ವಿರಾಟ್ ಕೊಹ್ಲಿ ಜೀವನಶೈಲಿ ಪಾಲಿಸುವುದನ್ನು ಸಂಜು ಸ್ಯಾಮ್ಸನ್ ದಿಢೀರ್ ನಿಲ್ಲಿಸಿದ್ದೇಕೆ? ಮಹತ್ವದ ಮಾಹಿತಿ ರಿವೀಲ್
Sanju Samson: ಟೀಮ್ ಇಂಡಿಯಾ ಕ್ರಿಕೆಟ್‌ನಲ್ಲಿ ಫಿಟ್‌ಸೆಸ್ ವಿಚಾರಕ್ಕೆ ಬಂದರೆ ಮೊದಲು ಕೇಳಿಬರುವುದೇ ಕಿಂಗ್ ಕೊಹ್ಲಿ ಅವರ ಹೇಸರು. ಯಾಕಂದ್ರೆ ಅವರು ಅಷ್ಟರ ಮಟ್ಟಿಗೆ ಇದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಇದೀಗ ಈ ವಿಚಾರದಲ್ಲಿ ಭಾರತದ ಮತ್ತೋರ್ವ ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್ ವಿರಾಟ್ ಅವರನ್ನು ಅನುಕರಿಸಲು ಹೋಗಿ ಮುಂದೆ ತಮಗಾದ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಇದು ಇದೀಗ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.
ಟೀಮ್ ಇಂಡಿಯಾದ ವಿಕೆಟ್‌ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ತಮ್ಮ ಫಿಟ್‌ನೆಸ್, ಜೀವನಶೈಲಿ ಮತ್ತು ಕ್ರಿಕೆಟ್ ಜರ್ನಿ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ವೈಯಕ್ತಿಕ ಜೀವನಶೈಲಿ ಹಾಗೂ ತರಬೇತಿ ವಿಧಾನಗಳನ್ನು ಅನುಕರಿಸಲು ಹೋಗಿ ತಮಗೆ ಎದುರಾದ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಕೊಹ್ಲಿ ಪಾಲಿಸಲು ಹೋದ ಸಂಜುಗೆ ಆಗಿದ್ದೇನು?
ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಕಠಿಣ ಫಿಟ್‌ನೆಸ್ ಹಾಗೂ ಆಹಾರ ಪದ್ಧತಿಯನ್ನು ಅನುಸರಿಸುವವರಲ್ಲಿ ವಿರಾಟ್ ಕೊಹ್ಲಿ ಪ್ರಮುಖರು. ಕೊಹ್ಲಿಯವರ ಈ ಅಗಾಧ ಶಿಸ್ತು ಮತ್ತು ಫಿಟ್‌ನೆಸ್ ಹಂತವನ್ನು ಕಂಡು ಪ್ರೇರಿತರಾದ ಸಂಜು ಸ್ಯಾಮ್ಸನ್ ಅವರು ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಕೊಹ್ಲಿ ಅವರಂತೆಯೇ ಕಟ್ಟುನಿಟ್ಟಿನ ಆಹಾರ ಕ್ರಮ, ಜೀವನಶೈಲಿ ಹಾಗೂ ತರಬೇತಿ ದಿನಚರಿಯನ್ನು ಅನುಸರಿಸಲು ಪ್ರಯತ್ನಿಸಿದ್ದರು.
ಆದರೆ ಕೆಲವು ದಿನಗಳ ಕಾಲ ಈ ಜೀವನಶೈಲಿಯನ್ನು ಅನುಕರಿಸಿದ ನಂತರ ಸಂಜು ಅವರಿಗೆ ಒಂದು ಮಹತ್ವದ ಸತ್ಯದ ಅರಿವಾಯಿತು. ವಿರಾಟ್ ಕೊಹ್ಲಿ ಅನುಸರಿಸುವ ಕಟ್ಟುನಿಟ್ಟಿನ ಆಹಾರ ಹಾಗೂ ಕಠಿಣ ವ್ಯಾಯಾಮದ ಪದ್ಧತಿ ಪ್ರತಿಯೊಬ್ಬರ ದೇಹದ ಪ್ರಕೃತಿಗೆ ಸೂಕ್ತ ಆಗುವುದಿಲ್ಲ ಎಂಬುದು ಅವರಿಗೆ ಸ್ಪಷ್ಟವಾಯಿತು. ಈ ಕುರಿತು ಅವರು ಮನದಾಳದ ಮಾತನ್ನ ಹಂಚಿಕೊಂಡಿದ್ದಾರೆ.
'ಪ್ರತಿಯೊಬ್ಬರ ದೇಹದ ಸ್ಥಿತಿ, ಆಹಾರ, ಜೀವನಶೈಲಿ ವಿಭಿನ್ನ'
ಈ ಕುರಿತು ಮಾತನಾಡಿದ ಸಂಜು ಸ್ಯಾಮ್ಸನ್, 'ವಿರಾಟ್ ಭಾಯ್ ಅವರ ಕಟ್ಟುನಿಟ್ಟಿನ ಆಹಾರ ಕ್ರಮ ಮತ್ತು ಜೀವನಶೈಲಿ ಅಸಾಧಾರಣವಾದದ್ದು. ಅದನ್ನು ಕಂಡು ನಾನು ಕೂಡ ಅವರಂತೆಯೇ ಪಾಲಿಸಲು ಪ್ರಯತ್ನಿಸಿದೆ. ಆದರೆ ಶೀಘ್ರದಲ್ಲೇ ನನಗೆ ಅರ್ಥ ಆಗಿದ್ದೇನೆಂದರೆ ಅವರ ದೇಹದ ಅಗತ್ಯತೆಗಳು ಬೇರೆ, ನನ್ನ ದೇಹದ ಸ್ಪಂದನೆ ಬೇರೆ. ಒಬ್ಬರಿಗೆ ಸೆಟ್ ಆಗುವ ಲೈಫ್‌ಸ್ಟೈಲ್ ಇನ್ನೊಬ್ಬರಿಗೆ ಸಂಪೂರ್ಣವಾಗಿ ಹೊಂದಾಣಿಕೆ ಆಗಬೇಕೆಂದೇನಿಲ್ಲ,' ಎಂದು ಹೇಳಿದ್ದಾರೆ.
ಎಚ್ಚೆತ್ತುಕೊಂಡ ಸಂಜು ಮಾಡಿದ್ದೇನು ಗೊತ್ತಾ?
'ಕಟ್ಟುನಿಟ್ಟಿನ ಜೀವನಶೈಲಿ ತಮ್ಮ ನೈಸರ್ಗಿಕ ಆಟದ ಶೈಲಿ ಮತ್ತು ದೇಹದ ಶಕ್ತಿಯ ಮೇಲೆಯೂ ಪರಿಣಾಮ ಬೀರುತ್ತಿರುವುದನ್ನು ಮನಗಂಡ ನಾನು ಕೊಹ್ಲಿ ಅವರ ಶೈಲಿಯನ್ನು ಅನುಕರಿಸುವುದನ್ನು ನಿಲ್ಲಿಸಿದೆ,' ಎಂದು ಹೇಳಿದ್ದಾರೆ. ಬಳಿಕ ನನ್ನ ದೇಹದ ಸ್ಥಿತಿ, ದಿನನಿತ್ಯದ ಅಗತ್ಯತೆ, ಕ್ರಿಕೆಟ್‌ಗೆ ಸೂಕ್ತ ಆಗುವಂತಹ ಹೊಸ ಫಿಟ್‌ನೆಸ್ ಮತ್ತು ಆಹಾರ ಪದ್ಧತಿಯನ್ನು ಕಂಡುಕೊಂಡೆ. ಈ ಶಿಸ್ತನ್ನ ಮೈಗೂಡಿಸಿಕೊಂಡ ನಂತರ ಮಾನಸಿಕ ಸ್ಥಿರತೆ ಮತ್ತು ಮೈದಾನದ ಪ್ರದರ್ಶನದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂತು,' ಎಂದು ತಿಳಿಸಿದ್ದಾರೆ.
ಒಬ್ಬರ ಸಾಧನೆಯನ್ನು ಗೌರವಿಸುವುದು ಮುಖ್ಯ. ಆದರೂ ಪ್ರತಿಯೊಬ್ಬ ಕ್ರೀಡಾಪಟು ತನ್ನದೇ ಆದ ವಿಶಿಷ್ಟ ದೈಹಿಕ ಸಾಮರ್ಥ್ಯಕ್ಕೆ ತಕ್ಕಂತೆ ಹೆಜ್ಜೆ ಇಡಬೇಕು ಎಂಬುದಕ್ಕೆ ಸಂಜು ಸ್ಯಾಮ್ಸನ್ ಅವರ ಈ ಅನುಭವ ಒಂದು ಉತ್ತಮ ಉದಾಹರಣೆ ಆಗಿದೆ ಎಂದರೆ ತಪ್ಪಾಗಲಾರದು. ಹಾಗಂತ ಅವರು ವಿರಾಟ್ ಕೊಹ್ಲಿ ಅವರನ್ನೇನು ಬೈದಿಲ್ಲ, ಬದಲಾಗಿ ಅಷ್ಟು ಕಟ್ಟುನಿಟ್ಟಾಗಿ ಜೀವನಶೈಲಿಯನ್ನ ಪಾಲಿಸುವುದು ತುಂಬಾ ಕಷ್ಟ.. ಅದು ಅವರಿಗೊಬ್ಬರಿಗೆ ಸಾಧ್ಯ ಎನ್ನುವ ರೀತಿಯಲ್ಲಿ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.


Click it and Unblock the Notifications
