ಕೊಡಗಿನಲ್ಲಿ ಹಾಕಿ ಉತ್ಸವ ಶುರು: ಕೊಡವ ಹಾಕಿ ಹಬ್ಬದ ವಿಶೇಷತೆ ಗೊತ್ತಾ?
ಮಡಿಕೇರಿ: ಇಡೀ ದೇಶದಲ್ಲಿ ಐಪಿಎಲ್ ಕ್ರಿಕೆಟ್ ನ ಜ್ವರ ಶುರುವಾಗಿದ್ದರೆ ಇತ್ತ ಕೊಡಗಿನಲ್ಲಿ ಶೀಘ್ರದಲ್ಲಿಯೇ ಹಾಕಿ ಜ್ವರ ಆರಂಭವಾಗಲಿದೆ. ಇದು ಕೊಡಗಿನ ಮಟ್ಟಿಗೆ ಬರೀ ಆಟವಲ್ಲ. ಒಂದು ರೀತಿಯಲ್ಲಿ ಹಬ್ಬ ಎಂದರೂ ತಪ್ಪಾಗಲಾರದು. ಎಲ್ಲೋ ಒಂದು ಕಡೆ ರಾಷ್ಟ್ರೀಯ ಕ್ರೀಡೆಯಾದ ಹಾಕಿ ನಮ್ಮಿಂದ ದೂರವಾಗುತ್ತಿದೆಯೇನೋ ಎನ್ನುವ ಕಾಲದಲ್ಲಿ ಇಲ್ಲಿ ಹಾಕಿ ಪಂದ್ಯಾವಳಿಯನ್ನು ಆರಂಭಿಸಲಾಯಿತು. ಇವತ್ತು ಅದು 24ನೇ ವರ್ಷಕ್ಕೆ ಕಾಲಿಟ್ಟಿದೆ.
ಕೊಡಗಿನಲ್ಲಿ ನಡೆಯುವ ಹಾಕಿಪಂದ್ಯಾವಳಿಯ ನೇತೃತ್ವವನ್ನು ಪ್ರತಿವರ್ಷವೂ ಒಂದೊಂದು ಕೊಡವ ಕುಟುಂಬವು ವಹಿಸಿಕೊಂಡು ಬರುತ್ತಿದ್ದು, ಈ ಬಾರಿ ಕುಂಡ್ಯೋಳಂಡ ಕುಟುಂಬವು ಸಾರಥ್ಯವನ್ನು ವಹಿಸಿಕೊಂಡು ಕುಂಡ್ಯೋಳಂಡ ಕಪ್ ಹೆಸರಿನಲ್ಲಿಯೇ ಹಾಕಿ ಪಂದ್ಯಾವಳಿಯನ್ನು ಕೊಡಗಿನ ನಾಪೋಕ್ಲುವಿನ ಮೂರು ಮೈದಾನದಲ್ಲಿ ಆಯೋಜಿಸಿದೆ. ಈ ಬಾರಿ ಹಾಕಿ ಪಂದ್ಯಾವಳಿ ಅರ್ಥಾತ್ ಹಾಕಿ ಹಬ್ಬವು ಮಾ.30ರಿಂದ ಆರಂಭವಾಗಿ ಏ.28ರವರೆಗೆ ನಡೆಯಲಿದೆ.

ಈ ಹಾಕಿಪಂದ್ಯಾವಳಿಗಾಗಿ ನಾಪೋಕ್ಲುವಿನ ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ ಮೂರು ಮೈದಾನವನ್ನು ಸಜ್ಜುಗೊಳಿಸಲಾಗಿದ್ದು, ವೇದಿಕೆ, ಗ್ಯಾಲರಿ, ಸ್ಟಾಲ್ ಗಳ ನಿರ್ಮಾಣ ಹೀಗೆ ವಿವಿಧ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ. ಇನ್ನೆರಡು ದಿನದಲ್ಲಿ ಪಂದ್ಯಾವಳಿ ಆರಂಭವಾಗುವುದರಿಂದ ಎಲ್ಲವನ್ನು ಸುಸೂತ್ರವಾಗಿ ಮಾಡಲಾಗುತ್ತಿದೆ.
1997ರಲ್ಲಿ ಆರಂಭವಾದ ಹಾಕಿ ಪಂದ್ಯಾವಳಿ
ಹಾಕಿ ಪಂದ್ಯಾವಳಿಯಲ್ಲಿ ಈ ಬಾರಿ ಸುಮಾರು 400 ಕೊಡವ ಕುಟುಂಬಗಳ ತಂಡ ಭಾಗವಹಿಸುವಂತೆ ಮಾಡಲು ಶ್ರಮಪಡಲಾಗಿತ್ತಾದರೂ ಅಂತಿಮವಾಗಿ ದಾಖಲೆಯ ಸುಮಾರು 360 ಕುಟುಂಬ ತಂಡಗಳು ಭಾಗವಹಿಸುತ್ತಿರುವುದು ವಿಶೇಷವಾಗಿದ್ದು, ಇದು ವಿಶ್ವದಾಖಲೆಯ ಪುಟ ಸೇರಬಹುದೆಂದು ನಿರೀಕ್ಷೆ ಮಾಡಲಾಗಿದೆ. ಇದರ ಜತೆಗೆ ಕೊಡವ ಹಾಕಿ ಪಂದ್ಯಾವಳಿಯ ಹಿಂದಿನ ದಿನಗಳನ್ನು ಮೆಲುಕು ಹಾಕಿದರೆ ಹತ್ತಾರು ವಿಶೇಷತೆಗಳಿರುವುದನ್ನು ಕಾಣಬಹುದಾಗಿದೆ.
1997ರಲ್ಲಿ ವೀರಾಜಪೇಟೆಯ ಪುಟ್ಟ ಗ್ರಾಮ ಪಾಂಡಂಡ ಕುಟ್ಟಪ್ಪರವರ ಹುಟ್ಟೂರಾದ ಕರಡದ ಮೈದಾನದಲ್ಲಿಯೇ 'ಹಾಕಿ ಪಂದ್ಯಾವಳಿ' ಯನ್ನು ಆರಂಭಿಸಲಾಯಿತು. ಕೊಡವರೆಲ್ಲರೂ ಇದನ್ನು ಪಂದ್ಯಾವಳಿಯಾಗಿ ನೋಡದೆ ನಮ್ಮ ಹಬ್ಬ ಎಂಬಂತೆ ನೋಡಿದರ ಪರಿಣಾಮವಾಗಿ ಇವತ್ತು ಇಪ್ಪತ್ತನಾಲ್ಕನೇ ಪಂದ್ಯಾವಳಿ ನಡೆಯಲು ಸಾಧ್ಯವಾಗಿದೆ. ಇಷ್ಟರಲ್ಲೇ ಬೆಳ್ಳಿಮಹೋತ್ಸವವನ್ನು ಆಚರಿಸಬೇಕಾಗಿತ್ತು. ಆದರೆ ಕೊಡಗಿನಲ್ಲಿ ನಡೆದ ಭೂಕುಸಿತ, ಕೊರೊನಾ ಕಾರಣಗಳಿಂದಾಗಿ ಕೆಲವು ವರ್ಷ ಪಂದ್ಯಾವಳಿಯನ್ನು ನಡೆಸಲು ಸಾಧ್ಯವಾಗಿರಲಿಲ್ಲ.

ಪಂದ್ಯಾವಳಿಯ ಹತ್ತು ಹಲವು ವಿಶೇಷತೆ
ಇನ್ನು 1997ರಲ್ಲಿ ಕರಡದಲ್ಲಿ ನಡೆದ ಪಾಂಡಂಡ ಕಪ್ ನಲ್ಲಿ 60 ತಂಡಗಳು ಭಾಗವಹಿಸಿದ್ದರೆ ನಂತರದ ವರ್ಷಗಳಲ್ಲಿ ಇದರ ಸಂಖ್ಯೆ ಹೆಚ್ಚುತ್ತಾ ಹೋಗಿರುವುದು ವಿಶೇಷವಾಗಿದೆ. ಅದರಲ್ಲೂ ಕುಲ್ಲೇಟಿರ ಕಪ್ ನಲ್ಲಿ 320 ಮತ್ತು ಕಳೆದ ವರ್ಷ(2023) ನಡೆದ ಅಪ್ಪಚೆಟ್ಟೋಳಂಡ ಕಪ್ ನಲ್ಲಿ 336 ತಂಡಗಳು ಭಾಗವಹಿಸಿದ್ದವು. ಆದರೆ ಈ ಬಾರಿ ಅತಿಹೆಚ್ಚು 360 ತಂಡಗಳು ಭಾಗವಹಿಸುತ್ತಿವೆ ಎಂದು ಹೇಳಲಾಗಿದೆ.
ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಕೆಲವೊಂದು ವಿಶೇಷತೆಗಳನ್ನು ನೋಡುವುದಾದರೆ ಇದುವರೆಗೆ ಹಾಕಿಪಂದ್ಯಾವಳಿಯಲ್ಲಿ ಆಟವಾಡಿರುವ ಪಳಂಗಂಡ ಕುಟುಂಬದ ತಂಡ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರೆ, ಕೂತಂಡ ಕುಟುಂಬದ ತಂಡವು 4 ಬಾರಿ ಕಲಿಯಂಡ, ಕುಲ್ಲೇಟಿರ, ನೆಲ್ಲಮಕ್ಕಡ ತಂಡಗಳು ಕ್ರಮವಾಗಿ 3 ಬಾರಿ ಅಂಜಪರವಂಡ, ಮಂಡೆಪಂಡ, ಕುಪ್ಪಂಡ (ಕೈಕೇರಿ) ತಂಡಗಳು ತಲಾ 1 ಬಾರಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿವೆ. ಈ ಬಾರಿ ಯಾವ ಕುಟುಂಬದ ತಂಡ ಗೆಲುವು ಸಾಧಿಸುತ್ತದೆ ಎಂಬುದನ್ನು ನೋಡಬೇಕಾದರೆ ಏ.28ರ ತನಕ ಕಾಯಬೇಕಾಗಿದೆ.
ಹಾಕಿ ನಮ್ಮೆಯ ಅಧ್ಯಕ್ಷರು ಹೇಳುವುದೇನು?
ಈ ಬಾರಿಯ ಕುಂಡ್ಯೋಳಂಡ ಹಾಕಿ ಪಂದ್ಯಾವಳಿ ಕುರಿತಂತೆ ಮಾತನಾಡಿದ ಹಾಕಿನಮ್ಮೆಯ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಅವರು ಪಂದ್ಯಾವಳಿಗೆ ಮೈದಾನ, ಗ್ಯಾಲರಿಗಳ ನಿರ್ಮಾಣ ಅಂತಿಮ ಹಂತದಲ್ಲಿದೆ. ಕ್ರೀಡಾ ಉತ್ಸವದ ಯಶಸ್ವಿಗೆ ವಿವಿಧ ಸಮಿತಿಗಳು ಕಾರ್ಯ ಪ್ರವೃತ್ತವಾಗಿವೆ. ಈ ಬಾರಿ ದಾಖಲೆಯ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿವೆ. ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸಲು ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವ ಮೂಲಕ ಹಾಕಿ ಸಮಿತಿ ಸಮಿತಿ ಹಗಲಿರುಳು ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.

ಪಂದ್ಯಾವಳಿಯ ನಿರ್ದೇಶಕ ಅಂಜಪರವಂಡ ಕುಶಾಲಪ್ಪ ಮಾತನಾಡಿ ದಿನಕ್ಕೆ ಆರು ಪಂದ್ಯಗಳಂತೆ ಮೂರು ಮೈದಾನಗಳಲ್ಲಿ ಒಟ್ಟು 18 ಪಂದ್ಯಗಳು ನಡೆಯಲಿವೆ. ಉದ್ಘಾಟನಾ ದಿನದಂದು ಇಂಡಿಯನ್ ನೇವಿ ಹಾಗೂ ಕೂರ್ಗ್ ಇಲೆವೆನ್ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಕ್ರೀಡಾ ಕಲಿಗಳ ಸಮಾಗಮದ ಉತ್ಸವ
ಇದೆಲ್ಲದರ ಕೊಡಗಿನ ಕೊಡವ ಕುಟುಂಬಗಳ ಹಾಕಿ ಪಂದ್ಯಾವಳಿ ಬಗ್ಗೆ ಮೆಲುಕು ಹಾಕಿದರೆ ಇದರಲ್ಲಿ ಹತ್ತು ಹಲವು ವಿಶೇಷತೆಗಳಿರುವುದು ಎದ್ದು ಕಾಣಿಸುತ್ತಿದೆ. ಈಗಾಗಲೇ 'ಲಿಮ್ಕಾ ಬುಕ್ ಆಫ್ ರೆಕಾರ್ಡ್'ನಲ್ಲಿ ಸ್ಥಾನ ಪಡೆದಿರುವ ಪಂದ್ಯಾವಳಿ, ಕೇವಲ ಸೋಲು-ಗೆಲುವಿನ ಲೆಕ್ಕಚಾರದ ಪಂದ್ಯವಲ್ಲ. ಇದು ಕೊಡವ ಸಮುದಾಯದ ಒಗ್ಗಟ್ಟು, ಪ್ರೀತಿ-ವಿಶ್ವಾಸವನ್ನು ಬಲಪಡಿಸುವ, ಯುವ ಸಮೂಹದಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವ, ರಾಷ್ಟ್ರೀಯ- ಅಂತ ರಾಷ್ಟ್ರೀಯ ಕ್ರೀಡಾ ಕಲಿಗಳ ಸಮಾಗಮವಾಗಿದೆ.

ಈ ಹಾಕಿ ಪಂದ್ಯಾವಳಿಯಲ್ಲಿ ಭಾರತದ ಹಾಕಿ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡ ಆಟಗಾರರಲ್ಲದೆ, ಇತರೆ ಕ್ರೀಡೆಯಲ್ಲಿ ತಮ್ಮ ಸಾಮರ್ಥ್ಯ ಮೆರೆದ, ಸೇನೆ, ಪೊಲೀಸ್, ಇನ್ನಿತರ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳು, ಕಾಫಿ ಬೆಳೆಗಾರರು, ವಿದ್ಯಾರ್ಥಿಗಳು, ಯುವಕರು, ಯುವತಿಯರು ಒಟ್ಟಾಗಿ ಕುಟುಂಬದ ತಂಡವನ್ನು ಸಿದ್ಧಪಡಿಸಿಕೊಂಡು ಆಡುವ ಆಟವಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ.












Click it and Unblock the Notifications