Hardik Pandya: ಭಾರತ ತಂಡಕ್ಕೆ ಆಘಾತ! ಹಾರ್ದಿಕ್ ಪಾಂಡ್ಯ ಗಾಯದ ಬಗ್ಗೆ ಬಿಸಿಸಿಐ ಹೇಳಿದ್ದೇನು?
ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಅಮೋಘ ಪ್ರದರ್ಶನ ನೀಡುತ್ತಿದೆ. ಆಡಿದ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ ಹಾದಿಯನ್ನು ಸುಲಭವಾಗಿಸಿದೆ. ಅಕ್ಟೋಬರ್ 22ರಂದು ಭಾನುವಾರ ಭಾರತ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಮುನ್ನ ಭಾರತ ತಂಡಕ್ಕೆ ಹಿನ್ನಡೆಯಾಗಿದೆ. ಅಕ್ಟೋಬರ್ 19 ರಂದು ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಪ್ರಮುಖ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗೊಂಡರು, ಕೇವಲ ಮೂರು ಎಸೆತಗಳನ್ನು ಬೌಲಿಂಗ್ ಮಾಡಿದ ಅವರು, ಎಡ ಪಾದ ತಿರುಚಿದ್ದರಿಂದ ಮೈದಾನದಿಂದ ಹೊರನಡೆದರು.

9ನೇ ಓವರ್ ನಲ್ಲಿ ಬೌಲಿಂಗ್ ಮಾಡಲು ಬಂದ ಹಾರ್ದಿಕ್ ಪಾಂಡ್ಯ, ಫಾಲೋ-ಥ್ರೂ ಸಮಯದಲ್ಲಿ ಅವರು ತಮ್ಮ ಕಾಲಿನಿಂದ ಚೆಂಡನ್ನು ನಿಲ್ಲಿಸಲು ಪ್ರಯತ್ನಿಸಿದಾಗ ಗಾಯಗೊಂಡರು. ನಂತರ ನೋವಿನಿಂದ ಬಳಲಿದ ಅವರು, ಸಹಾಯಕರ ನೆರವಿನಿಂದ ಮೈದಾನದಿಂದ ಹೊರನಡೆದರೆ, ವಿರಾಟ್ ಕೊಹ್ಲಿ ಅಂತಿಮವಾಗಿ ಆ ಓವರ್ ಪೂರ್ಣಗೊಳಿಸಿದರು.
ಪಾಂಡ್ಯ ಗಾಯದ ಬಗ್ಗೆ ಬಿಸಿಸಿಐ ಮಾಹಿತಿ
ಹಾರ್ದಿಕ್ ಪಾಂಡ್ಯ ಗಾಯದ ಬಗ್ಗೆ ಶುಕ್ರವಾರ ಬಿಸಿಸಿಐ ಮಹತ್ವದ ಮಾಹಿತಿ ನೀಡಿದೆ. ಹಾರ್ದಿಕ್ ಪಾಂಡ್ಯ ಅಕ್ಟೋಬರ್ 22ರಂದು ನಡೆಯುವ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ, ಅವರು ಪುಣೆಯಿಂದ ಭಾರತ ತಂಡದ ಜೊತೆ ಧರ್ಮಶಾಲಾಗೆ ಪ್ರಯಾಣಿಸುತ್ತಿಲ್ಲ ಎಂದು ಹೇಳಿದೆ.
ಅವರು ಚಿಕಿತ್ಸೆ ಪಡೆಯಲಿದ್ದು, ಅಕ್ಟೋಬರ್ 29ರಂದು ಲಕ್ನೋದ ಏಕಾನ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯದ ವೇಳೆಗೆ ತಂಡವನ್ನು ಸೇರಿಕೊಳ್ಳುತ್ತಾರೆ ಎಂದು ಬಿಸಿಸಿಐ ಹೇಳಿದೆ.
ಅವರ ಗಾಯದ ಪ್ರಮಾಣವನ್ನು ನೋಡಿಕೊಂಡು, ಸಂಪೂರ್ಣವಾಗಿ ಫಿಟ್ ಆದರೆ ಮಾತ್ರ ಅಕ್ಟೋಬರ್ 29ರಂದು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಇಲ್ಲವಾದರೆ ಅವರು ಬೆಂಚ್ ಕಾಯಬೇಕಾಗುತ್ತದೆ.
ಭಾರತ ತಂಡದ ಸಮತೋಲನ ಕಾಪಾಡುವಲ್ಲಿ ಹಾರ್ದಿಕ್ ಪಾಂಡ್ಯ ಪ್ರಮುಖ ಆಲ್‌ರೌಂಡರ್ ಆಗಿದ್ದಾರೆ. ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ಕೊಡುಗೆ ನೀಡುತ್ತಿದ್ದು, ಈ ಸಂದರ್ಭದಲ್ಲಿ ಅವರು ಗಾಯಗೊಂಡಿದ್ದು ತಂಡಕ್ಕೆ ಹಿನ್ನಡೆಯಾಗಿದೆ. ಭಾನುವಾರ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಎದುರಿಸುತ್ತಿದ್ದು, ಧರ್ಮಶಾಲಾ ಮೈದಾನದ ಪಿಚ್‌ನಲ್ಲಿ ಹಾರ್ದಿಕ್ ಪಾಂಡ್ಯ ಅತ್ಯುತ್ತಮ ಅಸ್ತ್ರವಾಗುವ ಸಾಧ್ಯತೆ ಇತ್ತು.
ಯಾರಿಗೆ ಸಿಗುತ್ತೆ ಅವಕಾಶ?
ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಮುನ್ನ ಹಾರ್ದಿಕ್ ಪಾಂಡ್ಯ ಗಾಯಗೊಂಡಿರುವ ಕಾರಣ ಯಾರಿಗೆ ಅವಕಾಶ ಸಿಗುತ್ತೆ ಎನ್ನುವ ಕುತೂಹಲ ಇದೆ. ಸೂರ್ಯಕುಮಾರ್ ಯಾದವ್ ಅಥವಾ ಇಶಾನ್ ಕಿಶನ್ ಆಡುವ ಬಳಗದಲ್ಲಿ ಅವಕಾಶ ಪಡೆಯುವ ಸಾಧ್ಯತೆ.
ಪಾಂಡ್ಯ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ಉತ್ತಮ ಆಯ್ಕೆಯಾಗಿದ್ದಾರೆ. ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅವರು ಅರ್ಧಶತಕ ಗಳಿಸಿದ್ದರು, ನಂತರ ಗಿಲ್ ಫಿಟ್ ಆಗಿದ್ದರಿಂದ ಅವರಿಗೆ ಸ್ಥಾನ ಬಿಟ್ಟುಕೊಟ್ಟಿದ್ದರೆ, ಎಡಗೈ ಬ್ಯಾಟರ್ ಆಗಿದ್ದು ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಇದೆ.












Click it and Unblock the Notifications