavanshi: ಭಾರತೀಯ ಕ್ರಿಕೆಟ್‌ನ ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಬ್ಯಾಟಿಂಗ್‌ನಿಂದಲೇ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ನಡೆದ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಈ ಬಾಲಕ ಇದೀಗ ಟೆಸ್ಟ್‌ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಈ ನಡುವೆಯೇ ವೈಭವ್ ವಿಶೇಷ ಸಂದೇಶವನ್ನು ರವಾನಿಸಿದ್ದು, ಇದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಭಾರತೀಯ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಐಪಿಎಲ್ 2026ರಲ್ಲಿ ರನ್ ಮಳೆಯನ್ನೇ ಹರಿಸಿ ದಿಗ್ಗಜರ ಗಮನ ಸೆಳೆದಿದ್ದರು. ಇದರ ಬೆನ್ನಲ್ಲೇ ಅವರಿಗೆ ಭಾರತೀಯ ತಂಡದಲ್ಲಿ ಸ್ಥಾನ ಲಭಿಸಿತು. ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಆಡುವ ಅವಕಾಶ ಸಿಗದಿದ್ದರೂ, ಇಂಗ್ಲೆಂಡ್ ಪ್ರವಾಸದಲ್ಲಿ ಅವರು ಪದಾರ್ಪಣೆ ಮಾಡಿದರು. ಆದರೆ ಆ ವೇಳೆ ಅವರಿಂದ ನಿರೀಕ್ಷಿತ ಪ್ರದರ್ಶನ ಕಂಡುಬರಲಿಲ್ಲ. ನಂತರ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಭರ್ಜರಿ ಕಂಬ್ಯಾಕ್ ಮಾಡಿ ರನ್ ಹೊಳೆ ಹರಿಸಿದ್ದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಮಿಂಚಲು ಭರ್ಜರಿ ತಯಾರಿ
ಈ ಭರ್ಜರಿ ಪ್ರದರ್ಶನವನ್ನು ಪರಿಗಣಿಸಿ ಅವರನ್ನು ಈಸ್ಟ್ ಝೋನ್ ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ತಂಡದ ಉಪನಾಯಕನ ಜವಾಬ್ದಾರಿಯನ್ನು ನೀಡಲಾಗಿದೆ. ಈಗಾಗಲೇ ಟಿ-20 ಕ್ರಿಕೆಟ್‌ನಲ್ಲಿ ತಮ್ಮ ಅದ್ಭುತ ಪ್ರತಿಭೆಯನ್ನು ಸಾಬೀತುಪಡಿಸಿರುವ ವೈಭವ್, ಕ್ರಿಕೆಟ್‌ನ ಅತ್ಯಂತ ಕಠಿಣ ಮಾದರಿಯಾದ ಟೆಸ್ಟ್ ಕ್ರಿಕೆಟ್‌ನಲ್ಲೂ ಮಿಂಚಲು ಭರ್ಜರಿ ತಯಾರಿ ಆರಂಭಿಸಿದ್ದು, ಈ ನಡುವೆಯೇ ವಿಶೇಷ ಸಂದೇಶವೊಂದನ್ನೂ ಹಂಚಿಕೊಂಡಿದ್ದಾರೆ.
ವೈಭವ್ ಸೂರ್ಯವಂಶಿ ವಿಶೇಷ ಸಂದೇಶ
ಜಿಂಬಾಬ್ವೆ ಪ್ರವಾಸದಿಂದ ಮರಳಿದ ನಂತರ ನೆಟ್ಸ್‌ನಲ್ಲಿ ಕಠಿಣ ಅಭ್ಯಾಸ ನಡೆಸಿದ್ದಾರೆ. ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಭ್ಯಾಸದ ವೀಡಿಯೊವನ್ನು ಹಂಚಿಕೊಂಡಿದ್ದು, ಅದರಲ್ಲಿ ಡಿಫೆನ್ಸ್ ಮತ್ತು ಅಟ್ಯಾಕಿಂಗ್ ಎರಡೂ ಮಾದರಿಯ ಶಾಟ್‌ಗಳ ಮೇಲೆ ಗಮನ ಹರಿಸಿದ್ದಾರೆ. ಈ ವೀಡಿಯೊ ಜೊತೆಗೆ ಅವರು 'ತಯಾರಿ' ಎಂದು ಕೇವಲ ಒಂದೇ ಪದದ ಶೀರ್ಷಿಕೆಯನ್ನು ಬರೆದುಕೊಂಡು ಗಮನ ಸೆಳೆದಿದ್ದಾರೆ.
ವೈಭವ್ ಸೂರ್ಯವಂಶಿ 15ನೇ ವಯಸ್ಸಿನಲ್ಲೇ ಇಂಗ್ಲೆಂಡ್ ಪ್ರವಾಸದ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅಲ್ಲಿ ಆಡಿದ ಮೂರು ಇನಿಂಗ್ಸ್‌ಗಳಲ್ಲಿ ಅವರಿಗೆ 20 ರನ್‌ಗಳ ಗಡಿಯನ್ನೂ ದಾಟಲು ಸಾಧ್ಯವಾಗಲಿಲ್ಲ. ಆ ಸರಣಿಯನ್ನು ಟೀಮ್ ಇಂಡಿಯಾ 1-4 ಅಂತರದಿಂದ ಸೋತಿತು.
ಭರ್ಜರಿ ಕಮ್ ಬ್ಯಾಕ್ ಮಾಡಿದ 'ವಂಡರ್ ಕಿಡ್'
ಆದರೂ ಜಿಂಬಾಬ್ವೆ ಪ್ರವಾಸದಲ್ಲಿ ವೈಭವ್ ಸೂರ್ಯವಂಶಿ ಅವರು ಭರ್ಜರಿ ಕಂಬ್ಯಾಕ್ ಮಾಡಿದರು. ಮೂರು ಇನಿಂಗ್ಸ್‌ಗಳಲ್ಲಿ ಎರಡು ಅರ್ಧಶತಕಗಳ ನೆರವಿನಿಂದ 151 ರನ್ ಗಳಿಸಿದರು. ಈ ಅವಧಿಯಲ್ಲಿ ಅವರ ಬ್ಯಾಟಿಂಗ್ ಸರಾಸರಿ 50.33 ಮತ್ತು ಸ್ಟ್ರೈಕ್ ರೇಟ್ 196.10 ಆಗಿತ್ತು. ಈ ಅದ್ಭುತ ಪ್ರದರ್ಶನಕ್ಕಾಗಿ ಅವರಿಗೆ 'ಪ್ಲೇಯರ್ ಆಫ್ ದಿ ಸರಣಿ' ಪ್ರಶಸ್ತಿ ಒಲಿದಿತ್ತು.
ನೂತನ ಟಿ20 ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಭಾರತ ತನ್ನ ಮೊದಲ ಸರಣಿಯನ್ನು ಗೆದ್ದುಕೊಂಡಿತು. ಈವರೆಗೆ ಆಡಿದ ಆರು ಟಿ20 ಪಂದ್ಯಗಳಲ್ಲಿ ವೈಭವ್ ಸೂರ್ಯವಂಶಿ ಅವರು 32.16 ಸರಾಸರಿ ಮತ್ತು 189.21 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 193 ರನ್ ಬಾರಿಸಿದ್ದಾರೆ.
ವೈಭವ್ ಹೆಗಲೇರಿದ ದೊಡ್ಡ ಜವಾಬ್ದಾರಿ
ಈಸ್ಟ್ ಝೋನ್ ಆಯ್ಕೆದಾರರು ದುಲೀಪ್ ಟ್ರೋಫಿಗಾಗಿ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರನ್ನು ನಾಯಕನಾಗಿ ಆಯ್ಕೆ ಮಾಡಿದ್ದಾರೆ. ವೈಭವ್ ಸೂರ್ಯವಂಶಿ ಅವರನ್ನು ಉಪನಾಯಕನಾಗಿ ನೇಮಕ ಮಾಡಲಾಗಿದೆ. ಇದು ಅವರ ವೃತ್ತಿಜೀವನದಲ್ಲಿ ಮತ್ತೊಂದು ದೊಡ್ಡ ಹೆಜ್ಜೆಯಾಗಿದೆ. ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನಂತರ, ಇದೀಗ ಅವರಿಗೆ ಟೆಸ್ಟ್‌ನಲ್ಲೂ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಸುವರ್ಣಾವಕಾಶ ಸಿಕ್ಕಂತಾಗಿದೆ.
ಮೂಲಗಳ ಪ್ರಕಾರ, ಅವರು ಅನುಭವಿ ಬೆಂಗಾಲ್ ಬ್ಯಾಟರ್ ಅಭಿಮನ್ಯು ಈಶ್ವರನ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ದುಲೀಪ್ ಟ್ರೋಫಿ ಆಗಸ್ಟ್ 23ರಿಂದ ಪ್ರಾರಂಭ ಆಗಲಿದ್ದು, ಮೊದಲ ಪಂದ್ಯವು ಈಸ್ಟ್ ಝೋನ್ ಮತ್ತು ನಾರ್ತ್ ಈಸ್ಟ್ ಝೋನ್ ತಂಡಗಳ ನಡುವೆ ನಡೆಯಲಿದೆ.
ಭಾರತ ತಂಡ: ಇಶಾನ್ ಕಿಶನ್ (ನಾಯಕ), ವೈಭವ್ ಸೂರ್ಯವಂಶಿ (ಉಪನಾಯಕ), ಅಭಿಮನ್ಯು ಈಶ್ವರನ್, ಸುದೀಪ್ ಘರಾಮಿ, ಮೊಹಮ್ಮದ್ ಶಮಿ, ಮುಕೇಶ್ ಕುಮಾರ್, ಶಹಬಾಜ್ ಅಹ್ಮದ್, ಸೂರಜ್ ಜೈಸ್ವಾಲ್, ವಿರಾಟ್ ಸಿಂಗ್, ಕುಮಾರ್ ಕುಶಾಗ್ರ, ಶಿಖರ್ ಮೋಹನ್, ಸುಬ್ರಾಂಶು ಸೇನಾಪತಿ, ಅಭಿಜೀತ್ ಸರ್ಕಾರ್, ಅನುಕೂಲ್ ರಾಯ್, ದಾನಿಶ್ ದಾಸ್.


Click it and Unblock the Notifications
