Dilip Doshi: ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟರ್ ನಿಧನ
Dilip Doshi Passes Away: ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ದಿಲೀಪ್ ದೋಶಿ (77) ಅವರುಹೃದಯಾಘಾತದಿಂದ ಲಂಡನ್‌ನಲ್ಲಿ ನಿಧನರಾಗಿದ್ದಾರೆ. ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ದೃಢಪಡಿಸಿದೆ. ಕ್ರಿಕೆಟ್‌ನಲ್ಲಿ ಇವರ ಸಾಧನೆ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ದಿಲೀಪ್ ದೋಶಿ ಅವರು ತಮ್ಮ 32ನೇ ವಯಸ್ಸಿನಲ್ಲಿ ಭಾರತ ತಂಡದ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ನಾಟಿಂಗ್‌ಹ್ಯಾಮ್‌ಶೈರ್‌ನಲ್ಲಿ ವೆಸ್ಟ್ ಇಂಡೀಸ್ ದಂತಕಥೆ ಗಾರ್ಫೀಲ್ಡ್ ಸೋಬರ್ಸ್ ಅವರ ಆಟ ನೋಡಿ ಹೆಚ್ಚು ಪ್ರಭಾವಿತರಾಗಿದ್ದರು. ಆದ್ದರಿಂದ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದು ಅತ್ಯುತ್ತಮ ಪ್ರದರ್ಶನ ನೀಡಿದ್ದರು.

1970ರ ದಶಕದಲ್ಲಿ ಟೀಮ್ ಇಂಡಿಯಾದ ಪ್ರಸಿದ್ಧ ಬೌಲರ್ ಆಗಿ ಗುರುತಿಸಿಕೊಂಡಿದ್ದರು. ಇದಕ್ಕೂ ಮುಂಚೆ ಅವರು ಸೌರಾಷ್ಟ್ರ, ಬಂಗಾಳ, ವಾರ್ವಿಕ್‌ಷೈರ್ ಮತ್ತು ನಾಟಿಂಗ್‌ಹ್ಯಾಮ್‌ಷೈರ್ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದರು. 1980ರಲ್ಲಿ ಕ್ರಿಕೆಟ್ನಿಂದ ದೂರ ಉಳಿದರು. ಬಳಿಕ ಕ್ರಿಕೆಟ್‌ನಲ್ಲಿ ಕಳೆದಂತ ಅತ್ಯಮೂಲ್ಯ ದಿನಗಳನ್ನು ತಮ್ಮ ಆತ್ಮಚರಿತ್ರೆ ಸ್ಪಿನ್ ಪಂಚ್ ಪುಸ್ತಕದಲ್ಲಿ ಬರೆದಿದ್ದಾರೆ.
33 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಸ್ಪಿನ್ ಬೌಲರ್ ದಿಲೀಪ್ ದೋಶಿ ಅವರು, ಒಟ್ಟು 144 ವಿಕೆಟ್ಗಳನ್ನು ಕಬಳಿಸಿದ್ದರು. ಇದರಲ್ಲಿ ಅವರು 6 ಬಾರಿ 5 ವಿಕೆಟ್ಗಳ ಗೊಂಚಲು ಪಡೆದಿರುವುದು ವಿಶೇಷವಾಗಿದೆ. 15 ಏಕದಿನ ಪಂದ್ಯಗಳಿಂದ 22 ವಿಕೆಟ್ ಕಬಳಿಸಿದ್ದಾರೆ. ಇತ್ತೀಚೆಗೆ ಡಬ್ಲ್ಯೂಟಿಸಿ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯವನ್ನು ವೀಕ್ಷಣೆ ಮಾಡಲು ಲಾರ್ಡ್ಸ್ ಮೈದಾನಕ್ಕೂ ಬಂದಿದ್ದರು.
ಅವರು ಹಲವು ವರ್ಷಗಳಿಂದ ಲಂಡನ್‌ನಲ್ಲಿ ವಾಸಿಸುತ್ತಿದ್ದರು. 1980ರ ದಶಕದಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಇನ್ನು ಇದೀಗ ಸೋಮವಾರ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದು, ಸಚಿನ್ ತೆಂಡೂಲ್ಕರ್ ಮತ್ತು ಹರ್ಭಜನ್ ಸಿಂಗ್ ಸೇರಿದಂತೆ ಹಲವಾರು ದಿಗ್ಗಜರು ಸಂತಾಪ ಸೂಚಿಸಿದರು.
ಸಂತಾಪ ಸೂಚಿಸಿದ ಸಚಿನ್ ತೆಂಡುಲ್ಕರ್: ನಾನು ದಿಲೀಪ್‌ಭಾಯಿಯನ್ನು 1990ರಲ್ಲಿ ಯುಕೆನಲ್ಲಿ ಮೊದಲ ಬಾರಿಗೆ ಭೇಟಿ ಆಗಿದೆ. ಅವರು ಆ ಪ್ರವಾಸದಲ್ಲಿ ನೆಟ್ಸ್‌ನಲ್ಲಿ ನನಗೆ ಬೌಲಿಂಗ್ ಮಾಡಿದರು. ನನ್ನ ಮೇಲೆ ತುಂಬಾ ಪ್ರೀತಿ ಹೊಂದಿದ್ದರು. ಅವರ ಭಾವನೆಗಳನ್ನು ಗೌರವಿಸುತ್ತೇನೆ. ದಿಲೀಪ್‌ಭಾಯಿಯಂತಹ ಆತ್ಮೀಯ ವ್ಯಕ್ತಿಯನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಅವರೊಂದಿಗೆ ನಾನು ಕ್ರಿಕೆಟ್ ಬಗ್ಗೆ ಮಾತನಾಡುತ್ತಿದ್ದ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಟ್ವಿಟರ್‌ನಲ್ಲಿ ಬರೆದುಕೊಳ್ಳುವ ಮೂಲಕ ಸಂತಾಪ ಸೂಚಿಸಿದ್ದಾರೆ.












Click it and Unblock the Notifications